‘ಅಪರಿಚಿತೆ’ ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ

Untitled design (67)

ಬೆಂಗಳೂರು, ನವೆಂಬರ್ 23: ಸಮಾಜಮುಖಿ ಕಥಾಹಿನ್ನೆಲೆ ಹೊಂದಿರುವ ಕನ್ನಡ ಚಿತ್ರ ‘ಅಪರಿಚಿತೆ’ ಟ್ರೇಲರ್ ಅನ್ನು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಡಿ.ವಿ. ಸದಾನಂದ ಗೌಡ ಅವರು ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಡಾಟಿ ಸದಾನಂದ ಗೌಡ, ಹಿರಿಯ ನಟಿ ತಾರಾ ಅನುರಾಧ ಇದ್ದರು. ನಟಿ ತಾರಾ ಅವರು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದರು.

‘ತಾಯವ್ವ’ ಚಿತ್ರದ ನಂತರ ಮತ್ತೊಮ್ಮೆ ನಟನೆಗೆ ಮರಳುತ್ತಿರುವ ಗೀತಪ್ರಿಯ ಸುರೇಶ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಪತಿ ಸುರೇಶ್ ಕುಮಾರ್ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದು, ಗೀತಪ್ರಿಯ ಜವಾಬ್ದಾರಿಯುತ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

“1985ರಲ್ಲಿ ನಾವಿಬ್ಬರೂ ಸೇರಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದೆವು. ಆಗ ಹತ್ತು ಮಕ್ಕಳಿದ್ದ ಸಂಸ್ಥೆಯಲ್ಲಿ ಈಗ ಹತ್ತು ಸಾವಿರ ಮಕ್ಕಳು ಓದುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವ ಕಥೆಗಳು ಬಂದರೆ ಮಾತ್ರ ನಟಿಸುತ್ತೇನೆ ಎಂಬ ನಿಲುವು ನನ್ನದು. ‘ತಾಯವ್ವ’ ನಂತರ ‘ಅಪರಿಚಿತೆ’ ಕೂಡ ಅಂತಹದ್ದೇ ಕಥೆ. ನಿರ್ದೇಶಕ ವಿಶ್ವನಾಥ್ ಒಳ್ಳೆಯ ಉದ್ದೇಶದಿಂದ ಈ ಚಿತ್ರ ಮಾಡಿದ್ದಾರೆ. ರಾಮನಗರದಲ್ಲಿ ಚಿತ್ರೀಕರಣ ನಡೆದಿದೆ. ಕ್ರಿಸ್‌ಮಸ್ ಸಮಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ” ಎಂದು ಗೀತಪ್ರಿಯ ತಿಳಿಸಿದರು.

ನಿರ್ದೇಶಕ ವಿಶ್ವನಾಥ್ ಮಾತನಾಡಿ, “ಇದೊಂದು ನಿಜ ಘಟನೆ ಆಧಾರಿತ ಕಥೆ. ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಸೆನ್ಸಾರ್ ಪ್ರಕ್ರಿಯೆ ನಡೆಯುತ್ತಿದೆ. ಗೀತಪ್ರಿಯ, ಹಿರಿಯ ನಟ ಶ್ರೀನಾಥ್, ಶ್ರೀನಾಥ್ ಅವರ ಮಗ ರೋಹಿತ್ ಶ್ರೀನಾಥ್, ಸಿಂಧೂ ಲೋಕನಾಥ್, ಆರ್‌ಜೆ ನಿಖಿತಾ ಸೇರಿದಂತೆ ಅನೇಕ ಗಣ್ಯರು ಅಭಿನಯಿಸಿದ್ದಾರೆ” ಎಂದರು.

ಹಿರಿಯ ನಟ ಶ್ರೀನಾಥ್ ಮಾತನಾಡಿ, ಒಳ್ಳೆಯ ಕಥೆ, ಉತ್ತಮ ತಂಡದೊಂದಿಗೆ ಕೆಲಸ ಮಾಡಿದ ಖುಷಿ. ನನ್ನ ಮಗ ರೋಹಿತ್ ಜೊತೆಯಲ್ಲಿ ನಟಿಸಿರುವುದು ವಿಶೇಷ ಎಂದರು. 35 ವರ್ಷಗಳ ನಂತರ ತಂದೆಯ ಜೊತೆ ತೆರೆಹಂಚಿಕೊಳ್ಳುತ್ತಿರುವ ರೋಹಿತ್ ಶ್ರೀನಾಥ್, ಅಪ್ಪನ ಜೊತೆ ನಟಿಸಿದ್ದೇ ದೊಡ್ಡ ಸಂತೋಷ. ಚಿತ್ರತಂಡದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಡಿ.ವಿ. ಸದಾನಂದ ಗೌಡ ಮಾತನಾಡಿ, “ಸಿನಿಮಾ ಎಂಬ ಮಾಧ್ಯಮದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸುವ ಉದ್ದೇಶದಿಂದ ಗೀತಪ್ರಿಯ ಮತ್ತು ಸುರೇಶ್ ಕುಮಾರ್ ಈ ಚಿತ್ರ ಮಾಡಿದ್ದಾರೆ. ಇಂತಹ ಚಿತ್ರಗಳು ಹೆಚ್ಚೆಚ್ಚು ಬರಬೇಕು. ಚಿತ್ರತಂಡಕ್ಕೆ ಎಲ್ಲಾ ಶುಭಾಶಯಗಳು ಎಂದು ಹಾರೈಸಿದರು.

ಟ್ರೇಲರ್‌ನಲ್ಲಿ ಗೀತಪ್ರಿಯ ಅವರ ಶಿಕ್ಷಕಿಯ ಗಂಭೀರ ಪಾತ್ರ, ಶ್ರೀನಾಥ್-ರೋಹಿತ್ ಅವರ ತಂದೆ-ಮಗ ಸಂಬಂಧ, ಸಮಾಜದಲ್ಲಿ ಮಹಿಳೆಯರ ಸ್ಥಾನ ಮತ್ತು ಶಿಕ್ಷಣದ ಮಹತ್ವ ಎದ್ದು ಕಾಣುತ್ತಿದೆ. ಟ್ರೇಲರ್ ಈಗಾಗಲೇ ಯೂಟ್ಯೂಬ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಚಿತ್ರತಂಡದ ಪರವಾಗಿ ನಿರ್ಮಾಪಕ ಸುರೇಶ್ ಕುಮಾರ್, ಗಾಯಕರು, ಸಂಗೀತ ನಿರ್ದೇಶಕರು ಸೇರಿದಂತೆ ಎಲ್ಲರೂ ಗಣ್ಯರಿಗೆ ಧನ್ಯವಾದ ತಿಳಿಸಿದರು. ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ‘ಅಪರಿಚಿತೆ’ ರಾಜ್ಯಾದ್ಯಂತ ತೆರೆಕಾಣಲಿದೆ.

Exit mobile version