ಹೈದರಾಬಾದ್: ಟಾಲಿವುಡ್ ನಟಿ ಮತ್ತು ಬಿಗ್ ಬಾಸ್ ಸೀಸನ್‌ನ ಮಾಜಿ ಸ್ಪರ್ಧಿ ಆಶು ರೆಡ್ಡಿ ವಿರುದ್ಧ ಬರೋಬ್ಬರಿ 9.35 ಕೋಟಿ ರೂಪಾಯಿ ವಂಚನೆಯ ಗಂಭೀರ ಆರೋಪ ಕೇಳಿಬಂದಿದೆ. ಅನಿವಾಸಿ ಭಾರತೀಯ (NRI) ಯುವಕನೊಬ್ಬರು ಸಲ್ಲಿಸಿದ ದೂರಿನ ಮೇರೆಗೆ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರು ಏನು?
ಹೈದರಾಬಾದ್‌ನ ಶೇಕ್‌ಪೇಟ್ ನಿವಾಸಿ ಸತ್ಯನಾರಾಯಣ ಎಂಬುವವರು ಹೈದರಾಬಾದ್‌ನ ಸೆಂಟ್ರಲ್ ಕ್ರೈಮ್ ಸ್ಟೇಷನ್‌ನಲ್ಲಿ ದೂರು ನೀಡಿದ್ದಾರೆ. ದೂರುದಾರರ ಪುತ್ರ ಧರ್ಮೇಂದ್ರ ಲಂಡನ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2018ರಲ್ಲಿ ಹೈದರಾಬಾದ್‌ನಲ್ಲಿ ಧರ್ಮೇಂದ್ರ ಮತ್ತು ಆಶು ರೆಡ್ಡಿ ನಡುವೆ ಪರಿಚಯವಾಯಿತು. ಈ ಪರಿಚಯವು ನಂತರ ಪ್ರೇಮಕ್ಕೆ ತಿರುಗಿತು. ನಂತರದ ದಿನಗಳಲ್ಲಿ ಆಶು ರೆಡ್ಡಿ, ಧರ್ಮೇಂದ್ರ ಅವರನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
9.35 ಕೋಟಿ ರೂ. ಹೇಗೆ ವಂಚನೆ?
ದೂರುದಾರರ ಪ್ರಕಾರ, 2018 ರಿಂದ 2025 ರ ಅವಧಿಯಲ್ಲಿ ಆಶು ರೆಡ್ಡಿ ವಿವಿಧ ಕಾರಣಗಳನ್ನು ನೀಡುತ್ತಾ ಧರ್ಮೇಂದ್ರ ಅವರಿಂದ ಸುಮಾರು 9.35 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಆಶು ರೆಡ್ಡಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ಕುಟುಂಬದ ಸದಸ್ಯರ ಚಿಕಿತ್ಸೆಗಾಗಿ, ಹೂಡಿಕೆಗಾಗಿ, ಮತ್ತು ತಮ್ಮ ವೃತ್ತಿ ಪ್ರಗತಿಗಾಗಿ ಹಣದ ಅಗತ್ಯವಿದೆ ಎಂದು ಹೇಳಿ ನಿರಂತರವಾಗಿ ಹಣ ಪಡೆದುಕೊಂಡಿದ್ದಾರೆ.
