ದಿ ವೆಯ್ಟ್ ಈಸ್ ಓವರ್.. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನ ಬೇಲ್ ಸಿನಿಮಾ ಪ್ರೇಕ್ಷಕರಿಗೆ ನಿರೀಕ್ಷೆಗೂ ಮೀರಿ ರುಚಿಸುತ್ತಿದೆ. ಶಿವಣ್ಣನ ಜೊತೆ ಬಹುದೊಡ್ಡ ತಾರಾಗಣವಿರೋ ಬೇಲ್ ಮೂಲಕ ಪವನ್ ಒಡೆಯರ್ ಕೂಡ ದೊಡ್ಡ ಮಟ್ಟದಲ್ಲಿ ಗೂಗ್ಲಿ ಮಾಡಿದ್ದಾರೆ. ಹಾಗಾದ್ರೆ ಬೇಲ್ ಸಿನಿಮಾದ ಕಥೆ ಏನು..? ಪ್ರೇಕ್ಷಕಪ್ರಭುಗಳು ಕೊಟ್ಟ ಮಾರ್ಕ್ಸ್ ಎಷ್ಟು..? ಸಿನಿಮಾದಲ್ಲಿ ಯಾಱರ ಪರ್ಫಾಮೆನ್ಸ್ ಹೇಗಿದೆ..? ಪ್ಲಸ್ ಜೊತೆ ಏನೆಲ್ಲಾ ನೆಗೆಟಿವ್ ಪಾಯಿಂಟ್ಸ್ ಇದೆ ಅನ್ನೋದ್ರ ಡಿಟೈಲ್ಡ್ ರಿವ್ಯೂ ರಿಪೋರ್ಟ್ ಇಲ್ಲಿದೆ…
ಚಿತ್ರ: ಬೇಲ್
ನಿರ್ದೇಶನ: ಪವನ್ ಒಡೆಯರ್
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್
ಸಂಗೀತ: ಅಜನೀಶ್ ಲೋಕನಾಥ್
ಸಿನಿಮಾಟೋಗ್ರಫಿ: ವೈದಿ ಎಸ್
ರನ್ ಟೈಂ: 2 ಗಂಟೆ 38 ನಿಮಿಷ 53 ಸೆಕೆಂಡ್
ತಾರಾಗಣ: ಶಿವರಾಜ್‌ಕುಮಾರ್, ಸಾಯಿಕುಮಾರ್, ಜಯರಾಮ್, ಸಂಜನಾ ಆನಂದ್, ದೀಕ್ಷಿತ್ ಶೆಟ್ಟಿ, ಸಂಗೀತಾ, ಗೋಪಾಲಕೃಷ್ಣ ದೇಶಪಾಂಡೆ, ಲೂಸ್‌ಮಾದ ಯೋಗಿ, ರಮೇಶ್ ಇಂದಿರ, ರಮೇಶ್ ಭಟ್, ನಿವೇದಿತಾ ಗೌಡ ಮುಂತಾದವರು.
ಬೇಲ್ ಚಿತ್ರದ ಕಥಾಹಂದರ
ಪಾರ್ಟಿ ಒಂದರಲ್ಲಿ ಬ್ಯುಸಿನೆಸ್‌ಮ್ಯಾನ್ ಶಿಂದೆ ತನ್ನ ಒಡಹುಟ್ಟಿದ ಸಹೋದರ ಸೂರಜ್ ಶಿಂದೆಗೆ ಬೇಲ್ ಕೊಡಿಸಿದ ವಕೀಲ ರಾಜಶೇಖರ್‌ಗೆ ಒಂದು ದುಬಾರಿ BMW ಕಾರ್‌ನ ಗಿಫ್ಟ್ ಮಾಡ್ತಾರೆ. ಆದ್ರೂ ಸಹ ಅದೇ ಪಾರ್ಟಿ ವೇಳೆ ಶಾರ್ಪ್ ಶೂಟರ್‌ನಿಂದ ಸೂರಜ್ ಶಿಂದೆ ಹೆಣ ಉರುಳುತ್ತೆ. ಅದರೊಟ್ಟಿಗೆ ಆತನ ಸ್ನೇಹಿತರ ತಲೆಗಳೂ ಉರುಳುತ್ತೆ. ಸೀನ್ ಕಟ್ ಮಾಡಿದ್ರೆ ಮುಂಬೈ ತಾಜ್ ಅಟ್ಯಾಕ್ ರೀತಿಯ ಪಂಚತಾರಾ ಹೋಟೆಲ್ ಮೇಲೆ ಟೆರರಿಸ್ಟ್‌ಗಳ ದಾಳಿ ನಡೆಯುತ್ತೆ. ಅದ್ರಲ್ಲಿ ನಾಯಕನಟ, IPS ಆಫೀಸರ್ ಮಗಳು ಕೃತಿ ಕೂಡ ಸಾವನ್ನಪ್ಪುತ್ತಾಳೆ. ಅದ್ರ ರೂವಾರಿ ಸಾಜಿದ್ ಖುರೇಷಿಗೂ ಬೇಲ್ ಆಗಿ ಆತನೂ ಹೊರಗೆ ಬಂದು, ನೇಪಾಳ ಸೇರಿಕೊಳ್ಳೋ ಪ್ರಯತ್ನ ಮಾಡ್ತಾನೆ. ಇವೆಲ್ಲದರ ನಡುವೆ ಮಿನಿಸ್ಟರ್ ಮಗಳನ್ನ ಮದ್ವೆ ಆಗಿರೋ ಹೀರೋ, IPS ಆಫೀಸರ್ ವಿಜಯ್, ಕಮಿಷನರ್ ಹುದ್ದೆಯಿಂದ ನಿವೃತ್ತಿ ಕೂಡ ಹೊಂದುತ್ತಾರೆ.
