ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಭಾರ್ಗವಿ LL.B’ ತನ್ನ ರೋಚಕ ಕಥಾಹಂದರದಿಂದ ವೀಕ್ಷಕರನ್ನು ಸೆಳೆಯುತ್ತಿದೆ. ಇದೀಗ, ಧಾರಾವಾಹಿಯ ಇತ್ತೀಚಿನ ಪ್ರೋಮೋದಲ್ಲಿ ಭಾರ್ಗವಿಯ ಜೀವಕ್ಕೆ ಅಪಾಯ ಒಡ್ಡಿರುವ ಕೇಡಿಗಳ ಚಕ್ರವ್ಯೂಹದಿಂದ ಅವಳನ್ನು ಕಾಪಾಡಲು ವಿಶೇಷ ಅತಿಥಿಯ ಎಂಟ್ರಿಯಾಗಿದೆ. ಆ ವಿಶೇಷ ಅತಿಥಿ ಯಾರು? ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಜನಮನ ಗೆದ್ದ ತಾರೆ. ಊಹಿಸಬಲ್ಲಿರಾ? ಅವರೇ ಗೌತಮಿ ಜಾಧವ್.
‘ಭಾರ್ಗವಿ LL.B’ ಧಾರಾವಾಹಿಯ ಇತ್ತೀಚಿನ ಕಥಾವಳಿಯಲ್ಲಿ ಭಾರ್ಗವಿ ಗಂಭೀರ ಅಪಾಯದಲ್ಲಿದ್ದಾಳೆ. ಕೇಡಿಗಳು ಅವಳ ಪ್ರಾಣಕ್ಕೇ ಕುತ್ತು ತರುವಷ್ಟು ಹತ್ತಿರ ಬಂದಿದ್ದಾರೆ. ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರ್ಗವಿಯನ್ನು ಕಾಪಾಡಲು ಗೌತಮಿ ಜಾಧವ್ ‘ಸಿಂಧೂರಿ’ ಎಂಬ ಪಾತ್ರದಲ್ಲಿ ಎಂಟ್ರಿ ಕೊಟ್ಟಿದ್ದಾರೆ.ಪ್ರೋಮೋದಲ್ಲಿ ಗೌತಮಿ, “ನಾನು ಎಲ್ ಕಾಲಿಟ್ರೂ ಅಲ್ಲೊಂದು ಸೌಂಡ್ ಇರುತ್ತಮ್ಮ” ಎಂದು ವಿಲನ್‌ಗಳಿಗೆ ಮಾಸ್ ಡೈಲಾಗ್‌ನಿಂದ ತಿರುಗೇಟು ನೀಡುವ ದೃಶ್ಯ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಗೌತಮಿ ಜಾಧವ್‌ರ ಈ ವಿಶೇಷ ಅತಿಥಿ ಪಾತ್ರವು ಧಾರಾವಾಹಿಗೆ ಹೊಸ ರೋಮಾಂಚನವನ್ನು ತಂದಿದೆ. ಬಿಗ್ ಬಾಸ್ ಕನ್ನಡದಲ್ಲಿ ತಮ್ಮ ಛಾಪು ಮೂಡಿಸಿದ ಗೌತಮಿ, ತಮ್ಮ ಎಂದಿನ ಶಕ್ತಿಯುತ ಶೈಲಿಯಲ್ಲಿ ‘ಸಿಂಧೂರಿ’ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸುವ ಭರವಸೆ ನೀಡಿದ್ದಾರೆ. ಪ್ರೋಮೋದಲ್ಲಿನ ಅವರ ಪವರ್‌ಫುಲ್ ಡೈಲಾಗ್‌ಗಳು ಮತ್ತು ಧೈರ್ಯದ ನಿಲುವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.