ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಇತ್ತೀಚಿನ ದಿನಗಳಲ್ಲಿ ಒಟ್ಟಿಗೆ ಘಟಾನುಘಟಿಗಳು ಒಂದೇ ವೇದಿಕೆಯಲ್ಲಿ ಸೇರಿದ ಉದಾಹರಣೆ ಇಲ್ಲ. ‘AVR ಸಿನಿಮ್ಯಾಕ್ಸ್’ ಲೋಗೋ ಲಾಂಚ್ ನಲ್ಲಿ ಇಡೀ ಚಿತ್ರರಂಗವೇ ಒಂದೆಡೆ ಜಮಾಯಿಸಿತ್ತು. ಈ ಕಾರ್ಯಕ್ರಮದಲ್ಲಿ ತಾರೆಯರ ಬೆಂಬಲ ಹೇಗಿತ್ತು..? ವೇದಿಕೆಯಲ್ಲಿ ಜಯಮಾಲಾ, ದೊಡ್ಡಣ್ಣ ಮತ್ತು ನಾಗಾಭರಣ ಅವರು ಆಡಿದ ಆ ಖಾರವಾದ ಮಾತುಗಳೇನು..? ಸ್ಟಾರ್‌ಗಳ ಸಮ್ಮಿಲನದ ಕಂಪ್ಲೀಟ್ ಝಲಕ್ ಇಲ್ಲಿದೆ ನೋಡಿ.
- ತಾರೆಯರ ತಾಕತ್ತು…AVRಗೆ ಭರ್ಜರಿ ಬೆಂಬಲ..!
- ಗ್ಲೋಬಲ್ OTT ವಿರುದ್ಧ ಕನ್ನಡದ ಮಹಾ ಒಗ್ಗಟ್ಟು..!
- 10 ವರ್ಷಗಳ ಹಿಂದೆಯೇ ಆಗಬೇಕಿತ್ತು ನಾಗಾಭರಣ ಅಭಿಪ್ರಾಯ
- ಕನ್ನಡ ಕಂಟೆಂಟ್ಗೆ ಕನ್ನಡದ ವೇದಿಕೆ ಬೇಕೆಂದ ಹಿರಿಯರ ಕರೆ
- ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರ ಪರ ನಿಂತ AVR..!
ನಿರೂಪಕ ಅಕುಲ್ ಬಾಲಾಜಿ ತಮ್ಮದೇ ಹೈ-ವೋಲ್ಟೇಜ್ ಸ್ಟೈಲ್‌ನಲ್ಲಿ ನಡೆಸಿಕೊಟ್ಟ AVR ಸಿನಿಮ್ಯಾಕ್ಸ್‌ನ ಲೋಗೋ ಲಾಂಚ್ ಇವೆಂಟ್ ಭರ್ಜರಿಯಾಗಿ ಸಾಗಿತು. ಹಿರಿಯ ನಟರಾದ ದೊಡ್ಡಣ್ಣ, ಸುಂದರ್ ರಾಜ್,ಮುಖ್ಯಮಂತ್ರಿ ಚಂದ್ರು, ಸುಧಾರಾಣಿ, ತಾರಾ ಅನುರಾಧ, ಗಿರಿಜಾ ಲೋಕೇಶ್, ನಟಿ ಹರ್ಷಿಕಾ ಪೂನಚ್ಚ,ಶ್ರೀನಗರ ಕಿಟ್ಟಿ, ರವಿ ವರ್ಮಾ, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಎಪಿ ಅರ್ಜುನ್, ಶಶಾಂಕ್, ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ಗುರುಕಿರಣ್ ಸೇರಿದಂತೆ ಉದ್ಯಮದ ಇಡೀ ದಂಡೇ ವೇದಿಕೆಯಲ್ಲಿ ಒಂದಾಗಿ ನಿಂತಿದ್ದು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತು.
