ಪದ್ಮಭೂಷಣ ಡಾ. ಅನಂತ್ ನಾಗ್ ಅನಂತ ಕಲಾ ಸೇವೆಗೆ ಕೇಂದ್ರ ಸರ್ಕಾರ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸುವ ಮೂಲಕ ಗೌರವ ಸಲ್ಲಿಸಿದೆ. ಯೆಸ್.. ನಟಸಾರ್ವಭೌಮ ಡಾ ರಾಜ್‌ಕುಮಾರ್ ಹಾದಿಯಲ್ಲೇ ಸಾಗಿರುವ ಈ ಸಿನಿಸಂತ ಕಳೆದ ವರ್ಷ ಪದ್ಮಭೂಷಣಕ್ಕೆ ಪಾತ್ರರಾಗಿದ್ದರು. ಇದೀಗ ಫಾಲ್ಕೆ ಪ್ರಶಸ್ತಿಯ ಗರಿ ಒಲಿದಿದೆ.
ರಾಜ್ ಹಾದಿಯಲ್ಲೇ ಅನಂತ್.. ಪದ್ಮಭೂಷಣ ಬೆನ್ನಲ್ಲೇ ಫಾಲ್ಕೆ
ಕನ್ನಡಿಗರಿಗೆ ಪ್ರಶಸ್ತಿ ಅರ್ಪಣೆ.. ಗ್ಯಾರಂಟಿ ಜೊತೆ ಅನಂತ ಮಾತು
ಶುಭಕೋರಿದ ಮೋದಿ.. ಮೊದಲು ಹೇಳಿದ್ದೇ ಪತ್ನಿ ಗಾಯತ್ರಿ..!
ಅಭಿನಯ ನಿಲ್ಸಿದ್ದೀನಿ.. ಒಳ್ಳೆಯ ಸ್ಕ್ರಿಪ್ಟ್ ಇಲ್ಲ.. ಅನಂತ್ ಬೇಸರ
ಅನಂತ್ ನಾಗ್.. ಹೆಸರಿನಂತೆ ಅನಂತವಾಗಿ ಕಲಾ ಸೇವೆ ಮಾಡ್ತಾ ಬರ್ತಿರೋ ಅಪರೂಪದ ಕಲಾಸಂತ. ಸಹಜ ಹಾಗೂ ಸ್ವಾಭಾವಿಕ ನಟನೆಯಿಂದಲೇ ಚಿತ್ರಪ್ರೇಮಿಗಳ ಹೃದಯ ಗೆದ್ದ ಎವರ್‌ಗ್ರೀನ್ ಹೀರೋ. ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳ್, ಮಲಯಾಳಂ, ಮರಾಠಿ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಭಾರತೀಯ ಚಿತ್ರರಂಗದ ಹುಬ್ಬೇರಿಸಿದ ಅಪ್ಪಟ ಕನ್ನಡಿಗ. ಸುಮಾರು 53 ವರ್ಷಗಳ ಸಿನಿ ಪಯಣದಲ್ಲಿ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರೋ ಅನಂತ್‌ನಾಗ್, ಕಿರುತೆರೆಗೂ ಅಪಾರ ಕೊಡುಗೆ ನೀಡಿದ್ದಾರೆ.
70ರ ದಶಕದಲ್ಲಿ ಚೊಚ್ಚಲ ಸಿನಿಮಾ ಸಂಕಲ್ಪಗೆ ಬರೋಬ್ಬರಿ 7 ಸ್ಟೇಟ್ ಫಿಲ್ಮ್ ಅವಾರ್ಡ್ಸ್ ಪಡೆಯೋಕೆ ಮುನ್ನ ಅನಂತ್ ನಾಗ್ ರಂಗಕರ್ಮಿಯಾಗಿ ನೂರಾರು ನಾಟಕಗಳಲ್ಲಿ ಬಣ್ಣ ಹಚ್ಚಿ ಸಾವಿರಾರು ಪ್ರದರ್ಶನಗಳನ್ನ ನೀಡಿದ್ದರು. ಗಾಳಿಪಟ-2, ವಿಜಯಾನಂದ ಸಿನಿಮಾಗಳ ಬಳಿಕ ಮಂಡಲ ಹಾಗೂ ರಾಜದ್ರೋಹಿ ಸಿನಿಮಾಗಳೇ ಅನಂತ್ ಕೊನೆಯ ಚಿತ್ರಗಳಾಗಿವೆ. ಯಾಕಂದ್ರೆ ಅಂದಿನಿಂದ ಇಂದಿನತನಕ ಅವರು ಬೇಱವ ಚಿತ್ರದಲ್ಲೂ ನಟಿಸಲೇ ಇಲ್ಲ. ಅದಕ್ಕೆ ಕಾರಣ ಒಳ್ಳೆಯ ಸ್ಕ್ರಿಪ್ಟ್ ಇಲ್ಲದೇ ಇರೋದು. ಇದನ್ನ ಖುದ್ದು ಅನಂತ್ ಅವರೇ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಬೇಸರದಿಂದ ನಾನು ಅಭಿನಯ ನಿಲ್ಲಿಸಿದ್ದೀನಿ ಎಂದಿರೋದು ದುರಂತ.
