ಹೆಸ್ರು ಮಾತ್ರ ಬ್ಯಾಂಕ್.. ಜೇಬು ಖಾಲಿ ಖಾಲಿ..! 860 ಸಿನಿಮಾ ಮಾಡಿದ್ರೂ ಕಡುಕಷ್ಟದಲ್ಲೇ ಕಣ್ಮುಚ್ಚಿದ್ರು..!

'ಬ್ಯಾಂಕ್' ಕೆಲಸ ಮಾತ್ರ ಬಿಡ್ಬೇಡಿ ಎಂದಿದ್ರಂತೆ ಡಾ. ರಾಜ್ ಕುಮಾರ್..!

111 (20)

ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಬ್ಯಾಂಕ್ ಜನಾರ್ದನ್ ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. 40 ವರ್ಷಗಳ ಕಲಾಸೇವೆ ಮಾಡಿದ ಈ ಕಲಾಸಂತನಿಗೆ ಹೆಸರೇನೋ ಬ್ಯಾಂಕ್ ಜನಾರ್ದನ್. ಆದ್ರೆ ಈತನ ಜೇಬು ಸದಾ ಖಾಲಿ ಖಾಲಿ. 860 ಸಿನಿಮಾ, ನೂರಾರು ನಾಟಕಗಳು, ಹತ್ತಾರು ಸೀರಿಯಲ್‌‌‌ಗಳಲ್ಲಿ ಬಣ್ಣ ಹಚ್ಚಿದ್ದ ಜನಾರ್ದನ್, ಅಭಿನಯದಲ್ಲಿ ಶ್ರೀಮಂತ. ವ್ಯಕ್ತಿತ್ವದಲ್ಲಿ ಹೃದಯ ಶ್ರೀಮಂತ. ಇಷ್ಟಕ್ಕೂ ಇವ್ರ ಜರ್ನಿ ಹೇಗಿತ್ತು..? ಕೊನೆಯ ದಿನಗಳಲ್ಲಿ ಅನುಭವಿಸಿದ ವೇದನೆ ಎಂಥದ್ದು ಅಂತೀರಾ..? ಈ ಸ್ಟೋರಿ ನೋಡಿ.

80 ಹಾಗೂ 90ರ ದಶಕದಲ್ಲಿ ಕನ್ನಡ ಚಿತ್ರರಂಗ ಹಚ್ಚ ಹಸಿರಾಗಿರೋಕೆ ಕಾರಣೀಭೂತರಾದ ಕಲಾವಿದರಲ್ಲಿ ಚಿತ್ರದುರ್ಗದ ಹೊಳಲ್ಕೆರೆ ಮೂಲದ ಬ್ಯಾಂಕ್ ಜನಾರ್ದನ್ ಕೂಡ ಒಬ್ಬರು. ಒಂದಲ್ಲ ಎರಡಲ್ಲ, ಬರೋಬ್ಬರಿ  4 ದಶಕಗಳ ಕಾಲ ಹಗಲಿರುಳು ಕಲಾಸೇವೆಗೆ ತನ್ನನ್ನ ತಾನು ಸಮರ್ಪಿಸಿಕೊಂಡ ಕಲಾ ಸಂತ. ಸಿನಿಮಾ, ಸೀರಿಯಲ್ ಅಲ್ಲದೆ ರಂಗಭೂಮಿಯಲ್ಲೂ ಛಾಪು ಮೂಡಿಸಿರೋ ಇವರ ಜರ್ನಿ ನಿಜಕ್ಕೂ ರೋಚಕ, ರೋಮಾಂಚಕ.

