ಬೆಂಗಳೂರು, ಜುಲೈ 14, 2025: ಕನ್ನಡ ಚಿತ್ರರಂಗದ ‘ಅಭಿನಯ ಸರಸ್ವತಿ’ ಖ್ಯಾತಿಯ ಹಿರಿಯ ಬಹುಭಾಷಾ ನಟಿ ಬಿ. ಸರೋಜಾ ದೇವಿ (87) ಅವರು ಇಂದು ಬೆಳಗ್ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯರಿಂದ ಸಂತಾಪ ಸಂದೇಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಎಕ್ಸ್‌ನಲ್ಲಿ ಶೋಕ ಸಂದೇಶವನ್ನು ಹಂಚಿಕೊಂಡಿದ್ದಾರೆ. “ಕನ್ನಡದ ಹಿರಿಯ ನಟಿ ಬಿ. ಸರೋಜಾ ದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕನ್ನಡ, ತಮಿಳು, ತೆಲುಗು, ಮತ್ತು ಹಿಂದಿ ಚಿತ್ರರಂಗದಲ್ಲಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ‘ಅಭಿನಯ ಸರಸ್ವತಿ’ ಎಂದೇ ಖ್ಯಾತರಾಗಿದ್ದರು. ‘ಕಿತ್ತೂರು ಚೆನ್ನಮ್ಮ’, ‘ಬಬ್ರುವಾಹನ’, ‘ಅಣ್ಣತಂಗಿ’ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಾಭಿರುಚಿಯ ಚಿತ್ರಗಳ ಮೂಲಕ ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು,” ಎಂದು ಅವರು ತಿಳಿಸಿದ್ದಾರೆ.
ಡಿಕೆ ಶಿವಕುಮಾರ್‌ರಿಂದ ಸಂತಾಪ ಸಂದೇಶ
ಡಿ.ಕೆ. ಶಿವಕುಮಾರ್ ಅವರು ಎಕ್ಸ್‌ನಲ್ಲಿ ತಮ್ಮ ಶೋಕ ಸಂದೇಶವನ್ನು ಹಂಚಿಕೊಂಡಿದ್ದಾರೆ. “ಬಿ. ಸರೋಜಾ ದೇವಿ ಒಬ್ಬ ಹಿರಿಯ ತಾರೆಯಾಗಿದ್ದರು. ನನಗೆ ಅವರು ಬಹಳ ಆತ್ಮೀಯರಾಗಿದ್ದರು. ಸರ್ಕಾರದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರಿಳಿತವಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ,” ಎಂದು ಅವರು ಬರೆದಿದ್ದಾರೆ.
ಸರೋಜಾ ದೇವಿಯ ಸಿನಿಮಾ ಯಾತ್ರೆ
1955ರಲ್ಲಿ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ 17ನೇ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸರೋಜಾ ದೇವಿ, ಆರು ದಶಕಗಳ ಕಾಲ ಕನ್ನಡ, ತಮಿಳು, ತೆಲುಗು, ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಗುರುತಿಸಿಕೊಂಡರು. ‘ಕಿತ್ತೂರು ಚೆನ್ನಮ್ಮ’, ‘ಅಮರಶಿಲ್ಪಿ ಜಕಣಾಚಾರಿ’, ಮತ್ತು ‘ಸ್ಕೂಲ್ ಮಾಸ್ಟರ್’ ಚಿತ್ರಗಳು ಅವರ ಅಭಿನಯದ ವೈವಿಧ್ಯತೆಗೆ ಸಾಕ್ಷಿಯಾಗಿವೆ.
ಡಾ. ರಾಜ್‌ಕುಮಾರ್, ಕಲ್ಯಾಣಕುಮಾರ್ ಮುಂತಾದ ಮೇರು ನಟರೊಂದಿಗೆ ಅವರ ಜೋಡಿ ಗೆಲುವಿನ ಸೂತ್ರವಾಗಿತ್ತು. 2019ರ ‘ನಟ ಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗಿನ ಕಿರು ಪಾತ್ರವು ಅವರ ಕೊನೆಯ ಕನ್ನಡ ಚಿತ್ರವಾಯಿತು.
ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖವಾಗಿದೆ. “ಅಭಿನಯ ಸರಸ್ವತಿ” ಎಂದೇ ಖ್ಯಾತರಾಗಿ ಸುಮಾರು ಏಳು ದಶಕಗಳ ಕಾಲ ಕನ್ನಡ ಚಿತ್ರರಂಗವಷ್ಟೇ ಅಲ್ಲದೇ ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿ ಭಾರತೀಯ ಚಿತ್ರ ರಂಗದ ಶ್ರೇಷ್ಠ ನಟಿಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು.… pic.twitter.com/f30Zy83fUQ
— Basavaraj S Bommai (@BSBommai) July 14, 2025
ಭಾರತೀಯ ಚಿತ್ರರಂಗದ ಅಮರ ನಟಿ ಶ್ರೀಮತಿ ಬಿ. ಸರೋಜಾ ದೇವಿ ಅವರ ಅಗಲಿಕೆಯ ಸುದ್ದಿ ಅತ್ಯಂತ ದುಃಖದಾಯಕ.
ಅವರು ಕನ್ನಡ ಚಿತ್ರರಂಗದ ಕಿರೀಟಮಣಿ. ಜೊತೆಗೆ ತಮಿಳು, ತೆಲುಗು, ಹಿಂದಿ ಚಿತ್ರರಂಗಗಳಲ್ಲಿಯೂ ಅಪಾರ ಪ್ರಶಂಸೆಯನ್ನು ಗಳಿಸಿದ್ದರು.
ಅವರ ಕಲಾ ಜೀವನವು ದೇಶದ ಸಾಂಸ್ಕೃತಿಕ ಪರಂಪರೆಯ ಹೆಮ್ಮೆಯ ಅಧ್ಯಾಯ. ಅವರ ಅಗಲಿಕೆಯಿಂದ ಕನ್ನಡ ಮಾತ್ರವಲ್ಲದೆ… pic.twitter.com/nedsCpuWcX— Dr. C.N. Ashwath Narayan (@drashwathcn) July 14, 2025
ಸರೋಜಾ ದೇವಿ ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ, ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು. ತಮ್ಮ ಪತಿ ಶ್ರೀಹರ್ಷ ಮತ್ತು ತಾಯಿಯ ಹೆಸರಿನಲ್ಲಿ ದೇಣಿಗೆ ಶಿಬಿರಗಳನ್ನು ಆಯೋಜಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