ಅಂದಹಾಗೆ ಕಲೆಗಾಗಿಯೇ ಹುಟ್ಟಿ ಬಂದ ಕಲಾ ಸರಸ್ವತಿಯ ಪುತ್ರ ಈ ಅನಂತ್ ನಾಗ್ ಅಂದ್ರೆ ತಪ್ಪಾಗಲ್ಲ. ಹೌದು.. ತಮ್ಮ ಜೀವಮಾನದಲ್ಲಿ ಸೆಲ್ಯುಲಾಯ್ಡ್‌ನಿಂದ ಡಿಜಿಟಲ್ ತನಕ.. ಬ್ಲಾಕ್ & ವೈಟ್‌ನಿಂದ ಯುಎಫ್‌ಓ, ಕ್ಯೂಬ್ ತನಕ ಎಲ್ಲಾ ಬಗೆಯ ಮೈಲುಗಲ್ಲುಗಳನ್ನ ಕಂಡ ಕಲಾ ಕೌಸ್ತುಭ ಅನಂತ್. ಅಂಥದ್ದೊಂದು ಸುದೀರ್ಘ ಬಣ್ಣದಲೋಕದ ಪಯಣ ಸವೆಸಿ ಬಂದ ಕಲಾ ಕುವರನಿಗೆ ಕೇಂದ್ರ ಸರ್ಕಾರ ಚಿತ್ರರಂಗದ ಅತ್ಯಂತ ಸರ್ವ ಶ್ರೇಷ್ಠ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ನೀಡಿ, ಗೌರವಿಸ್ತಿರೋದು ಖುಷಿಯ ವಿಚಾರ.
5 ದಶಕಗಳಿಗೂ ಅಧಿಕ ಕಾಲ ನಿರಂತರ ಸಿನಿಮಾರಂಗದ ಸೇವೆ ಮಾಡ್ತಾ ಬಂದಿರೋ ಅನಂತ್‌ನಾಗ್‌ರಿಗೆ ಈ ದಾದಾ ಸಾಹೇಬ್ ಫಾಲ್ಕೆ ಗರಿ ದೊರೆತಿರೋದು ಕನ್ನಡಿಗರಾದ ನಾವು ಹೆಮ್ಮೆ ಪಡುವ ವಿಷಯ. ಅಂದಹಾಗೆ ನಟಸಾರ್ವಭೌಮ ಡಾ ರಾಜ್‌ಕುಮಾರ್ ಕಾಲದ ನಟ ಅನಂತ್, ಅವರೊಟ್ಟಿಗೆ ಚಿತ್ರರಂಗದ ಕಲಾವಿದನಾಗಿ ಅಷ್ಟೇ ಅಲ್ಲದೆ, ಒಬ್ಬ ಸಹೋದರನಂತೆ ಬೆಳೆದು ಬಂದವರು. ಇದೀಗ ಅವರ ಹಾದಿಯಲ್ಲೇ ಈ ರೀತಿಯ ಅತ್ಯುನ್ನತ ಪ್ರಶಸ್ತಿಗಳಿಗೆ ಪಾತ್ರರಾಗ್ತಿರೋದು ಖುಷಿಯ ವಿಚಾರ. ಕಳೆದ ವರ್ಷ ಅಣ್ಣಾವ್ರಂತೆ ಪದ್ಮಭೂಷಣ ಪಡೆದಿದ್ರು ಅನಂತ್‌ನಾಗ್.
ಫಾಲ್ಕೆ ಪ್ರಶಸ್ತಿ ಪಡೆಯುತ್ತಿರೋ 3ನೇ ಕನ್ನಡಿಗ.. 2ನೇ ನಟ..!