40 ವರ್ಷಗಳ ಸುದೀರ್ಘ ಜರ್ನಿಯಲ್ಲಿ 860ಕ್ಕೂ ಅಧಿಕ ಸಿನಿಮಾಗಳು, ನೂರಾರು ನಾಟಕಗಳು, ಹತ್ತಾರು ಸೀರಿಯಲ್‌‌ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಭಿನ್ನ ವಿಭಿನ್ನ ಪಾತ್ರಗಳಿಂದ ಕೋಟ್ಯಂತರ ಮಂದಿಯನ್ನ ರಂಜಿಸಿದ್ದಾರೆ. ಇಂತಹ ಅಪರೂಪದ ಹಾಗೂ ಅವಿಸ್ಮರಣೀಯ ಕಲಾವಿದ ಬ್ಯಾಂಕ್ ಜನಾರ್ದನ್ ಉಸಿರು ಚೆಲ್ಲಿದ್ದಾರೆ. 76 ವರ್ಷದ ನಟ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ.

20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ದನ್‌ರನ್ನ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಮೂರು ದಿನಗಳ ಹಿಂದೆ ಮನೆಗೆ ಕರೆದೊಯ್ದಿದ್ದರು. ಆದ್ರೆ ಮತ್ತೆ ಉಸಿರಾಟ ತೊಂದರೆಯಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಏಪ್ರಿಲ್ 13ರ ಮಧ್ಯೆರಾತ್ರಿ 2.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಇವರ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದ್ದು, ಸಾಕಷ್ಟು ಮಂದಿ ಕಲಾವಿದರು, ತಂತ್ರಜ್ಞರು ಬಂದು ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು. ರಾಜಕಾರಣಿಗಳು ಕೂಡ ಆತ್ಮಕ್ಕೆ ಶಾಂತಿ ಕೋರಿದ್ರು.

ಒಂದು ಕಾಲದ ಬ್ಯುಸಿಯೆಸ್ಟ್ ಕಲಾವಿದರಾಗಿದ್ದ ಇವರು, ಕಾಶಿನಾಥ್ ಹಾಗೂ ಉಪೇಂದ್ರ ಸಿನಿಮಾಗಳ ಖಾಯಂ ಕಲಾವಿದ. ಬಹುತೇಕ ಎಲ್ಲಾ ಸೀನಿಯರ್ ಆರ್ಟಿಸ್ಟ್‌‌ಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ ಅನುಭವ. ಡಾ ರಾಜ್‌ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್, ಶಶಿಕುಮಾರ್, ಅನಂತ್ ನಾಗ್, ಕಾಶಿನಾಥ್, ಉಪೇಂದ್ರ, ಜಗ್ಗೇಶ್ ಸೇರಿದಂತೆ ಇಂದಿನ ಪೀಳಿಗೆಯ ಸುದೀಪ್, ರಕ್ಷಿತ್ ಶೆಟ್ಟಿ, ಪುನೀತ್ ರಾಜ್‌‌ಕುಮಾರ್ ಸೇರಿದಂತೆ ಹೊಸ ಪ್ರತಿಭೆಗಳ ಜೊತೆಗೂ ಬಣ್ಣ ಹಚ್ಚಿದ್ದರು.

ರಾಜ್ ವಿಷ್ಣು ಅಂಬಿ ಅಂತಹ ದಂತಕಥೆಗಳ ಜೊತೆ ಪಳಗಿದ ಇವರ ಅಂತ್ಯ ಒಂಥರಾ ದುರಂತ ಕಥೆ. ಅದು ಯಾಕೆ ಏನು ಎತ್ತ ಅಂತ ಡಿಟೈಲ್ಡ್ ಆಗಿ ಹೇಳಿಬಿಡ್ತೀವಿ ನೋಡಿ.

