ಜೂನ್ 20ರಿಂದ ರಚಿತಾ ರಾಮ್‌-ಸತೀಶ್ ಅಯೋಗ್ಯ-2 ಗಾನಬಜಾನ

ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಮ್ಯೂಸಿಕ್ ಮ್ಯಾಜಿಕ್ ಶುರು

Untitled design 2026 06 12T190826.754

ಗಾಂಧಿನಗರದ ಹಳೇ ರೆಕಾರ್ಡ್ಸ್ ಎಲ್ಲಾ ಧೂಳಿಪಟ ಮಾಡೋಕೆ ಮಂಡ್ಯದ ಅಲ್ಟಿಮೇಟ್ ಹಳ್ಳಿ ಹೈದ ನೀನಾಸಂ ಸತೀಶ್ ಮತ್ತೆ ಸಜ್ಜಾಗಿದ್ದಾರೆ. ಅಂದು ಕೇವಲ ಒಂಬತ್ತೇ ಒಂಬತ್ತು ಲಕ್ಷಕ್ಕೆ ಮಾರಾಟವಾಗಿದ್ದ ಆಲ್ಬಂ, ಇಂದು ಬರೋಬ್ಬರಿ ಎರಡು ಕೋಟಿಗೆ ಬಿಕರಿಯಾಗಿ ಸ್ಯಾಂಡಲ್‌ವುಡ್ ಬಜಾರ್‌ನಲ್ಲಿ ಕ್ರೇಜ್ ಹುಟ್ಟಿಸಿದೆ. ಅಷ್ಟಕ್ಕೂ ಅರ್ಜುನ್ ಜನ್ಯ ಸ್ಟುಡಿಯೋಗೆ ನುಗ್ಗಿದ ಆ ಕಿಲಾಡಿಗಳ ನೆಕ್ಸ್ಟ್ ಪ್ಲಾನ್ ಏನು..? ‘ಏನಮ್ಮಿ ಏನಮ್ಮಿ’ ಅಂತ ಇಡೀ ಸೌತ್ ಇಂಡಿಯಾಗೆ ಹುಚ್ಚು ಹಿಡಿಸಿದ್ದ ರಚ್ಚು-ಸತೀಶ್, ಮತ್ತೊಮ್ಮೆ ಚಮತ್ಕಾರ ಮಾಡ್ತಿದ್ದಾರೆ.

ಕನ್ನಡದಲ್ಲಿ 100 ಮಿಲಿಯನ್ ವೀವ್ಸ್ ಪಡೆದ ಮೊದಲ ಸಾಂಗ್ ಏನಮ್ಮಿ ಏನಮ್ಮಿ ಕ್ರೇಜ್ ಇಂದಿಗೂ ಕಮ್ಮಿಯಾಗಿಲ್ಲ. ಈಗ ಅದೇ ಮ್ಯಾಜಿಕ್ ರಿಪೀಟ್ ಮಾಡಲು ಅಯೋಗ್ಯ-2 ಟೀಮ್ ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಹೀರೋ ಸತೀಶ್ ನೀನಾಸಂ, ಡೈರೆಕ್ಟರ್ ಮಹೇಶ್ ಕುಮಾರ್ ಹಾಗೂ ನಿರ್ಮಾಪಕ ಮುನೇಗೌಡ ಸ್ಟೈಲಿಶ್ ಆಗಿ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸ್ಟುಡಿಯೋಗೆ ಗ್ರಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಪೂಜೆ ನೆರವೇರಿಸಿ ಸಾಂಗ್ ರೆಕಾರ್ಡಿಂಗ್ ಕೆಲಸಕ್ಕೆ ಚಾಲನೆ ನೀಡಲಾಗಿದ್ದು, ಬಹದ್ದೂರ್ ಚೇತನ್ ಕುಮಾರ್ ಈ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಈ ಬಿಗ್ ಅಪ್‌ಡೇಟ್‌ನ ವಿಡಿಯೋವನ್ನು ಡೈರೆಕ್ಟರ್ ಮಹೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಯೋಗ್ಯ ಮೊದಲ ಭಾಗದ ಹಾಡುಗಳು ದೊಡ್ಡ ಚಮತ್ಕಾರವನ್ನೇ ಮಾಡಿದ್ದವು. ಈಗ ಪಾರ್ಟ್-2 ನಲ್ಲೂ ಅದೇ ಕ್ರೇಜ್ ಸೃಷ್ಟಿಸಲು ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಆಲ್ಬಮ್ ರೆಕಾರ್ಡಿಂಗ್ ಕೆಲಸಕ್ಕೆ ಅಫೀಶಿಯಲ್ ಆಗಿ ಚಾಲನೆ ನೀಡಿದ್ದಾರೆ. ಸ್ಟುಡಿಯೋದಲ್ಲಿ ಟ್ಯೂನ್ ಹಾಕುವ ಕೆಲಸ ಬಿರುಸಿನಿಂದ ಸಾಗುತ್ತಿದ್ದು, ಮತ್ತೊಂದೆಡೆ ನಿರ್ದೇಶಕ ಚೇತನ್ ಕುಮಾರ್ ಹಾಡುಗಳಿಗೆ ಕಿಕ್ ಕೊಡುವಂತಹ ಸಾಹಿತ್ಯ ಬರೆಯುತ್ತಿದ್ದಾರೆ. ಸದ್ಯ ಇದೆ ಜೂನ್ 20ರಂದು ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದ್ದು, ಈ ಇಡೀ ತಂಡ ಒಂದಾಗಿ ಮ್ಯೂಸಿಕ್ ಕಂಪೋಸಿಂಗ್‌ನಲ್ಲಿ ತೊಡಗಿರುವ ಕ್ರೇಜಿ ವಿಡಿಯೋ ಸದ್ಯ ಗಾಂಧಿನಗರದಲ್ಲಿ ಸಖತ್ ವೈರಲ್ ಆಗ್ತಿದೆ.

