ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ (ಫೆಬ್ರವರಿ 16) ಕೌಂಟ್‌ಡೌನ್ ಶುರುವಾಗಿದೆ. ಪ್ರತಿ ವರ್ಷ ತಮ್ಮ ನೆಚ್ಚಿನ ನಟನ ಮನೆ ಮುಂದೆ ಹಬ್ಬದಂತೆ ಸಂಭ್ರಮಿಸುತ್ತಿದ್ದ ಅಭಿಮಾನಿಗಳಿಗೆ ಈ ಬಾರಿ ದರ್ಶನ್ ಅವರ ಅನುಪಸ್ಥಿತಿ ಬೇಸರ ತಂದಿದೆ. ಪ್ರಸ್ತುತ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೂ, ಅವರ ಮೇಲಿನ ಅಭಿಮಾನ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಹೀಗಾಗಿ ದರ್ಶನ್ ವೃತ್ತಿಜೀವನದ ಬ್ಲಾಕ್ ಬಸ್ಟರ್ ಸಿನಿಮಾ ‘ಕರಿಯ’ ಈಗ ಬೆಳ್ಳಿ ಪರದೆಯ ಮೇಲೆ ಮತ್ತೆ ಅಬ್ಬರಿಸಲು ಸಜ್ಜಾಗಿದೆ.
ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ನಟಿ ತನಿಶಾ ಕುಪ್ಪಂದ ಅವರು ಕರಿಯ ಸಿನಿಮಾವನ್ನು ರೀ-ರಿಲೀಸ್ ಮಾಡಲು ಮುಂದಾಗಿದ್ದಾರೆ. ಫೆಬ್ರವರಿ 13ರಂದು ರಾಜ್ಯಾದ್ಯಂತ ಈ ಚಿತ್ರವನ್ನು ತೆರೆಗೆ ತರಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ದರ್ಶನ್ ಅವರ ಹುಟ್ಟುಹಬ್ಬಕ್ಕೆ ಒಬ್ಬ ಅಭಿಮಾನಿಯಾಗಿ ನಾನು ನೀಡುತ್ತಿರುವ ಟ್ರಿಬ್ಯೂಟ್ ಇದು ಎಂದು ತನಿಶಾ ಹೇಳಿಕೊಂಡಿದ್ದಾರೆ.
ದರ್ಶನ್ ಅವರ ಕೆರಿಯರ್‌ನಲ್ಲಿ ಹೊಸ ತಿರುವು ನೀಡಿದ ಸಿನಿಮಾ ‘ಕರಿಯ’. ನಿರ್ದೇಶಕ ಪ್ರೇಮ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರ, ಅಂಡರ್‌ವರ್ಲ್ಡ್ ಕಥೆಯ ಜೊತೆಗೆ ಅದ್ಭುತ ಪ್ರೇಮಕಥೆಯನ್ನು ಹೊಂದಿತ್ತು. ವಿಶೇಷವಾಗಿ ಗುರುಕಿರಣ್ ಸಂಗೀತ ನೀಡಿರುವ ಚಿತ್ರದ ಹಾಡುಗಳು ಇಂದಿಗೂ ಎವರ್‌ಗ್ರೀನ್. ‘ಕೆಂಚಾಲೋ ಮಚ್ಚಾಲೋ’ ಹಾಡಂತೂ ಅಂದಿನಿಂದ ಇಂದಿನವರೆಗೂ ಪಾರ್ಟಿ ಮತ್ತು ಹಬ್ಬಗಳಲ್ಲಿ ಪ್ಲೇ ಆಗುವ ಎವರ್‌ಗ್ರೀನ್ ಸಾಂಗ್. ಇಂತಹ ಸೂಪರ್ ಹಿಟ್ ಸಿನಿಮಾವನ್ನು ಮತ್ತೆ ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇತ್ತೀಚೆಗಷ್ಟೇ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ದರ್ಶನ್ ಜೈಲಿನಲ್ಲಿದ್ದರೂ ಅವರ ಸಿನಿಮಾಗಳಿಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಗಾಂಧಿನಗರವೇ ಬೆರಗಾಗಿದೆ. ಈಗ ‘ಕರಿಯ’ ರಿಲೀಸ್ ಆಗುತ್ತಿರುವುದರಿಂದ ಥಿಯೇಟರ್‌ಗಳಲ್ಲಿ ಮತ್ತೆ ಡಿ-ಬಾಸ್ ಹವಾ ಶುರುವಾಗಲಿದೆ.
