ಅರಮನೆ ಮೈದಾನದಲ್ಲಿ ದುಷ್ಯಂತ್ ರಾಯಲ್ ವೆಡ್ಡಿಂಗ್: ಗತವೈಭವ ಹೀರೋ ಕೈ ಹಿಡಿದ ಚೆಲುಗೆ ರಚನಾ ಯಾರು ಗೊತ್ತಾ ?

ಗತವೈಭವ ಹೀರೋ ಕೈ ಹಿಡಿದ ಚೆಲುಗೆ ರಚನಾ ಯಾರು ಗೊತ್ತಾ?

Untitled design 2026 02 26T172141.749

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಮೊನ್ನೆಯಷ್ಟೇ ಆಶಿಕಾ ಜೊತೆ ಗತ ವೈಭವ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಹೀರೋ ಆದಂತಹ ದುಷ್ಯಂತ್, ಇದೀಗ ತಮ್ಮ ಜೀವನದ ಮತ್ತೊಂದು ಮಹತ್ವದ ಘಟ್ಟ ತಲುಪಿದ್ದಾರೆ. ಮುದ್ದುಹನುಮೇಗೌಡರ ಕುಟುಂಬದ ಮುದ್ದಿನ ಚೆಲುವೆ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮದುವೆ ಸಂಭ್ರಮ ಜೋರಾಗಿರುವ ನಡುವೆ ‘ಗತ ವೈಭವ’ ನಟ ದುಷ್ಯಂತ್ ಅವರ ವಿವಾಹವು ವಿಶೇಷ ಗಮನ ಸೆಳೆದಿದೆ. ದುಷ್ಯಂತ್ ತಂದೆ ಶ್ರೀನಿವಾಸ್ ಅವರು ಗುಬ್ಬಿ ಕ್ಷೇತ್ರದ ಶಾಸಕರಾಗಿರುವ ಹಿನ್ನೆಲೆ, ಈ ಮದುವೆಗೆ ರಾಜಕೀಯ ಮಹತ್ವವೂ ಹೆಚ್ಚಿಸಿದೆ. ಸಿನಿ ಜಗತ್ತು ಮತ್ತು ರಾಜಕೀಯ ವಲಯ ಎರಡನ್ನೂ ಒಂದೇ ವೇದಿಕೆಯಲ್ಲಿ ಸೇರಿಸಿದ ಈ ಮದುವೆ, ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಚಾಮರ ವಜ್ರದಲ್ಲಿ ಅದ್ದೂರಿಯಾಗಿ ನೆರವೇರಿತು. ಸಂಪ್ರದಾಯಬದ್ಧ ವಿಧಿವಿಧಾನಗಳ ಮಧ್ಯೆ ದುಷ್ಯಂತ್ ಹಾಗೂ ರಚನಾ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅರಮನೆ ಮೈದಾನದಲ್ಲಿ ದುಷ್ಯಂತ್ ರಾಯಲ್ ವೆಡ್ಡಿಂಗ್ ರಂಗು!

ಗತವೈಭವ ಹೀರೋ ಕೈ ಹಿಡಿದ ಚೆಲುಗೆ ರಚನಾ ಯಾರು ಗೊತ್ತಾ?

ದುಷ್ಯಂತ್ ಅವರು ಹಿರಿಯ ರಾಜಕಾರಣಿ ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಅವರನ್ನು ವರಿಸಿದ್ದಾರೆ. ಈ ಮದುವೆಯ ಮೂಲಕ ಎರಡು ಪ್ರಭಾವಿ ರಾಜಕೀಯ ಕುಟುಂಬಗಳು ಒಂದಾಗಿವೆ ಎಂಬುದು ವಿಶೇಷ. ರಾಜಕೀಯವಾಗಿ ಬಲಿಷ್ಠ ಹಿನ್ನೆಲೆಯಿದ್ದರೂ ದುಷ್ಯಂತ್ ತಮ್ಮದೇ ಆದ ಗುರುತನ್ನು ಕನ್ನಡ ಚಿತ್ರರಂಗದಲ್ಲಿ ನಿರ್ಮಿಸಿಕೊಂಡಿದ್ದಾರೆ. ಸಿನಿ ಪಯಣದ ಜೊತೆ ಕುಟುಂಬದ ಪರಂಪರೆ ಎರಡನ್ನೂ ಕಾಪಾಡಿಕೊಂಡು ನಡೆದಿರುವ ಈ ವಿವಾಹ ‘ಪಕ್ಕಾ ಅರೇಂಜ್ಡ್ ಮ್ಯಾರೇಜ್’ ಎಂಬುದು ಅವರೇ ಹೇಳಿಕೊಂಡ ಸಂಗತಿ. “ಮೊದಲಿನಿಂದ ಪರಿಚಯದ ಕುಟುಂಬ, ನನಗೂ ಇಷ್ಟವಿತ್ತು. ಸಿನಿಮಾ ಬಿಡುಗಡೆಗೂ ಮುನ್ನವೇ ಮದುವೆ ನಿಶ್ಚಯವಾಗಿತ್ತು,” ಎಂದು ದುಷ್ಯಂತ್ ಈ ಹಿಂದೆ ತಿಳಿಸಿದ್ದಾರೆ.