ಹೀರೋ ವಿಜಯ್ ತನ್ನ ರಿಟೈರ್ಮೆಂಟ್ ದಿನ ಆತ್ಮೀಯ ಗೆಳೆಯರುಗಳಾದ ರಿಟೈರ್ಡ್ ಜಡ್ಜ್ ಆಲಿ, ರಿಟೈರ್ಡ್ ಸೈಂಟಿಸ್ಟ್ ರಾಬರ್ಟ್ ಅನ್ನೋ ಗೆಳೆಯರ ಜೊತೆ ಕೂತು ಪಾರ್ಟಿ ಮಾಡ್ತಾರೆ. ಆಗ ಬೇಲ್ ಪಡೆದು ಹೊರಬಂದು ರಾಜರೋಷವಾಗಿ ಓಡಾಡೋ ಕ್ರಿಮಿನಲ್ಸ್‌ನ ಕಂಡು ಆಕ್ರೋಶ ವ್ಯಕ್ತಪಡಿಸ್ತಾರೆ. ಈ ಪ್ರಪಂಚದಲ್ಲಿ ಬರೀ ಲಾ ಅಷ್ಟೇ ಇದೆ. ಆದ್ರೆ ಜಸ್ಟೀಸ್ ಮಾತ್ರ ಮುಂದಿನ ಪ್ರಪಂಚದಲ್ಲಿ ಸಿಗುತ್ತೆ ಅಂತ ಬೇಸರ ಪಡ್ತಾರೆ ವಿಜಯ್. ಹಾರ್ಟ್ ಬ್ಲಾಕೇಜ್ ಆಗಿ ಆಸ್ಪತ್ರೆ ಸೇರುವ ವಿಜಯ್, ಅಲ್ಲಿಂದ ನೇರವಾಗಿ ಹಿಮಾಚಲ್‌ಗೆ ಗೆಳೆಯರ ಜೊತೆ ಹಾರುತ್ತಾರೆ. ಅಲ್ಲಿಂದ ಸಾಲು ಸಾಲು ಸರಣಿ ಕೊಲೆಗಳು. ಅದ್ರಲ್ಲೂ ಬೇಲ್ ಪಡೆದು ಹೊರಬಂದವರೇ ಸಾಯ್ತಿರ್ತಾರೆ. ಯಾರು ಸಾಯಿಸ್ತಾರೆ..? ಯಾಕೆ ಸಾಯಿಸ್ತಾರೆ..? ಹೇಗೆ ಸಾಯಿಸ್ತಾರೆ..? ಹಾಗಾದ್ರೆ ಪೊಲೀಸ್ ವ್ಯವಸ್ಥೆ ಏನು ಮಾಡ್ತಿರುತ್ತೆ..? ಇವೇ ಮೊದಲಾದ ವಿಷಯಗಳಿಂದ ಬೇಲ್ ಸಿನಿಮಾ ಸಾಗುತ್ತೆ.
ಬೇಲ್ ಆರ್ಟಿಸ್ಟ್ ಪರ್ಫಾಮೆನ್ಸ್
- ಇನ್ಸ್‌ಪೆಕ್ಟರ್ ವಿಕ್ರಮ್ ಕಾಮಿಡಿ ಟೈಂ.. ಖಡಕ್ ಕಾಪ್ ಶಿವಣ್ಣ
- ಅಮ್ಮೋರ ಗಂಡನಲ್ಲ ಶಿವಣ್ಣ.. ಎಮೋಷನ್ ಜೊತೆ ಆ್ಯಕ್ಷನ್..!
