ಬೆಂಗಳೂರು, ಅಕ್ಟೋಬರ್ 10, 2025: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಹಾಗೂ ಹಿರಿಯ ನಟ ಶ್ರೀಕಂಠಯ್ಯ ಉಮೇಶ್ (ಎಂಎಸ್ ಉಮೇಶ್) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 70 ವರ್ಷದ ಉಮೇಶ್ ಅವರು ಶುಕ್ರವಾರ (ಅಕ್ಟೋಬರ್ 10) ಬೆಂಗಳೂರಿನ ಮುದ್ದಿನಪಾಳ್ಯದಲ್ಲಿರುವ ತಮ್ಮ ನಿವಾಸದಲ್ಲಿ ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಡಲೇ ಕುಟುಂಬಸ್ಥರು ಆಂಬುಲೆನ್ಸ್ ಮೂಲಕ ಅವರನ್ನು ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಆಸ್ಪತ್ರೆಯ ವೈದ್ಯರು ಉಮೇಶ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರು ಆಸ್ಪತ್ರೆಯಲ್ಲಿಯೇ ಇದ್ದು, ಅವರ ಆರೋಗ್ಯದ ಬಗ್ಗೆ ನಿರಂತರ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ, ಕನ್ನಡ ಚಿತ್ರರಂಗದ ಹಲವು ಕಲಾವಿದರು ಮತ್ತು ಸಿನಿಮಾ ಪ್ರೇಮಿಗಳು ಉಮೇಶ್ ಅವರ ಚೇತರಿಕೆಗಾಗಿ ಶುಭ ಹಾರೈಸಿದ್ದಾರೆ.
ಉಮೇಶ್ ಅವರು “ಅಪಾರ್ಥ ಮಾಡ್ಕೋಬೇಡಿ” ಎಂಬ ಡೈಲಾಗ್‌ನಿಂದ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಜನಪ್ರಿಯರಾಗಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ಹಾಸ್ಯ ಶೈಲಿ, ಮುಖಭಾವ, ಮತ್ತು ಡೈಲಾಗ್ ಯಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.