ಬೆಂಗಳೂರಿನಲ್ಲೊಂದು ಅತ್ಯಾಕರ್ಷಕ ಸಿನಿಮಾ ಮಲ್ಟಿಪ್ಲೆಕ್ಸ್ “AMB ಸಿನಿಮಾಸ್”

Untitled design 2026 01 23T223516.282

ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಗಾಂಧಿನಗರ ಎಂದ ಕೂಡಲೇ ನೆನಪಾಗುವುದು ಅಲ್ಲಿನ ಗಿಜಿಗುಟ್ಟುವ ಜನಸಂದಣಿ ಮತ್ತು ಹಳೆಯ ಚಿತ್ರಮಂದಿರಗಳು. ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಪ್ರದೇಶದಲ್ಲಿ ಒಂದು ಕಾಲದಲ್ಲಿ ಚಿತ್ರಮಂದಿರಗಳದ್ದೇ ಕಾರುಬಾರು ಆಗಿತ್ತು. ಅವುಗಳಲ್ಲಿ, ಅದರಲ್ಲೂ ಏಷ್ಯಾದಲ್ಲಿಯೇ ಅತೀ ದೊಡ್ಡ ಥಿಯೇಟರ್‌ ಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿದ್ದು ‘ಕಪಾಲಿ’ ಚಿತ್ರಮಂದಿರ.

ಸುಮಾರು 50 ವರ್ಷಗಳ ಕಾಲ ಸಿನಿಪ್ರಿಯರಿಗೆ ಮನರಂಜನೆ ನೀಡಿದ್ದ ಈ ಚಿತ್ರಮಂದಿರ ಮತ್ತು ಅದರ ಹೆಸರು ಕೇವಲ ಹೆಸರಾಗಿ ಉಳಿದಿರಲಿಲ್ಲ, ಭಾವನೆಯಾಗಿ ಬೆಳೆದಿತ್ತು. ಕೆಲವು ವರ್ಷಗಳ ಹಿಂದೆ ಕಪಾಲಿ ಚಿತ್ರಮಂದಿರ ನೆಲಸಮಗೊಂಡಾಗ ಸಿನಿಮಾ ಪ್ರೇಮಿಗಳಿಗೆ ಅತೀವ ನೋವುಂಟುಮಾಡಿತ್ತು. ಮುಂದೆ ಈ ಸ್ಥಳದಲ್ಲಿ ಏನಾಗಬಹುದು? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಈಗ ಅದೇ ಜಾಗದಲ್ಲಿ ಬೃಹತ್ ಮಲ್ಟಿಫ್ಲೆಕ್ಸ್‌ ಪ್ರಾರಂಭವಾಗಿದೆ.

ಟಾಲಿವುಡ್ ಪ್ರಿನ್ಸ್ ಮಹೇಶ್‌ಬಾಬು ಅವರ ಒಡೆತನದ “ಎಎಂಬಿ ಸಿನಿಮಾಸ್” ಇದೇ ಜಾಗದಲ್ಲಿ ಬೃಹತ್ ಮಲ್ಟಿಫ್ಲೆಕ್ಸ್‌ ನಿರ್ಮಾಣವಾಗಿದೆ. `ಎಎಂಬಿ ಸಿನಿಮಾಸ್ ಕಪಾಲಿ’ ಎನ್ನುವ ಹೆಸರಿನಲ್ಲಿ ಈ ಮಲ್ಟಿಪ್ಲೆಕ್ಸ್ ಕಾರ್ಯ ಆರಂಭಿಸಿದೆ. ಇದು ದಕ್ಷಿಣ ಭಾರತದ ಮೊಟ್ಟ ಮೊದಲ ಡಾಲ್ಬಿ ವಿಷನ್ ವಿಥ್ ಎಂದು ಚಿತ್ರಮಂದಿರವಾಗಿದ್ದು 9 ಸ್ಕ್ರೀನ್‌ಗಳು ಇದರಲ್ಲಿ ಇದೆ. ಸ್ಕ್ರೀನ್‌ಗಳು ಅತ್ಯುತ್ತಮ ವಿಡಿಯೋ ಗುಣಮಟ್ಟ ಹೊಂದಿದ್ದು ಪ್ರೇಕ್ಷಕರಿಗೆ ಅತ್ಯುತ್ತಮ ಚಿತ್ರ ವೀಕ್ಷಣೆ ಅನುಭವ ನಿಡುತ್ತದೆ.

