ಆರ್ಯನ್ ಖಾನ್ ಬೆರಳು ತೋರಿಸಿದ್ದು ಸ್ನೇಹಿತನಿಗೆ, ಜನರಿಗಲ್ಲ: ನಟ ಝೈದ್ ಖಾನ್ ಸ್ಪಷ್ಟನೆ

Untitled design 2025 12 06T110441.354

ಹೊಸಪೇಟೆ (ವಿಜಯನಗರ): ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ ಅವರ ಪುತ್ರ ಆರ್ಯನ್ ಖಾನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ಖ್ಯಾತ ಪಬ್‌ ಒಂದರ ಬಾಲ್ಕನಿಯಲ್ಲಿ ನಿಂತುಕೊಂಡು ಮಧ್ಯದ ಬೆರಳು ತೋರಿಸಿದ ವಿಡಿಯೋ ವೈರಲ್‌ ಆಗುತ್ತಿದ್ದಂತೆ ದೇಶದಾದ್ಯಂತ ದುರ್ವರ್ತನೆ ಆರೋಪಗಳು ಎದ್ದಿದ್ದವು. ಆದರೆ ಈಗ ನಟ ಝೈದ್ ಖಾನ್ ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಕಲ್ಟ್’ ಸಿನಿಮಾ ಪ್ರಚಾರಕ್ಕಾಗಿ ಹೊಸಪೇಟೆಗೆ ಆಗಮಿಸಿದ್ದ ನಟ ಝೈದ್ ಖಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆರ್ಯನ್ ಖಾನ್‌ನ ವರ್ತನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. “ಆರ್ಯನ್ ಜನರ ಕಡೆಗೆ ಆಸಭ್ಯವಾಗಿ ಬೆರಳು ತೋರಿಸಿದ್ದಾನೆ ಎಂಬ ಆರೋಪ ಸರಿಯಲ್ಲ. ಅವನು ತೋರಿಸಿದ್ದು ತನ್ನ ಸ್ನೇಹಿತನಿಗೆ. ಆ ಕ್ಷಣದ ದೃಶ್ಯವನ್ನು ತಪ್ಪಾಗಿ ಅರ್ಥೈಸಲಾಗಿದೆ,” ಎಂದು ಝೈದ್ ವಿವರಿಸಿದರು.

ಪಬ್‌ನಲ್ಲಿ ಏನಾಯಿತು? 

ಝೈದ್ ಖಾನ್ ಅವರು, ನಾನು ಹಾಗೂ ಆರ್ಯನ್ ಇಬ್ಬರೂ ಬೆಂಗಳೂರಿನ ಪಬ್‌ ಓಪನಿಂಗ್‌ಗೆ ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಹೆಚ್ಚು ಜನಸಂದಣಿ ಇದ್ದದರಿಂದ ಆರ್ಯನ್ ಕ್ಷಣಕಾಲ ಗಾಬರಿಗೊಂಡಿದ್ದರು ಎಂದು ಹೇಳಿದ್ದಾರೆ.

ಜನಜಂಗುಳಿ ನಿಯಂತ್ರಿಸಲು ಆರ್ಯನ್‌ನ ಸ್ನೇಹಿತನನ್ನು ಸಿಬ್ಬಂದಿ ಕಳುಹಿಸಿದ್ದರು. ಆದರೆ ಸುಮಾರು 30 ನಿಮಿಷ ಕಳೆದರೂ ಆ ಸ್ನೇಹಿತನು ಕಾಣಿಸಿಕೊಂಡಿರಲಿಲ್ಲ. ಕೊನೆಗೂ ಬಾಲ್ಕನಿಯಿಂದ ಆರ್ಯನ್, ತನ್ನ ಸ್ನೇಹಿತನಿಗೆ “ಯಾಕೆ ಇಷ್ಟು ತಡ?” ಎನ್ನುವ ಭಾವದಲ್ಲಿ ಬೆರಳಿನ ಮೂಲಕ ಸೂಚನೆ ನೀಡಿದ್ದಾನೆ ಎಂದು ಹೇಳಿದ್ದಾರೆ.

“ಅವನು ಜನರ ಕಡೆ ತೋರಿಸಿದ್ದಾನೆ ಎಂದರೆ ನಾನೇ ಹೇಳುತ್ತೇನೆ — ಆರ್ಯನ್ ಕೂಡ ಅದನ್ನು ಸಹಿಸಲಿಲ್ಲ. ಜನರನ್ನು ಅವಮಾನಿಸುವ ಗುಣ ಅವನಲಿಲ್ಲ. ಆ ಬೆರಳು ತೋರಿಸಿದ್ದು ತನ್ನ ಫ್ರೆಂಡ್‌ಗೆ ‘ಎಲ್ಲಿ ಇದ್ದೀಯಾ?’ ಎನ್ನುವ ಸೂಚನೆ ಮಾತ್ರ.” ಎಂದು ಝೈದ್ ಖಾನ್ ತಿಳಿಸಿದ್ದಾರೆ.

ವೀಡಿಯೋ ವೈರಲ್ – ಟ್ರೋಲ್‌ಗಳ ಅಬ್ಬರ

ಕಳೆದ ವಾರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋದಲ್ಲಿ ಆರ್ಯನ್ ಪಬ್‌ ಬಾಲ್ಕನಿಯಲ್ಲಿ ನಿಂತುಕೊಂಡು ಮಧ್ಯದ ಬೆರಳು ತೋರಿಸುತ್ತಿರುವ ದೃಶ್ಯ ಜನರಲ್ಲಿ ಆಕ್ರೋಶ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ, ಆರ್ಯನ್ ವಿರುದ್ಧ ಟ್ರೋಲ್‌ಗಳ ಮಳೆ ಸುರಿಯುತ್ತಿತ್ತು.

ಯುವ ನಟನ ವರ್ತನೆಯನ್ನು “ಅಸಭ್ಯ” ಎಂದು ಹಲವರು ಟೀಕಿಸಿದರೆ, ಕೆಲವು ಅಭಿಮಾನಿಗಳು “ಸಂದರ್ಭ ತಿಳಿದಿಲ್ಲದೆ ತಪ್ಪಾಗಿ ನಿರ್ಣಯ ಮಾಡಬೇಡಿ” ಎಂದು ಸಮರ್ಥಿಸಿಕೊಂಡಿದ್ದಾರೆ.

Exit mobile version