ಅಯೋಗ್ಯ ಪಾರ್ಟ್-1 ರಿಲೀಸ್ ಆದಾಗ ಅದರ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ ಕೇವಲ 9 ಲಕ್ಷಕ್ಕೆ ಖರೀದಿಸಿತ್ತು. ಆದರೆ ಆ ಹಾಡುಗಳು ಬರೋಬ್ಬರಿ 25 ಕೋಟಿಗೂ ಅಧಿಕ ವೀವ್ಸ್ ಪಡೆದು ಕಂಪನಿಗೆ ಕೋಟ್ಯಂತರ ಲಾಭ ತಂದುಕೊಟ್ಟಿದ್ದವು. ಇದೇ ನಂಬಿಕೆಯಿಂದ ಈಗ ಆನಂದ್ ಆಡಿಯೋ ಶ್ಯಾಮ್ ಅವರು ‘ಅಯೋಗ್ಯ-2’ ಚಿತ್ರದ ಒಟ್ಟು 5 ಹಾಡುಗಳ ಆಡಿಯೋ ರೈಟ್ಸ್ ಅನ್ನು ಕೇಳಿ, ಬರೋಬ್ಬರಿ 2 ಕೋಟಿ ದಾಖಲೆ ಮೊತ್ತಕ್ಕೆ ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಮೊದಲ ಭಾಗಕ್ಕಿಂತ ಬರೋಬ್ಬರಿ 20 ಪಟ್ಟು ಹೆಚ್ಚು ಬೆಲೆಗೆ ಆಡಿಯೋ ಮಾರಾಟವಾಗಿ ಚಿತ್ರತಂಡಕ್ಕೆ ಶೂಟಿಂಗ್ ಮುಗಿಯುವ ಮುನ್ನವೇ ಬಿಗ್ಗೆಸ್ಟ್ ವಿಕ್ಟರಿ ಸಿಕ್ಕಿದೆ.

ಮುನೇಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಅಯೋಗ್ಯ-2 ಪಕ್ಕಾ ಹಳ್ಳಿ ಸೊಗಡಿನ, ಟಿಪಿಕಲ್ ನಾಟಿ ಸ್ಟೈಲ್ ಸಿನಿಮಾವಾಗಿದ್ದು, ಮತ್ತದೇ ಮಂಡ್ಯದ ಸುತ್ತಮುತ್ತ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿದೆ. ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲೇ ಸೆನ್ಸಾರ್ ಮಂಡಳಿಯ ಮುಂದೆ ಹೋಗಲಿದೆ. ಎಲ್ಲವೂ ಪ್ಲ್ಯಾನ್ ಪ್ರಕಾರ ನಡೆದರೆ ರಚಿತಾ ರಾಮ್ -ಸತೀಶ್ ಜೋಡಿ ಪ್ರೇಕ್ಷಕರನ್ನು ಥಿಯೇಟರ್‌ನಲ್ಲಿ ರಂಜಿಸಲು ಬರಲಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂಯೋ, ಗ್ಯಾರಂಟಿ ನ್ಯೂಸ್

Exit mobile version