‘ಬೇಲ್’ಗಾಗಿ ಹೊಸ ಅವತಾರ ತಾಳಿದ ಕರುನಾಡ ಚಕ್ರವರ್ತಿ..!

Untitled design 2026 05 17T140804.138

ಕೆವಿಎನ್ ನಿರ್ಮಾಣ ಮಾಡುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಬೇಲ್. ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಕೊನೆಯ ಹಂತದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇದೀಗ ಬೇಲ್ ಸಿನಿಮಾದ ಫಸ್ಟ್ ಲುಕ್ ನ್ನು‌ ಅನಾವರಣ ಮಾಡಿದೆ.

ಬೇಲ್ ಸಿನಿಮಾದಲ್ಲಿ ಶಿವಣ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ದರ್ಶನ ಕೊಟ್ಟಿರುವ ಕರುನಾಡ ಚಕ್ರವರ್ತಿ, ವಿಜಿ ಎಂಬ ಪಾತ್ರವನ್ನು ಪ್ಲೇ ಮಾಡುತ್ತಿದ್ದಾರೆ. ಕೊಡೆ ಹಿಡಿದು ಸಾಕು ನಾಯಿಯ ಜೊತೆ ಶಿವಣ್ಣ ನಡೆದು ಬರುವ ಸ್ಟೈಲ್ ಸಖತ್ ಕಿಕ್ ಕೊಡ್ತಿದೆ. ಶಿವಣ್ಣ ಹಾಗೂ ಸಾಯಿ ಕುಮಾರ್ ಡೈಲಾಗ್ ಜುಗಲ್ ಬಂದಿಯಂತೂ ಸಿನಿಮಾ ಮೇಲಿನ ಥ್ರಿಲ್ ಹೆಚ್ಚು ಮಾಡಿದೆ.

ರಾತ್ರಿ ಜೋರು ಮಳೆಯಲ್ಲಿ ಬೆಂಗಳೂರು ಚಿತ್ರಣ.. ನಿಧಾನವಾಗಿ ನಾಯಿಗೆ ಬಿಸ್ಕೆಟ್ ತಿನ್ನುಸುತ್ತಿರುವ ವಿಜಿ‌ ಪರಿಚಯ ಮಾಡಿಸುತ್ತಾರೆ. ಫೋನ್ ಕರೆ ಸ್ವೀಕರಿಸುವ ವಿಜಿಗೆ ಅತ್ತ ಕಡೆಯಿಂದ ಬಹುಪರಾಕ್ ಶುರುವಾಗುತ್ತದೆ. ನೀನು ಹಚ್ಚಿರುವ ಬೆಂಕಿ ಬರೀ ಊರನ್ನು ಅಲ್ಲ, ದೇಶವನ್ನು ಸುಡುತ್ತಿದೆ ಎಂದು ಅತ್ತ ಕಡೆಯಿಂದ ಧ್ವನಿ ಕೇಳುತ್ತದೆ. ಇದನ್ನೆಲ್ಲಾ ಮಾಡಿ ಹೇಗೆ ಸೈಲೆಂಟ್ ಇದ್ದೀಯಾ ಎಂದಾಗ “ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವಾಗ್ಲೂ ಆಗಲ್ಲ” ಎಂದು ಖಡಕ್ ಡೈಲಾಗ್ ಹೊಡೆದಿದ್ದಾರೆ ಶಿವಣ್ಣ.

ಪವನ್ ಒಡೆಯರ್ ಸತ್ಯಘಟನೆಗಳನ್ನು ಆಧರಿಸಿ ಬೇಲ್ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಇನ್ನು, ಚಿತ್ರದಲ್ಲಿ ಅನುಭವಿ ತಾಂತ್ರಿಕ ವರ್ಗ ಕೆಲಸ ಮಾಡ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವೈದ್ಯ ಛಾಯಾಗ್ರಹಣ ಹಾಗೂ ಗುಣ ಪ್ರೊಡಕ್ಷನ್ ಡಿಸೈನ್ ಹಾಗೂ ಶಶಾಂಕ್ ನಾರಾಯಣ್ ಸಂಕಲನ ಬೇಲ್ ಗಿದೆ.

ಸ್ಟಾರ್ ಹೀರೋಗಳಿಗೆ ವಿಭಿನ್ನ ಬಗೆಯ ಸಿನಿಮಾ ಮಾಡಿರುವ ಪವನ್ ಒಡೆಯರ್ ಈಗ ಶಿವಣ್ಣನಿಗೆ ಒಂದೊಳ್ಳೆ ಕಥೆ ಹೆಣೆದಿದ್ದಾರೆ. ಅದಕ್ಕೆ ಕೆವಿಎನ್ ಸಂಸ್ಥೆಯ ವೆಂಕಟ್ ನಾರಾಯಣ್ ಬಂಡವಾಳ ಹಾಕ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಲ್ ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ.

Exit mobile version