ಈ ಸಿನಿಮಾದಲ್ಲಿ ಮುಗಿಲೆತ್ತರ ಬೆಳೆದಿರೋ ಮಗಳ ತಂದೆಯಾಗಿ, ರಿಟೈರ್ಡ್ ಕಮಿಷನರ್ ಆಗಿ ಶಿವಣ್ಣ ಕಾಣಸಿಗುತ್ತಾರೆ. ಆ ಸಾಲ್ಟ್ & ಪೆಪ್ಪರ್ ಲುಕ್‌ನಲ್ಲಿ ಕಿಕ್ ಕೊಡೋದ್ರ ಜೊತೆಗೆ ಹೊಸರಗಿನ ಪ್ರಪಂಚಕ್ಕೆ ಆತ ಅಮ್ಮೋರ ಗಂಡ. ಆದ್ರೆ ಆತ ಒಬ್ಬ ಅದ್ಭುತ ತಂದೆ, ಗಂಡ ಕೂಡ ಹೌದು. ಅಷ್ಟೇ ಅಲ್ಲ.. IPS ಆಫೀಸರ್ ಆಗಿ ಸಾಮಾಜಿಕ ಬದ್ಧತೆ ಇರೋ ಸೂಪರ್ ಕಾಪ್ ಕೂಡ ಹೌದು. ಶಿವಣ್ಣನ ಎಜರ್ನಿ ಹಾಗೂ ವಯಸ್ಸಿಗೆ ತಕ್ಕನಾದ ಪಾತ್ರ. ತಂದೆ-ಮಗಳ ಎಮೋಷನ್ ಜೊತೆ ವೆರೈಟಿ ಆಫ್ ಆ್ಯಕ್ಷನ್ ಕೂಡ ಇಂಪ್ರೆಸ್ಸೀವ್ ಆಗಿದೆ.
- ಕಣ್ಣಿಗೆ ಕಾಣಿಸೋ 3 ಸಿಂಹ ಶಿವಣ್ಣ-ಸಾಯಿ-ಜಯರಾಮ್
- ದೀಕ್ಷಿತ್-ಲೂಸ್‌ಮಾದ ಯೋಗಿ ರೌಡಿ-ಪೊಲೀಸ್ ಆಟ..!
ನಿವೃತ್ತ ನ್ಯಾಯಮೂರ್ತಿ ಆಲಿ ಪಾತ್ರದಲ್ಲಿ ಸಾಯಿಕುಮಾರ್ ಹಾಗೂ ನಿವೃತ್ತ ಸೈಂಟಿಸ್ಟ್ ರಾಬರ್ಟ್ ಪಾತ್ರದಲ್ಲಿ ನಟ ಜಯರಾಮ್ ಹೀರೋ ಪಾತ್ರಧಾರಿ ಶಿವಣ್ಣಗೆ ಸಾಥ್ ನೀಡಿದ್ದಾರೆ. ಇವರುಗಳ ಫ್ರೆಂಡ್ಶಿಪ್, ಧರ್ಮಗಳನ್ನ ಮೀರಿದ ಬಂಧ ಹಾಗೂ ಸಾಮಾಜಿಕ ಬದ್ಧತೆ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತೆ. ಜಯರಾಮ್ ಹಾಗೂ ಸಾಯಿಕುಮಾರ್ ಕಾಮಿಡಿ ಟೈಂ ಸಖತ್ ಕಿಕ್ ಕೊಡಲಿದ್ದು, ಸೀರಿಯಸ್ ಕಥೆ ನಡುವೆ ಅದು ನೋಡುಗರ ಮುಖದಲ್ಲಿ ನಗು ತರಿಸುತ್ತೆ.
IPS ದಯಾನಂದ್ ಆಗಿ ದೀಕ್ಷಿತ್ ಶೆಟ್ಟಿ, ಯೋಗಿ ರೆಡ್ಡಿ ಆಗಿ ಲೂಸ್‌ಮಾದ ಯೋಗಿ ಪಾತ್ರಗಳು ಗಮನ ಸೆಳೆಯುತ್ತವೆ. ಯೋಗಿ ಪಾತ್ರ ಜಾಸ್ತಿ ಹೊತ್ತು ಇರದಿದ್ರೂ, ಶಿಳ್ಳೆ, ಚಪ್ಪಾಳೆ ಗಿಟ್ಟಿಸುವಂತಿದೆ. ಮಾಜಿ ಮಿನಿಸ್ಟರ್ ಆಗಿ ಗೋಪಾಲಕೃಷ್ಣ ದೇಶಪಾಂಡೆ, ನ್ಯೂಸ್ ಪೇಪರ್ ಎಡಿಟರ್ ಆಗಿ ರಮೇಶ್ ಇಂದಿರ, ಶಿವಣ್ಣನ ತಮ್ಮನ ಮಗಳಾಗಿ ಸಂಜನಾ ಆನಂದ್, ಪತ್ನಿಯಾಗಿ ಸಂಗೀತಾ ಕೂಡ ಪಾತ್ರಗಳನ್ನ ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ.