ಅಂದಹಾಗೆ ಜನಾರ್ದನ್ ಬ್ಯಾಂಕ್ ಜನಾರ್ದನ್ ಆಗಿದ್ಹೇಗೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದೆ. ಹೊಳಲ್ಕೆರೆಯಲ್ಲಿ ವಿಜಯ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜನಾರ್ದನ್‌ಗೆ ನಾಟಕ ಹಾಗೂ ಸಿನಿಮಾಗಳ ಹುಚ್ಚು. ಬ್ಯಾಂಕ್‌‌ನಲ್ಲಿ ಕೆಲಸ ಮಾಡಿಕೊಂಡೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಜನಾರ್ದನ್‌ರನ್ನ ಕಂಡ ಧೀರೇಂದ್ರ ಗೋಪಾಲ್‌, ಬೆಂಗಳೂರಿಗೆ ಬರಲು ಸೂಚಿಸ್ತಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಪಿತಾಮಹ ಬ್ಯಾಂಕ್ ಜನಾರ್ದನ್‌ರ ಚೊಚ್ಚಲ ಸಿನಿಮಾ.

ಹೊಳಲ್ಕೆರೆಯಿಂದ ಸಿನಿಮಾಗಳ ಶೂಟಿಂಗ್‌ಗೆ ಟ್ರಾವೆಲ್ ಮಾಡೋಕೆ ತ್ರಾಸಾಗಲಿದೆ ಅಂತ ಕನಕಪುರಕ್ಕೆ ಟ್ರಾನ್ಸ್‌‌ಫರ್ ತಗೊಂಡಂತಹ ಜನಾರ್ದನ್, ಬ್ಯಾಂಕ್ ಕೆಲಸ ಮಾಡಿಕೊಂಡೇ ನೂರು ಸಿನಿಮಾಗಳನ್ನ ಮಾಡ್ತಾರೆ. ಕಾಶಿನಾಥ್‌‌ರ ಅಜಗಜಾಂತರ ಚಿತ್ರ ಅವರಿಗೊಂದು ಬ್ರೇಕ್ ನೀಡುತ್ತೆ. ಅದ್ರಲ್ಲೂ ಕಾಶಿನಾಥ್‌‌ರ ಶಿಷ್ಯ ಉಪೇಂದ್ರ ಸಿನಿಮಾಗಳಲ್ಲಿ ಇವರಿಗೆ ಒಂದು ಪಾತ್ರ ಫಿಕ್ಸ್ ಆಗಿರುತ್ತೆ.

ನಟಸಾರ್ವಭೌಮ ಡಾ ರಾಜ್‌ಕುಮಾರ್.. ಯಾವುದೇ ಕಾರಣಕ್ಕೂ ಬ್ಯಾಂಕ್ ಕೆಲಸ ಬಿಡಬೇಡಿ ಅಂತ ಜನಾರ್ದನ್‌ಗೆ ಕಿವಿಮಾತು ಹೇಳಿದ್ದರಂತೆ. ಶ್ ಚಿತ್ರದಲ್ಲಿ ಬೈಯ್ಯೋ ಪಾತ್ರ ಅಣ್ಣಾವ್ರಿಗೆ ಹಿಡಿಸಿತ್ತಂತೆ. ಆದ್ರೆ ಅಣ್ಣಾವ್ರ ಮಾತು ಕೇಳದ ಬ್ಯಾಂಕ್ ಜನಾರ್ದನ್ ಕೆಲಸ ಬಿಟ್ಟು ಎಡವಟ್ ಮಾಡಿಕೊಂಡರು. ಅಭಿನಯದಲ್ಲೇನೋ ಅವರು ಶ್ರೀಮಂತರೇ.. ಆದ್ರೆ ಅರ್ಥಿಕವಾಗಿ ಶ್ರೀಸಾಮಾನ್ಯನಾಗಿಯೇ ಉಳಿದರು. ಆ ಕಾಲದಲ್ಲಿ ಬ್ಯಾಂಕ್ ಮ್ಯಾನೇಜರ್ ಕೆಲಸ ಅಂದ್ರೆ ತಮಾಷೆಯೇ..? ನೀವೇ ಊಹಿಸಿ.