ದುಷ್ಯಂತ್- ರಚನಾ ಮದುವೆ ಮಂಟಪವೇ ಒಂದು ರಾಜಮಹಲ್‌ ನೆನಪಿಸುವಂತಿದೆ. ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರ ಸಂಪೂರ್ಣವಾಗಿ ಚಿನ್ನದ ಹೊಳಪಿನ ಥೀಮ್‌ನಲ್ಲಿ ಮಿಂಚಿದೆ. ಪ್ರವೇಶದ್ವಾರದಲ್ಲೇ ಹೂವಿನ ಕಮಾನುಗಳು, ಕೆಂಪು ಕಾರ್ಪೆಟ್‌ಗಳು ಅತಿಥಿಗಳಿಗೆ ರಾಜಮರ್ಯಾದೆ ಮೂಲಕ ಸ್ವಾಗತ ಕೋರಿವೆ.

ಸಿನಿ ಲೈಫ್ ಪರ್ಸನಲ್ ವೈಫ್.. ದುಷ್ಯಂತ್‌‌ಗೆ ಡಬಲ್ ಧಮಾಕ

ಡಾಲಿ, ಆಶಿಕಾ, ಅಮೂಲ್ಯ, ಅನುಷಾ.. ಜೋಡಿಗೆ ಶುಭ ಹಾರೈಕೆ

ಸಪ್ತಪದಿಗೆ ಡಿಕೆಶಿ, ಅಶ್ವತ್ಥ್ ನಾರಾಯಣ್, ಲಕ್ಷ್ಮಿ ಹೆಬ್ಬಾಳ್ಕರ್ ಸಾಕ್ಷಿ

ಮದುವೆ ಸಮಾರಂಭಕ್ಕೆ ರಾಜಕೀಯ ಹಾಗೂ ಸಿನಿ ಕ್ಷೇತ್ರದ ಗಣ್ಯರು ಸಾಕ್ಷಿಯಾಗಿದ್ದರು. ಡಾಲಿ ಧನಂಜಯ್, ಅಶ್ವತ್ ನಾರಾಯಣ್, ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಕೆ. ಶಿವಕುಮಾರ್, ಮಧು ಬಂಗಾರಪ್ಪ, ಕೆ.ಜೆ. ಜಾರ್ಜ್ ಸೇರಿದಂತೆ ಅನೇಕರು ನೂತನ ದಂಪತಿಗೆ ಶುಭ ಹಾರೈಸಿದರು. ಚಿತ್ರರಂಗದ ತಾರೆಯರಾದ ಅಮೂಲ್ಯ, ಅನುಷಾ ರೈ, ಆಶಿಕಾ ರಂಗನಾಥ್ ಸೇರಿದಂತೆ ಹಲವರು ಹಾಜರಾಗಿ ಮದುವೆಗೆ ಮೆರುಗು ತಂದರು. ಪತ್ನಿ ರಚನಾ ಕೈಗೆ ಮೆಹಂದಿ ಹಚ್ಚಿ ಸಂಭ್ರಮಿಸಿದ ದುಷ್ಯಂತ್ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇನ್ನು ಮಾರ್ಚ್ 1ರಂದು ಬೆಂಗಳೂರಿನ ಅರಮನೆಯಲ್ಲಿ ಬೀಗರ ಔತಣಕೂಟ ಹಾಗೂ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಮತ್ತಷ್ಟು ಗಣ್ಯರ ಆಗಮನದ ನಿರೀಕ್ಷೆಯಿದೆ. ಒಟ್ಟಾರೆ, ರಾಜಕೀಯ ಪ್ರಭಾವ ಮತ್ತು ಸಿನಿ ಗ್ಲಾಮರ್ ಒಂದೇ ವೇದಿಕೆಯಲ್ಲಿ ಮೆರೆದ ಲಕ್ಸುರಿ ವೆಡ್ಡಿಂಗ್ ಆಗಿತ್ತು. ಎನಿವೇ ನವ ಜೋಡಿಗೆ ನಮ್ಮ ಕಡೆಯಿಂದ ಹ್ಯಾಪಿ ಮ್ಯಾರೀಡ್ ಲೈಫ್.

 

Exit mobile version