ಶಿವಣ್ಣ, ಸುದೀಪ್, ರಕ್ಷಿತ್, ರಿಷಬ್‌ಗೆ ಸಂದ ಪ್ರಶಸ್ತಿ ಇದಲ್ಲ
ಪದ್ಮಭೂಷಣ ಬೆನ್ನಲ್ಲೇ ದಾದಾ ಸಾಹೇಬ್ ಫಾಲ್ಕೆ ಪಡೆಯುತ್ತಿರೋದು ಗ್ರೇಟ್. ಹೌದು.. 1995ರಲ್ಲಿ ನಟಸಾರ್ವಭೌಮ ಡಾ ರಾಜ್‌ಕುಮಾರ್ ಅವರಿಗೆ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅದಾದ ಬಳಿಕ ಚಂದನವನದ ಎರಡನೇ ನಟರಾಗಿ ಅನಂತ್‌ನಾಗ್ ಆ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂದಹಾಗೆ ಖ್ಯಾತ ಸಿನಿಮಾಟೋಗ್ರಾಫರ್ ವಿಕೆ ಮೂರ್ತಿ ಅವರಿಗೂ ಹಿಂದಿ ಚಿತ್ರರಂಗದ ಸೇವೆಗಾಗಿ 2008ರಲ್ಲಿ ಫಾಲ್ಕೆ ಪ್ರಶಸ್ತಿ ಸಂದಿದೆ. ಒಟ್ಟಾರೆ ಮೂರನೇ ಕನ್ನಡಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಂದಹಾಗೆ ಸಾಕಷ್ಟು ಮಂದಿಗೆ ಈ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಗ್ಗೆ ಗೊಂದಲಗಳಿವೆ. ದಾದಾ ಸಾಹೇಬ್ ಫಾಲ್ಕೆ ಸೌತ್ ಅವಾರ್ಡ್ಸ್ ಹೆಸರಲ್ಲಿ ಅಕಾಡೆಮಿಯೊಂದು ಪ್ರಶಸ್ತಿಗಳನ್ನ ನೀಡುತ್ತೆ. ಅದು ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ ಆಗಿದ್ದು, ಇಲ್ಲಿಯ ತನಕ ಶಿವರಾಜ್‌ಕುಮಾರ್, ಸುದೀಪ್, ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿಗೆ ಬಂದಿದೆ. ಆದ್ರೆ ಅಣ್ಣಾವ್ರಿಗೆ ನೀಡಿದ್ದ, ಅನಂತ್ ನಾಗ್‌ಗೆ ನೀಡ್ತಿರೋ ಫಾಲ್ಕೆ ಪ್ರಶಸ್ತಿಗೂ ಇವುಗಳಿಗೂ ಸಂಬಂಧವಿಲ್ಲ. ಅದೇ ಬೇರೆ ಇದೇ ಬೇರೆ ಅನ್ನೋದು ನಿಮ್ಮ ಗಮನಕ್ಕಿರಲಿ. ಇದು ಸೆಂಟ್ರಲ್ ಗೌರ್ನಮೆಂಟ್ ಸಲ್ಲಿಸುತ್ತಿರೋ ಶ್ರೇಷ್ಠ ಗೌರವ.
ಪ್ರಶಸ್ತಿಯನ್ನ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಅನಂತ್ ನಾಗ್ ಜೊತೆ ಕೋಟ್ಯಂತರ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಅಂದಹಾಗೆ ಈ ಖುಷಿ ಸುದ್ದಿಯನ್ನ ಮೊದಲು ಅನಂತ್ ನಾಗ್ ಅವರ ಬಳಿ ಹಂಚಿಕೊಂಡಿದ್ದೇ ಪತ್ನಿ ಗಾಯತ್ರಿ ಅಂತೆ. ಇದನ್ನ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಅನಂತ್‌ನಾಗ್ ಎಕ್ಸ್‌ಕ್ಲೂಸಿವ್ ಆಗಿ ಸಂಭ್ರಮಿಸಿದ್ರು. ಅಷ್ಟೇ ಅಲ್ಲ.. ಈ ಫಾಲ್ಕೆ ಪ್ರಶಸ್ತಿಯನ್ನ ಸಮಸ್ತ ಕನ್ನಡಿಗರಿಗೆ ಅರ್ಪಿಸುವುದಾಗಿಯೂ ಹೇಳಿದ್ರು.
