ಮಗನ ಮೊದಲ ಸಿನಿಮಾದಿಂದ ನಿರ್ದೇಶಕನಿಗೆ ಗೇಟ್‌ಪಾಸ್‌ ವಿಚಾರ: ಮೌನ ಮುರಿದ ಪ್ರಿಯಾಂಕಾ ಉಪೇಂದ್ರ

Untitled Design 2026 11 09T132613.285

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ದಂಪತಿಯ ಪುತ್ರ ಆಯುಷ್ ಉಪೇಂದ್ರ ಅವರ ಚೊಚ್ಚಲ ಸಿನಿಮಾದ ನಿರ್ದೇಶಕ ಬದಲಾವಣೆ ವಿಚಾರ ಕನ್ನಡ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನಿರ್ದೇಶಕ ಪುರುಷೋತ್ತಮ್ ಅವರನ್ನು ಚಿತ್ರದಿಂದ ಕೈಬಿಟ್ಟಿರುವ ನಿರ್ಧಾರದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಇದೀಗ ಈ ವಿವಾದದ ಕುರಿತು ನಟಿ ಪ್ರಿಯಾಂಕಾ ಉಪೇಂದ್ರ ಕೊನೆಗೂ ಮೌನ ಮುರಿದಿದ್ದಾರೆ. ನಿರ್ದೇಶಕರನ್ನು ಬದಲಾಯಿಸಲು ಕಾರಣವೇನು ಎಂಬುದನ್ನು ವಿವರಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಕಲ್ಪವೃಕ್ಷ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆಯ ಪರವಾಗಿ ಪ್ರಿಯಾಂಕಾ ಉಪೇಂದ್ರ ಈ ಸ್ಪಷ್ಟನೆ ನೀಡಿದ್ದಾರೆ. ಮಗ ಆಯುಷ್ ಅವರ ಮೊದಲ ಸಿನಿಮಾವನ್ನು ರಕ್ಷಿಸುವುದು, ನಿರ್ಮಾಪಕರು ಹೂಡಿಕೆ ಮಾಡಿರುವ ಹಣವನ್ನು ಸಂರಕ್ಷಿಸುವುದು ಹಾಗೂ ಚಿತ್ರದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ತಮ್ಮ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶ ಎಂದು ಅವರು ತಿಳಿಸಿದ್ದಾರೆ. ನಾಯಕ ನಟನ ಭವಿಷ್ಯದ ವೃತ್ತಿಜೀವನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ತಮ್ಮ ಮೇಲಿದೆ ಎಂದು ಹೇಳಿದ್ದಾರೆ.

ನಿರ್ದೇಶಕ ಬದಲಾವಣೆಗೆ ಕಾರಣವೇನು?

ಚಿತ್ರದ ಚಿತ್ರೀಕರಣ ಆರಂಭವಾದಾಗಿನಿಂದಲೂ ನಿರ್ಮಾಣ ತಂಡಕ್ಕೆ ಅಗತ್ಯವಿರುವ ಹಣಕಾಸು, ಸೃಜನಶೀಲ ಹಾಗೂ ಲಾಜಿಸ್ಟಿಕ್ಸ್‌ ಬೆಂಬಲವನ್ನು ನೀಡಲಾಗಿದೆ ಎಂದು ಪ್ರಿಯಾಂಕಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಚಿತ್ರೀಕರಣದ ವೇಳಾಪಟ್ಟಿ, ತಂಡದ ನಡುವಿನ ಸಂವಹನ ಮತ್ತು ಯೋಜನೆಯ ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದಂತೆ ಹಲವು ಗಂಭೀರ ಸಮಸ್ಯೆಗಳು ಎದುರಾಗಿವೆ ಎಂದು ಅವರು ಆರೋಪಿಸಿದ್ದಾರೆ.

ಕಾಶ್ಮೀರದ ಚಿತ್ರೀಕರಣದ ವೇಳಾಪಟ್ಟಿ, ಎರಡನೇ ಶೆಡ್ಯೂಲ್ ಪೂರ್ಣಗೊಳಿಸುವಿಕೆ ಹಾಗೂ ಸಿನಿಮಾ ಬಿಡುಗಡೆಯ ನಂತರ ಆದಾಯ ಗಳಿಸುವ ಸಾಧ್ಯತೆಗಳ ಕುರಿತು ನಿರ್ಮಾಪಕರಿಗೆ ಆತಂಕ ಎದುರಾಗಿದೆ ಎಂದು ತಿಳಿಸಿದ್ದಾರೆ. 