ಬೇಲ್ ಸಿನಿಮಾದ ಪ್ಲಸ್ ಪಾಯಿಂಟ್ಸ್
- ಪವನ್ ಒಡೆಯರ್ ಕಥೆ, ನಿರ್ದೇಶನ & ನಿರೂಪಣೆ
- ಶಿವಣ್ಣ-ಸಾಯಿಕುಮಾರ್-ಜಯರಾಮ್ ಕಾಂಬೋ
- ದೀಕ್ಷಿತ್ & ಲೂಸ್‌ಮಾದ ಸ್ಕ್ರೀನ್ ಪ್ರೆಸೆನ್ಸ್
- ಟೆಕ್ನಿಕಲ್ & ಲಾಜಿಕಲ್ ಎಕ್ಸಿಕ್ಯೂಷನ್
- ರಿಚ್ ಪ್ರೊಡಕ್ಷನ್
- ಸಮಾಜದ ಪ್ರತಿ ವರ್ಗಕ್ಕೂ ಕನೆಕ್ಟ್ ಆಗುವ ವಿಷಯಗಳು
- ಅಜನೀಶ್ ಸಂಗೀತ & ಹಿನ್ನೆಲೆ ಸಂಗೀತ
- ವೈದಿ ಕ್ಯಾಮೆರಾ ಕೈಚಳಕ
- ನಿವೇದಿತಾ ಗೌಡ ಗ್ಲಾಮರ್
- ಅಶ್ಲೀಲತೆ ಇಲ್ಲದ ಬರವಣಿಗೆ
ಬೇಲ್ ಸಿನಿಮಾದ ಮೈನಸ್ ಪಾಯಿಂಟ್ಸ್
ರಾಜಕಾರಣ, ಟೆರರಿಸಂ, ಪತ್ರಿಕೋದ್ಯಮ, ಲಾ & ಆರ್ಡರ್, ಸೈನ್ಸ್, ಫ್ಯಾಮಿಲಿ ಎಮೋಷನ್ಸ್, ಫ್ರೆಂಡ್ಶಿಪ್, ಕನ್ನಡಾಭಿಮಾನ.. ಹೀಗೆ ಸಾಕಷ್ಟು ವಿಷಯಗಳ ಮೇಲೆ ಬೇಲ್ ಸಿನಿಮಾ ಬೆಳಕು ಚೆಲ್ಲಿದೆ. ಬೇಲ್ ಪಡೆದು ಹೊರಗೆ ಬರುವ ಅಪರಾಧಿಗಳ ಮೇಲೆ ಮಾತ್ರ ಇದು ಫೋಕಸ್ ಆಗಿದ್ದಿದ್ರೆ ಮತ್ತಷ್ಟು ಇಂಪ್ರೆಸ್ಸೀವ್ ಆಗಿರ್ತಿತ್ತು. ಸಿಕ್ಕಾಪಟ್ಟೆ ಕಲಾವಿದರುಗಳು ಇರೋದ್ರಿಂದ ಎಲ್ಲರ ಸ್ಕ್ರೀನ್ ಸ್ಪೇಸ್ ಕಮ್ಮಿ ಆಯ್ತು ಅನಿಸಲಿದೆ. ಅಲ್ಲದೆ, ಮೊದಲಾರ್ಧ ಮುಂದೆ ಏನಾಗುತ್ತೆ ಅನ್ನೋದನ್ನ ನಿರೀಕ್ಷಿಸಬಹುದಾದ ಅಂಶಗಳಿಂದ ಕೂಡಿದೆ. ಉಳಿದಂತೆ ಬೇಲ್ ಅದ್ಭುತ ಮೂವಿ. ಬಹುಶಃ ಕಥೆಗೆ ಪೂರಕವಾಗಿ ಸಮಾಜ, ರಾಜಕೀಯ, ಪೊಲೀಸ್ ಹಾಗೂ ಲಾ & ಆರ್ಡರ್ ವ್ಯವಸ್ಥೆ ಎಲ್ಲವನ್ನ ಒಗ್ಗೂಡಿಸುವ ನಿಟ್ಟಿನಲ್ಲಿ ನಿರ್ದೇಶಕರು ಈ ಫಾರ್ಮುಲಾ ಅಪ್ಲೈ ಮಾಡಿದ್ದಾರೆ ಅನಿಸಲಿದೆ.