ಆಗಿನ ಕಾಲದಲ್ಲಿ ಕಲಾವಿದರ ಸಂಭಾವನೆ ಅಷ್ಟಕ್ಕಷ್ಟೇ. ಸಿನಿಮಾಗಳ ಬಾಕ್ಸ್ ಆಫೀಸ್ ಕೂಡ ಈಗಿನ ರೀತಿ ನೂರಾರು ಕೋಟಿ ಆಗ್ತಿರಲಿಲ್ಲ. ಹಾಗಾಗಿ ಮಾಡಿದ ಸಿನಿಮಾಗಳ ಸಂಖ್ಯೆಗೆ ಅನುಗುಣವಾಗಿ ಸುಖದ ಸುಪ್ಪೊತ್ತಿಗೆಯ ಜೀವನ ನಡೆಸಲಿಲ್ಲ ಬ್ಯಾಂಕ್ ಜನಾರ್ದನ್. 80 ಹಾಗೂ 90ರ ದಶಕದ ಬಹುಬೇಡಿಕೆ ಕಲಾವಿದನಾಗಿ ಬಹುತೇಕ ಎಲ್ಲಾ ಸ್ಟಾರ್ಸ್‌ ಜೊತೆ ತೆರೆ ಹಂಚಿಕೊಂಡರು. ಮೂರು ಮಂದಿ ಹೆಣ್ಣು ಮಕ್ಕಳು, ಒಬ್ಬ ಮಗನನ್ನ ಸಾಕಿ, ಅವರಿಗೆ ಮದ್ವೆಗಳನ್ನ ಮಾಡಲು ಇವ್ರು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಆರ್‌‌ಟಿ ನಗರದ ಬಳಿ ಇರೋ ಸುಲ್ತಾನ್ ಪಾಳ್ಯದಲ್ಲಿ ಸ್ವಂತ ಮನೆಯೊಂದು ಕಟ್ಟಿಕೊಂಡಿದ್ರು ಬ್ಯಾಂಕ್ ಜನಾರ್ದನ್. ಮಗ ಗುರು ಪ್ರಸಾದ್‌ಗೆ ಬದುಕೋಕೆ ಒಂದು ದಾರಿ ಮಾಡಿಕೊಡೋಣ ಅಂತ ಆರ್‌‌ಟಿ ನಗರದಲ್ಲೇ ಪೋಸ್ಟ್ ಪ್ರೊಡಕ್ಷನ್ ಫಿಲ್ಮ್ ಸ್ಟುಡಿಯೋ ಮಾಡಿದ್ರು ಜನಾರ್ದನ್. ಆದ್ರೆ ಕೊರೋನಾ ಅದನ್ನೂ ಬಡಿದು ಬಾಯಿಗೆ ಹಾಕ್ಕೊಳ್ತು. ಲಾಸ್ ಆಗಿ, ಸ್ಟುಡಿಯೋನ ಮಾರುವಂತಾಯ್ತು.

ಕಲಾವಿದರ ಸಂಘದ ಗೌರವ ಅಧ್ಯಕ್ಷರಾಗಿದ್ದ ಬ್ಯಾಂಕ್ ಜನಾರ್ದನ್‌ಗೆ ಕಲಾವಿದರೇ ಕೈ ಹಿಡಿಯಲಿಲ್ಲ ಅನ್ನೋದು ದುರಂತ. ಹೌದು.. 2023ರ ಸೆಪ್ಟೆಂಬರ್ 26ರಂದು ಲಘು ಹೃದಯಾಘಾತವಾದಾಗ ಬ್ಯಾಂಕ್ ಜನಾರ್ದನ್‌ಗೆ ಸ್ಟಂಟ್ ಅಳವಡಿಸಿ, ಲಕ್ಷಾಂತರ ರೂಪಾಯಿ ಬಿಲ್ ಮಾಡಿತ್ತು ಖಾಸಗಿ ಅಸ್ಪತ್ರೆ. ಅಗ ಬಿಲ್ ಪಾವತಿಸಲು ಕೈ ಜೋಡಿಸಿದ್ದು ಪೋಷಕ ಕಲಾವಿದರ ಸಂಘದ ಸದಸ್ಯರು. ದೂರದರ್ಶನ, ಉದಯ, ಈಟಿವಿ, ಸುವರ್ಣ ಸೇರಿದಂತೆ ಬಹುತೇಕ ಎಲ್ಲಾ ವಾಹಿನಿಗಳ ಸಾಲು ಸಾಲು ಧಾರಾವಾಹಿಗಳಲ್ಲಿ ನಟಸಿದ್ದ ಇವರಿಗೆ ಕೈ ಹಿಡಿದಿದ್ದೇ ಸೀರಿಯಲ್ ಆರ್ಟಿಸ್ಟ್‌‌ಗಳು.