ವಿಶೇಷವಾಗಿ ಎಲ್ಲಾ ಸ್ಕ್ರೀನ್ ಗಳಲ್ಲಿ ಅತ್ಯುತ್ತಮ ಬಣ್ಣ ಹಾಗೂ ದೃಶ್ಯ ಸ್ಪಷ್ಟತೆಗಾಗಿ ಬಾರ್ಕೋ ಲೇಸರ್ ಪ್ರೊಜೆಕ್ಷನ್ ತಂತ್ರಜ್ಞಾನವನ್ನು “ಎಎಂಬಿ ಸಿನಿಮಾಸ್‌”ನಲ್ಲಿ ಬಳಸಲಾಗಿದೆ. ಇನ್ನು ಸ್ಕ್ರೀನ್ 6 ಎಲ್ಲಕ್ಕಿಂತ ವಿಶೇಷವಾಗಿದ್ದು, ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಪರದೆಯಾಗಿದೆ. ಇದು ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಮತ್ತು ಇಮ್ಮರ್ಸಿವ್ ಸೌಂಡ್ ವ್ಯವಸ್ಥೆಯನ್ನು ಹೊಂದಿದೆ.

ಪ್ರೇಕ್ಷಕರಿಗೆ ಐಷಾರಾಮಿ ಸೌಕರ್ಯ ನೀಡಲು ‘ಎಂ-ಲೌಂಜ್’ ಎಂಬ ವಿಶೇಷ ಲೌಂಜ್ ಮತ್ತು ಆಸನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಆಹಾರ ಮತ್ತು ಪಾನೀಯ ಚಲನಚಿತ್ರ ವೀಕ್ಷಕರಿಗಾಗಿ ವಿಶೇಷವಾಗಿ ಆಯ್ಕೆ ಮಾಡಿದ ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇಲ್ಲಿದೆ.

ಇಲ್ಲಿನ ಟಿಕೆಟ್ ದರದ ಕುರಿತು ನೋಡುವುದಾದರೆ ಅಷ್ಟೇನು ದುಬಾರಿ ಅಲ್ಲದೆ ಎಲ್ಲರಿಗೂ ಅನುಕೂಲವಾಗುವ ದರದಲ್ಲಿರುತ್ತದೆ. ಸರ್ಕಾರದ ನಿಯಮಾವಳಿಯಂತೆ ಬೆಳಿಗ್ಗೆ ಆರು ಗಂಟೆಯಿಂದ ಪ್ರಥಮ ಪ್ರದರ್ಶನ ಪ್ರಾರಂಭವಾಗುತ್ತದೆ ಮತ್ತು ಕಡೆಯ ಪ್ರದರ್ಶನ ರಾತ್ರಿ ೧೦.೩೦ಕ್ಕೆ ಇರುತ್ತದೆ. ಅದರ ನಡುವೆ ಐದು, ಆರು ಪ್ರದರ್ಶನಗಳನ್ನು ನೀಡಲು ಯೋಜಿಸಲಾಗುತ್ತದೆ.

ಇಲ್ಲಿ ಲೈವ್ ಕಿಚನ್ ತೆರೆಯಲಾಗಿದ್ದು ಪ್ರೇಕ್ಷಕರಿಗೆ ಅತ್ಯುತ್ತಮ ಗುಣಮಟ್ಟದ ಆಹಾರ ಪೂರೈಸುವ ಉದ್ದೇಶವಿದೆ.
ಮುಂಬರುವ ದಿನಗಳಲ್ಲಿ ಕರ್ನಾಟಕದ ಇತರೆ ಭಾಗಗಳಲ್ಲೂ ಎಎಂಬಿ ಸಿನಿಮಾಸ್ ತೆರೆಯುವ ಯೋಜನೆ ಇದೆ. ಬಹಳ ಹಿಂದಿನಿಂದ “ಎಎಂಬಿ ಸಿನಿಮಾಸ್’ ಹಾಗೂ ಕ್ಯೂಬ್ ನಡುವೆ ಒಪ್ಪಂದವಿದೆ ಎಂದು “ಎಎಂಬಿ ಸಿನಿಮಾಸ್” ನ ಎಂ.ಡಿ ಭರತ್ ನಾರಂಗ್ ತಿಳಿಸಿದರು. ಡಾಲ್ಬಿ ಲ್ಯಾಬೋರೇಟರಿಸ್ ನ ಸಮೀರ್ ಸೇಠ್ ಹಾಗೂ ಆರ್ಕಿಟೆಕ್ಚರ್ ಈರಣ್ಣ ಯೆಕೆಬೋಟೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version