ಬೇಲ್‌ಗೆ ಗ್ಯಾರಂಟಿ ನ್ಯೂಸ್ ರಿವ್ಯೂ ರೇಟಿಂಗ್: 3/5
ಗೂಗ್ಲಿ, ರಣವಿಕ್ರಮದಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ನಿರ್ದೇಶಕ ಪವನ್ ಒಡೆಯರ್ ಈ ಚಿತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಅವ್ರ ಸ್ಟ್ರೆಂಥ್ ಬರವಣಿಗೆ ಅನ್ನೋದು ಇದ್ರಿಂದ ಗೊತ್ತಾಗ್ತಿದೆ. ಸಾಕಷ್ಟು ನೈಜ ಘಟನೆಗಳನ್ನ ಇಟ್ಕೊಂಡು ಈ ಸಿನಿಮಾದ ಕಥೆ ಹೆಣೆದಿರೋದು ಸ್ಪಷ್ಟವಾಗುತ್ತೆ. ಅದ್ರಲ್ಲೂ ಒಡೆಯರ್ ಸೈನ್ಸ್ ವಿಷಯಗಳನ್ನ ಸಿಕ್ಕಾಪಟ್ಟೆ ರಿಸರ್ಚ್ ಮಾಡಿ ಈ ಕಥೆಯನ್ನ ಸೈಂಟಿಫಿಕಲಿ ಹಾಗೂ ಟೆಕ್ನಿಕಲಿ ಬ್ರಿಲಿಯೆಂಟ್ ಆಗಿ ಎಕ್ಸಿಕ್ಯೂಟ್ ಮಾಡಿದ್ದಾರೆ. ಡೈಲಾಗ್ಸ್ ಕೂಡ ಸಭ್ಯ ಹಾಗೂ ಅರ್ಥಪೂರ್ಣವಾಗಿದ್ದು, ಮಕ್ಕಳಿಂದ ಮುದುಕರ ತನಕ ಇಡೀ ಫ್ಯಾಮಿಲಿ ಕೂತು ನೋಡುವಂತಹ ಕೌಟುಂಬಿಕ ಚಿತ್ರವಾಗಿ ಸಿನಿಮಾ ಹೊರಹೊಮ್ಮಿದೆ. ಅದೇ ಕಾರಣದಿಂದ ಚಿತ್ರಪ್ರೇಮಿಗಳು ಮುಕ್ತ ಮನಸ್ಸಿನಿಂದ ಸಿನಿಮಾನ ಹಾಡಿ ಹೊಗಳುತ್ತಿದ್ದಾರೆ. ರಾಜ್ಯದಾದ್ಯಂತ ಎಲ್ಲೆಡೆ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿರೋದು ವಿಶೇಷ.
ಅಂದಹಾಗೆ ಕೆವಿಎನ್‌ಗೆ ಹಿಟ್ ಸಿನಿಮಾ ಬೇಕು ಅಂತ ಜನ ಅಂತಿದ್ರು.. ಆ ಮಾತು ಹಿಮಾಚಲದಲ್ಲಿರೋ ಆ ದೇವಿ ಜೈ ಬಗಲಾಮುಖಿ ಮಾತಾಗೆ ಕೇಳಿಸಿದಂತಿದೆ. ಹಾಗಾಗಿ ಬೇಲ್‌ನಿಂದ ಆ ವಿಜಯಪರ್ವ ಶುರುವಾಗಿದೆ. ಒಡೆಯರ್ ಎಂತಹ ಕಿಲಾಡಿ ಅಂದ್ರೆ, ಇಂತಹ ಅದ್ಭುತ ಕಥೆಗೆ ಅಷ್ಟೇ ಅತ್ಯದ್ಭುತ ಕಲಾವಿದರನ್ನ ಕಾಸ್ಟ್ ಮಾಡೋ ಮೂಲಕ ಅಲ್ಲೇ ಅರ್ಧ ಗೆದ್ದಿದ್ದಾರೆ. ಈ ಚಿತ್ರ ನಮ್ಮ ಕಾನೂನು ವ್ಯವಸ್ಥೆಯ ಕಣ್ತೆರೆಸುವ ಕಾರ್ಯ ಮಾಡಿದ್ರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದು ಇರಲಾರದು. ಒಟ್ಟಾರೆ ಬೇಲ್ ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಆಗಿ ಹೊರಹೊಮ್ಮಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
