ನಿವೃತ್ತಿ ಬಳಿಕ ರಾಜಕೀಯಕ್ಕೆ ಸಜ್ಜಾದ್ರಾ ಗಾಯಕ ಅರಿಜಿತ್ ಸಿಂಗ್ ?

Untitled design 2026 02 26T163322.657

ಕೋಲ್ಕತ್ತಾ: ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಮತ್ತು ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಕೇವಲ 38ನೇ ವಯಸ್ಸಿಗೆ ಹಿನ್ನೆಲೆ ಗಾಯನಕ್ಕೆ (Playback Singing) ವಿದಾಯ ಹೇಳುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಹಾಗೂ ಭಾವುಕ ಪತ್ರವೊಂದನ್ನು ಹಂಚಿಕೊಂಡಿರುವ ಅರಿಜಿತ್, ನಾನು ಇನ್ನು ಮುಂದೆ ಯಾವುದೇ ಹೊಸ ಚಿತ್ರಗೀತೆಗಳನ್ನು ಹಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಹಾಡುಗಳು ಮಾತ್ರ ಮುಂದಿನ ಕೆಲವು ತಿಂಗಳುಗಳ ಕಾಲ ಬಿಡುಗಡೆಯಾಗಲಿವೆ. ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಬರೆದಿರುವ ಅವರು, ʼನೀವು ನನ್ನ ಕೇಳುಗರಲ್ಲದಿದ್ದರೆ, ದಯವಿಟ್ಟು ಇದನ್ನು ಓದಬೇಡಿ. ಈ ನಿರ್ದಯ ಜಗತ್ತಿನಲ್ಲಿ ನೀವು ತೋರಿದ ದಯೆಗೆ ಧನ್ಯವಾದಗಳು. ನಾನು ನಿಮ್ಮನ್ನು ತುಂಬಾನೇ ಪ್ರೀತಿಸುತ್ತೇನೆʼ ಎಂದು ಬರೆದುಕೊಂಡಿದ್ದಾರೆ.

ಕಳೆದ 15 ವರ್ಷಗಳಲ್ಲಿ ಅರಿಜಿತ್ ಸಿಂಗ್ ಕೇವಲ ಗಾಯಕನಾಗಿ ಉಳಿಯದೆ, ಅಭಿಮಾನಿಗಳಿಗೆ ಒಂದು ಭಾವನೆಯಾಗಿದ್ದಾರೆ. ಹಿಂದಿ, ಕನ್ನಡ, ಬೆಂಗಾಲಿ, ಮರಾಠಿ ಮತ್ತು ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಹಾಡುಗಳಿಗೆ ಅವರು ಧ್ವನಿಯಾಗಿದ್ದಾರೆ. ವರದಿಗಳ ಪ್ರಕಾರ, ಅರಿಜಿತ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 414 ಕೋಟಿ ರೂಪಾಯಿಗಳು. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ಒಬ್ಬರಾಗಿದ್ದರೂ, ಅವರು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಜಿಯಾಗಂಜ್‌ನಲ್ಲಿ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ.

ಸಂಗೀತಕ್ಕೆ ವಿದಾಯ ಹೇಳಿದ ಬೆನ್ನಲ್ಲೇ ಅರಿಜಿತ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ವದಂತಿಗಳು ಬಲವಾಗಿ ಕೇಳಿಬರುತ್ತಿವೆ. ಅವರು ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಆಲೋಚನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  2026ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅವರು ನೇರವಾಗಿ ಸ್ಪರ್ಧಿಸದಿದ್ದರೂ, ತಳಮಟ್ಟದಲ್ಲಿ ಕೆಲಸ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅರಿಜಿತ್ ಅವರ ಆಪ್ತ ಮೂಲಗಳ ಪ್ರಕಾರ, ಅವರ ತಂಡವು ಈಗಾಗಲೇ ರಾಜಕೀಯ ಅಡಿಪಾಯ ಹಾಕಲು ಆರಂಭಿಸಿದೆ. ಜನರ ಸೇವೆ ಮಾಡುವ ಉದ್ದೇಶದಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Exit mobile version