ವೇದಿಕೆಯಲ್ಲಿ ಮೈಕ್ ಹಿಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ, ಹಿರಿಯ ನಟಿ ಜಯಮಾಲಾ ಓಟಿಟಿಯ ಕರಾಳ ಸತ್ಯವನ್ನು ನೇರವಾಗಿಯೇ ಒಪ್ಪಿಕೊಂಡರು. “OTT ಅಂದರೆ ಒಂದು ಕಡೆ ಭಯ ಆಗುತ್ತದೆ. ಇದರ ಉಪಯೋಗ ನಮಗೆ ಬೇಕಿದ್ದರೂ, ದೊಡ್ಡ ಕಂಪನಿಗಳ ಜಾಲದಲ್ಲಿ ಸಿಲುಕಿ ನಾವು ಬಾಂಡ್ಲಿಯಿಂದ ನೇರವಾಗಿ ಉರಿಯುವ ಬೆಂಕಿಗೆ ಬೀಳಬಾರದು” ಎಂದು AVR ಸಂಸ್ಥೆಗೆ ಅತ್ಯಂತ ಖಡಕ್ ಆಗಿ ಎಚ್ಚರಿಸಿದರು.
ಇನ್ನು ನಿರ್ದೇಶಕ ಟಿ.ಎಸ್. ನಾಗಾಭರಣ ಅತ್ಯಂತ ಕಟುವಾಗಿ ಮಾತನಾಡುತ್ತಾ, “ಇದು ಹತ್ತು ವರ್ಷಗಳ ಹಿಂದೆಯೇ ನಮ್ಮ ಚಿತ್ರರಂಗದಲ್ಲಿ ಆಗಬೇಕಿದ್ದ ಕೆಲಸ. ಮಾರ್ಕೆಟಿಂಗ್‌ನಲ್ಲಿ ನಾವು ತುಂಬಾ ಹಿಂದೆ ಬಿದ್ದಿದ್ದೇವೆ, ಹಾಗಾಗಿ ಈಗ ಬಂದಿರುವ ನೀವು ಡಿಜಿಟಲ್ ಮಾರ್ಕೆಟ್‌ನಲ್ಲಿ ದೊಡ್ಡ ಪ್ರಳಯವನ್ನೇ ಸೃಷ್ಟಿಸಬೇಕು” ಎಂದು ಅರಂವಿಂದ್ ರೆಡ್ಡಿ ತಂಡಕ್ಕೆ ಚಾಲೆಂಜ್ ಹಾಕಿದರು. ಜೊತೆಗೆ, “ಯಾವಾಗ ಕಥೆ ಬರೆಯುವವರಿಗೆ, ನಿರ್ದೇಶಕರಿಗೆ ಹಾಗೂ ತಂತ್ರಜ್ಞರಿಗೆ ಸರಿಯಾದ ಗೌರವ ಮತ್ತು ದುಡ್ಡು ಸಿಗುತ್ತದೆಯೋ, ಆಗ ಮಾತ್ರ ಭಾಷೆ ಉದ್ಧಾರ ಆಗುತ್ತದೆ. ಮೊದಲು ನಟರ ಬೆನ್ನ ಹಿಂದೆ ಇರೋ ಶಕ್ತಿಯನ್ನು ಗುರುತಿಸಿ” ಎಂದು ಈ ವೇದಿಕೆ ಹೊಸಬರಿಗೆ ನ್ಯಾಯ ಒದಗಿಸಲಿ ಎಂದು ಸಾಥ್ ನೀಡಿದರು.
ಹಿರಿಯ ನಟ ದೊಡ್ಡಣ್ಣ ಅತ್ಯಂತ ಭಾವುಕರಾಗಿ, “ಚಿತ್ರರಂಗದಲ್ಲಿ ಅನ್ನ ಹಾಕುವ ನಿರ್ಮಾಪಕನೇ ತಂದೆಗೆ ಸಮಾನ. ಆ ನಿರ್ಮಾಪಕ ಸೋತರೆ ಇಡೀ ಕಲಾವಿದರ ಸಂಕುಲವೇ ಬೀದಿಗೆ ಬರುತ್ತದೆ. ಅರವಿಂದ್ ರೆಡ್ಡಿ ಅವರು ಮುಳುಗುತ್ತಿರುವ ಕನ್ನಡ ಸಿನಿಮಾ ನಿರ್ಮಾಪಕರ ಕೈ ಹಿಡಿದು ಎತ್ತೋ ಸಾಹಸಕ್ಕೆ ಕೈ ಹಾಕಿದ್ದಾರೆ” ಎಂದು ಬೆನ್ನು ತಟ್ಟಿದರು. ಇವರ ಜೊತೆಗೆ ನಿಂತ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮತ್ತು ಸುಂದರ್ ರಾಜ್ ಅವರು, ಕನ್ನಡದ ಅಸ್ಮಿತೆಯನ್ನು ಕಾಪಾಡುವ ಇಂತಹ ದೇಸಿ ಓಟಿಟಿಗಳು ಉದ್ಯಮದ ಆರ್ಥಿಕ ಬೆನ್ನೆಲುಬಾಗಬೇಕು ಎಂದು ಹಾರೈಸಿ ತಮ್ಮ ಪೂರ್ಣ ಬೆಂಬಲ ಘೋಷಿಸಿದರು.