ಹೀಗಾಗಿ ಚಿತ್ರದ ಭವಿಷ್ಯ, ನಿರ್ಮಾಪಕರ ಹೂಡಿಕೆ ಮತ್ತು ನಾಯಕ ನಟನ ವೃತ್ತಿಜೀವನದ ಹಿತದೃಷ್ಟಿಯಿಂದ ನಿರ್ದೇಶಕರನ್ನು ಬದಲಾಯಿಸುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಪ್ರಿಯಾಂಕಾ ಸ್ಪಷ್ಟಪಡಿಸಿದ್ದಾರೆ. ನಿರ್ದೇಶಕರ ಜೊತೆಗೆ ಛಾಯಾಗ್ರಾಹಕರ ಕಾರ್ಯವೈಖರಿಯ ಬಗ್ಗೆಯೂ ನಿರ್ಮಾಣ ತಂಡಕ್ಕೆ ಅಸಮಾಧಾನವಿದೆ ಎಂಬ ಅಂಶ ಅವರ ಹೇಳಿಕೆಯಲ್ಲಿ ಪ್ರಸ್ತಾಪವಾಗಿದೆ.

ನಿರ್ದೇಶಕ ಪುರುಷೋತ್ತಮ್ ಹೇಳಿದ್ದೇನು?

ಇನ್ನೊಂದೆಡೆ, ನಿರ್ದೇಶಕ ಪುರುಷೋತ್ತಮ್ ಕೂಡ ಈ ವಿಚಾರವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಚಿತ್ರದ ಎರಡು ಶೆಡ್ಯೂಲ್‌ಗಳ ಚಿತ್ರೀಕರಣ ಪೂರ್ಣಗೊಂಡಿದ್ದರೂ ತಮ್ಮನ್ನು ನಿರ್ದೇಶನದ ಜವಾಬ್ದಾರಿಯಿಂದ ದೂರ ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದರು. ನಿರ್ದೇಶನದ ಕೆಲಸ ಮಾಡಿದ್ದರೂ ತಮಗೆ ಸೂಕ್ತ ಸಂಭಾವನೆ ದೊರೆತಿಲ್ಲ ಎಂಬ ಅಳಲನ್ನೂ ತೋಡಿಕೊಂಡಿದ್ದರು.

ಅಲ್ಲದೆ, ಚಿತ್ರದ ಕಥೆ ತಮ್ಮದು ಎಂದು ಹೇಳಿದ್ದ ಪುರುಷೋತ್ತಮ್, ಈ ವಿಚಾರದಲ್ಲಿ ಪ್ರಿಯಾಂಕಾ ಅವರಿಗೆ ಕ್ರೆಡಿಟ್ ನೀಡುತ್ತಿರುವುದರ ಬಗ್ಗೆಯೂ ಪ್ರಶ್ನೆ ಎತ್ತಿದ್ದರು. ಈ ಕುರಿತು ಅವರು ಗ್ಯಾರಂಟಿ ನ್ಯೂಸ್‌ ಜೊತೆ ಮಾತನಾಡಿ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದರು. 

ಫಿಲ್ಮ್ ಚೇಂಬರ್ ಮಧ್ಯಸ್ಥಿಕೆಗೆ ಮನವಿ

ಇದೀಗ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಸ್ಥಿಕೆ ವಹಿಸಬೇಕೆಂದು ಪ್ರಿಯಾಂಕಾ ಉಪೇಂದ್ರ ಮನವಿ ಮಾಡಿದ್ದಾರೆ. ನಿರ್ದೇಶಕರ ಬದಲಾವಣೆ ವಿಚಾರದಿಂದ ಉಂಟಾಗಿರುವ ಗೊಂದಲಗಳಿಗೆ ನ್ಯಾಯಯುತ ಪರಿಹಾರ ಕಂಡುಕೊಳ್ಳಲು ಚೇಂಬರ್ ಸಹಕಾರ ಕೋರಿದ್ದಾರೆ.

ಅಲ್ಲದೆ, ಸಿನಿಮಾ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು ಎಂಬುದೇ ತಮ್ಮ ಉದ್ದೇಶವಾಗಿದ್ದು, ಚಿತ್ರವನ್ನು ಪೂರ್ಣಗೊಳಿಸುವ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ನಿರ್ಮಾಪಕರ ಹೂಡಿಕೆ ವ್ಯರ್ಥವಾಗದಂತೆ ಹಾಗೂ ಆಯುಷ್ ಅವರ ಮೊದಲ ಸಿನಿಮಾ ಉತ್ತಮವಾಗಿ ಮೂಡಿಬರುವಂತೆ ನೋಡಿಕೊಳ್ಳುವುದು ತಮ್ಮ ಆದ್ಯತೆ ಎಂದು ತಿಳಿಸಿದ್ದಾರೆ.

Exit mobile version