ಐಷಾರಾಮಿ ಖರೀದಿಗಾಗಿ ಬಳಸಿದ ಹಣ
ಈ ವಂಚನೆಯ ಹಣದಿಂದ ಐಷಾರಾಮಿ ಕಾರುಗಳು, ಸುಮಾರು 5 ಕೆಜಿ ಚಿನ್ನ, ಮತ್ತು ಹೈದರಾಬಾದ್‌ನ ಬೆಲೆಬಾಳುವ ಪ್ರದೇಶವಾದ ಲಾಂಕೋ ಹಿಲ್ಸ್‌ನಲ್ಲಿ ಫ್ಲ್ಯಾಟ್‌ಗಳನ್ನು ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಎಲ್ಲಾ ಆಸ್ತಿಗಳನ್ನು ಆಶು ರೆಡ್ಡಿ ಅವರ ಹೆಸರಿನಲ್ಲಿಯೇ ನೋಂದಣಿ ಮಾಡಲಾಗಿದೆ. ಇದಲ್ಲದೆ, ಆಶು ರೆಡ್ಡಿ ಅವರ ಸಹೋದರಿಯೂ ಸಹ 50 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು ವಾಪಸ್ ಮಾಡಿಲ್ಲ ಎಂದು ದೂರಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಧರ್ಮೇಂದ್ರ ಅವರಿಗೆ ಮದುವೆಯಾಗುವುದಿಲ್ಲ ಎಂದು ಆಶು ರೆಡ್ಡಿ ತಿಳಿಸಿದಾಗ, ನಟಿ ಹೇಮಾ ಅವರ ಸಮ್ಮುಖದಲ್ಲಿ ಸಂಧಾನ ನಡೆದಿತ್ತು. ಆ ಸಂದರ್ಭದಲ್ಲಿ ಆಶು ರೆಡ್ಡಿ 70 ಲಕ್ಷ ರೂಪಾಯಿ ಮರಳಿಸುವುದಾಗಿ ಒಪ್ಪಿ ಚೆಕ್‌ಗಳನ್ನು ನೀಡಿದ್ದರು. ಆದರೆ, ನಂತರ ಆ ಚೆಕ್‌ಗಳನ್ನು ನಾಶಪಡಿಸಿ ವಂಚನೆ ಮಾಡಿದ್ದಾರೆ ಎಂದು ಧರ್ಮೇಂದ್ರ ಕುಟುಂಬಸ್ಥರು ಆರೋಪಿಸಿದ್ದಾರೆ.
ಆಶು ರೆಡ್ಡಿ ಪ್ರತಿಕ್ರಿಯೆ
ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ಆಶು ರೆಡ್ಡಿ ಅವರು ಅಲ್ಲಗಳೆದಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯಿಸಿರುವ ಅವರು, “ನನ್ನ ಅನುಮತಿಯಿಲ್ಲದೆ ನನ್ನ ಬಗ್ಗೆ ಸುಳ್ಳು ಸುದ್ದಿ ಅಥವಾ ಆಧಾರರಹಿತ ಮಾಹಿತಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾನು ನ್ಯಾಯಾಲಯದಲ್ಲಿ ನನ್ನ ಮೇಲಿನ ಆರೋಪಗಳನ್ನು ಸಾಬೀತುಪಡಿಸುತ್ತೇನೆ“ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ತೆಲಂಗಾಣದಲ್ಲಿ ಭಾರೀ ಸದ್ದು ಮಾಡಿದ್ದ ಡ್ರಗ್ಸ್ ಪ್ರಕರಣ ವೊಂದರಲ್ಲೂ ಆಶು ರೆಡ್ಡಿ ಅವರ ಹೆಸರು ಕೇಳಿಬಂದಿತ್ತು. ಆದರೆ ಆಗಲೂ ಅವರು ತಮಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಪ್ರಸ್ತುತ ಹೈದರಾಬಾದ್ ಪೊಲೀಸರು ಈ ವಂಚನೆ ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ (EOW) ವರ್ಗಾಯಿಸಿದ್ದು, ಸೂಕ್ತ ತನಿಖೆ ನಡೆಯುತ್ತಿದೆ. ನಟಿ ಆಶು ರೆಡ್ಡಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಒಂದು ವೇಳೆ ಈ ಆರೋಪಗಳು ನಿಜವೆಂದು ತನಿಖೆಯಲ್ಲಿ ಸಾಬೀತಾದಲ್ಲಿ, ಆಶು ರೆಡ್ಡಿ ಮತ್ತು ಅವರ ಕುಟುಂಬದವರಿಗೆ ತೀವ್ರ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