ನಟ ವಿನೋದ್ ರಾಜ್ ಮಾತ್ರ ಯಾರಿಗೂ ತಿಳಿಯದಂತೆ ಬ್ಯಾಂಕ್ ಜನಾರ್ದನ್ ಅವರಿಗೆ ಆರ್ಥಿಕ ಸಹಾಯ ಮಾಡ್ತಾ ಬಂದಿದ್ದರು. ಒಂದ್ಕಡೆ ಸ್ಟಾರ್‌‌ಗಳು ಕರೆದು ಅವಕಾಶಗಳನ್ನ ನೀಡ್ತಿರಲಿಲ್ಲ. ಮತ್ತೊಂದ್ಕಡೆ ಮಾಡೋಕೆ ಬ್ಯಾಂಕ್ ಕೆಲಸ ಕೂಡ ಕಳ್ಕೊಂಡಿದ್ರು. ಹೀಗಾಗಿ ಅವಕಾಶಗಳ ಬಗ್ಗೆ ಬಿಗ್ ಸ್ಟಾರ್ಸ್‌ ಮೇಲೆ ಅಸಮಾಧಾನ ಕೂಡ ಹೊರಹಾಕಿದ್ರು ಬ್ಯಾಂಕ್ ಜನಾರ್ದನ್. ಇವೆಲ್ಲವುಗಳ ಜೊತೆಗೆ ಇತ್ತೀಚೆಗೆ ಅಳಿಯ ಕ್ಯಾನ್ಸರ್‌‌ನಿಂದ ತೀರಿಕೊಂಡಿದ್ದ ಕಾರಣ, ಅದೇ ಕೊರಗಲ್ಲಿದ್ರಂತೆ ಬ್ಯಾಂಕ್ ಜನಾರ್ದನ್.

ಅದೇನೇ ಇರಲಿ, ತನಗೆ ಅಂತ ದೇವರು ಸೃಷ್ಠಿಸಿದ್ದ ಹಾಗೂ ತಾನೇ ಕಂಡುಕೊಂಡಿದ್ದ ಬಂಗಾರದಂತಹ ವೃತ್ತಿ ಬಿಟ್ಟು, ಸಿನಿಮಾ ಪ್ರೌವೃತ್ತಿಯನ್ನೇ ವೃತ್ತಿಯಾಗಿಸಿಕೊಂಡು, ಜೀವಮಾನವನ್ನು ಕಲೆಗಾಗಿ ಮೀಸಲಿಟ್ಟ ಅಪ್ಪಟ ಕಲಾವಿದ ಹೀಗೆ ತಮ್ಮ ಕೊನೆಯ ದಿನಗಳನ್ನ ಬಹಳ ನೋವಿನಿಂದ ಕಳೆದದ್ದು ದುರಂತವೇ ಸರಿ. ಚಿತ್ರರಂಗ ದಯವಿಟ್ಟು ಹಿರಿಯ ಕಲಾವಿದರನ್ನ ಬಳಸಿಕೊಳ್ಳಬೇಕು. ಸಣ್ಣಪುಟ್ಟ ರೋಲ್‌‌ಗಳನ್ನ ಕೊಟ್ಟರೆ ಅವ್ರ ಹೊಟ್ಟೆಪಾಡು ನಡೆಯಲಿದೆ ಅನ್ನೋದು ನಮ್ಮ ವಿನಂತಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version