ಪದ್ಮಭೂಷಣ ಅಷ್ಟೇ ಅಲ್ಲ ಫಾಲ್ಕೆಯೂ ಕನ್ನಡಿಗರಿಗೇ ಅರ್ಪಣೆ
ಫಾಲ್ಕೆ ಗೌರವ ಬೇಗ ಸಿಕ್ಕಿದಿದ್ರೆ ರಿಟೈರ್ಮೆಂಟ್ ಬೇಗ ತಗೋತಿದ್ದೆ
ಪ್ರಶಸ್ತಿಗಳು ಕಲಾವಿದರಿಗೆ ಹುಮ್ಮಸ್ಸು ನೀಡುತ್ತೆ. ಹಾಗಾಗಿ ಕಲಾವಿದರಿಗೆ ಅವು ಆಗಾಗ ಸಿಗ್ತಾ ಇರ್ಬೇಕು ಎಂದ ಅನಂತ್‌ನಾಗ್, ಪದ್ಮಭೂಷಣ ಕೂಡ ಕನ್ನಡಿಗರಿಗೆ ಅರ್ಪಿಸಿದ್ದೆ. ಫಾಲ್ಕೆಯೂ ಕನ್ನಡಿಗರಿಗೇ ಅರ್ಪಣೆ ಎಂದರು. ಅಂದಹಾಗೆ ಈ ಫಾಲ್ಕೆ ಗೌರವ ಇನ್ನೂ ಬೇಗ ಸಿಕ್ಕಿದಿದ್ರೆ ನಾನು ಕೂಡ ಇನ್ನೂ ಬೇಗನೇ ನಟನೆಯಿಂದ ನಿವೃತ್ತಿ ಪಡೆಯುತ್ತಿದ್ದೆ ಎಂದಿದ್ದಾರೆ ಹಿರಿಯನಟ ಅನಂತ್‌ನಾಗ್.
ರಾಜ್ ಕಂಠದ ‘ಏನೆಂದು ನಾ ಹೇಳಲಿ’ ಗೀತೆ ಹಾಡಿದ ಅನಂತ್
ಮೇರು ಶಿಖರ ಡಾ. ರಾಜ್‌ಕುಮಾರ್‌ನ ಕೊಂಡಾಡಿದ ಹಿರಿಜೀವ
ಚಿ ಉದಯ್ ಶಂಕರ್ ಸಾಹಿತ್ಯ ಪೋಣಿಸಿದ್ದ ಹಾಗೂ ಡಾ ರಾಜ್‌ಕುಮಾರ್ ಅವರು ಹಾಡಿದ್ದ ಏನೆಂದು ನಾ ಹೇಳಲಿ ಗೀತೆಯನ್ನ ಗುನುಗಿದ ನಟ ಅನಂತ್ ನಾಗ್, ಇದು ನನ್ನ ಫೇವರಿಟ್. ಸದಾ ಹಾಡ್ತಿರ್ತೇನೆ ಎಂದರು. ಅಷ್ಟೇ ಅಲ್ಲ.. ಡಾ ರಾಜ್‌ಕುಮಾರ್ ಹಾದಿಯಲ್ಲಿ ಪ್ರಶಸ್ತಿಗಳು ದೊರೆಯುತ್ತಿರುವುದು ಕಂಡು ನಟಸಾರ್ವಭೌಮನ ಬಗ್ಗೆ ಕೊಂಡಾಡಿದ್ರು.
ಅಂದಹಾಗೆ ಇದೇ ಸೆಪ್ಟೆಂಬರ್ 22ನೇ ತಾರೀಖು, ಗುಜರಾತ್‌ನ ಏಕ್ತಾ ನಗರ್‌ನಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಂದು ನಮ್ಮ ಕನ್ನಡ ಚಿತ್ರರಂಗದ ಸೇವೆಯನ್ನ ಗುರ್ತಿಸಿ ನೀಡ್ತಿರೋ ಫಾಲ್ಕೆ ಪ್ರಶಸ್ತಿಯನ್ನ ಸ್ವೀಕರಿಸೋ ಮೂಲಕ ಕನ್ನಡಿಗರ ಹೆಮ್ಮೆ ಹಾಗೂ ಕನ್ನಡ ಚಿತ್ರರಂಗದ ಗರಿಮೆಯನ್ನ ಮತ್ತಷ್ಟು ಹೆಚ್ಚಿಸಲಿದ್ದಾರೆ ಈ ಅನಂತ ಕಲಾ ಕೌಸ್ತುಭ.