ನಟಿ ಸುಧಾರಾಣಿ, ತಾರಾ ಅನುರಾಧ ಮತ್ತು ಗಿರಿಜಾ ಲೋಕೇಶ್ ಅವರು ಮಾತನಾಡಿ, ಮಹಿಳಾ ಪ್ರಧಾನ ಚಿತ್ರಗಳಿಗೆ ಹಾಗೂ ಸಣ್ಣ ಬಜೆಟ್‌ನ ಕಲಾತ್ಮಕ ಚಿತ್ರಗಳಿಗೆ ಗ್ಲೋಬಲ್ ಓಟಿಟಿಗಳು ವೇದಿಕೆ ಕೊಡುತ್ತಿಲ್ಲ, AVR ಸಿನಿಮ್ಯಾಕ್ಸ್ ಆ ಕೊರತೆಯನ್ನು ನೀಗಿಸಲಿ ಎಂದು ಆಶಿಸಿದರು. ನಟಿ ಹರ್ಷಿಕಾ ಪೂನಚ್ಚ ಅವರು ಈ ಪ್ಲಾಟ್‌ಫಾರ್ಮ್ ಇಂದಿನ ಜನರೇಶನ್‌ಗೆ ಪಕ್ಕಾ ಕನೆಕ್ಟ್ ಆಗುವಂತಿದೆ ಎಂದು ಯೂತ್ ಪರವಾಗಿ ಸಾಥ್ ಕೊಟ್ಟರೆ, ಸಂಗೀತ ನಿರ್ದೇಶಕ ಗುರುಕಿರಣ್ ಅವರು ಇಲ್ಲಿ ಕನ್ನಡ ಮ್ಯೂಸಿಕ್ ಮತ್ತು ರೇಡಿಯೋಗೂ ಅವಕಾಶ ಇರುವುದು ಅದ್ಭುತ ಕಲ್ಪನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಎಪಿ ಅರ್ಜುನ್, ಶಶಾಂಕ್, ಆ್ಯಕ್ಷನ್ ಡೈರೆಕ್ಟರ್ ಥ್ರಿಲ್ಲರ್ ಮಂಜು ಮತ್ತು ನಿರ್ಮಾಪಕ ರಮೇಶ್ ರೆಡ್ಡಿ ಅವರು, ಚಿತ್ರರಂಗದ ತಂತ್ರಜ್ಞರ ಸಂಕಷ್ಟಗಳಿಗೆ ಈ ವೇದಿಕೆ ಮುಕ್ತಿ ನೀಡಲಿ ಎಂದು ಹಾರೈಸಿದರು.
ಕೊನೆಯಲ್ಲಿ ಎಲ್ಲರ ಪ್ರೀತಿಯ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ AVR ಗ್ರೂಪ್ ಸಿಇಒ ಅಭಿಷೇಕ್ ಹಾಗು AVR ಸಿನಿಮ್ಯಾಕ್ಸ್ CEO ಅವಿನಾಶ್ ದೊಡ್ಡ ಸ್ಟಾರ್ ಸಿನಿಮಾಗಳ ಜೊತೆಗೆ ಹೊಸಬರ ಚಿತ್ರಗಳಿಗೂ ಅದ್ದೂರಿ ಮಾರುಕಟ್ಟೆ ಒದಗಿಸುವುದೇ ನಮ್ಮ ಪ್ರಮುಖ ಧೇಯ ಎಂದು ಸಾರಿದರು.
ಸ್ಯಾಂಡಲ್‌ವುಡ್‌ನ ಈ ಒಗ್ಗಟ್ಟಿನ ಬೆಂಬಲದೊಂದಿಗೆ ಅಖಾಡಕ್ಕಿಳಿದಿರುವ ‘AVR ಸಿನಿಮ್ಯಾಕ್ಸ್’ ಮುಂದಿನ ದಿನಗಳಲ್ಲಿ ಜಾಗತಿಕ ದೈತ್ಯರನ್ನು ಹೇಗೆ ಎದುರಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
