‘3 ಇಡಿಯಟ್ಸ್’ಗೂ ಸೋನಂ ವಾಂಗ್ಚುಕ್ ಸಂಬಂಧವೇ ಇಲ್ಲ: ವೈರಲ್ ನಂಬಿಕೆಗೆ ಆಮಿರ್ ಖಾನ್ ಬ್ರೇಕ್

Your paragraph text (2)

ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಗೂ ಸಂದೇಶಾತ್ಮಕ ಸಿನಿಮಾಗಳಲ್ಲಿ ‘3 ಇಡಿಯಟ್ಸ್’ ಕೂಡ ಒಂದಾಗಿದೆ. ಸಾಮಾನ್ಯವಾಗಿ ಈ ಸಿನಿಮಾದಲ್ಲಿನ ರಾಂಚೋ ಅಥವಾ ಫುನ್ಸುಖ್ ವಾಂಗ್ಡು ಪಾತ್ರವು ಲಡಾಖ್‌ನ ಶಿಕ್ಷಣ ತಜ್ಞ ಮತ್ತು ನವೋದ್ಯಮಿ ಸೋನಂ ವಾಂಗ್ಚುಕ್ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹೇಳಲಾಗುತ್ತಿತ್ತು. ಆದರೆ ಆಮಿರ್ ಖಾನ್ ಈ ಹೇಳಿಕೆಯನ್ನು ತಪ್ಪು ಕಲ್ಪನೆ ಎಂದು ಸ್ಪಷ್ಟಪಡಿಸಿದ್ದಾರೆ.

ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಆಮಿರ್ ಖಾನ್, ‘3 ಇಡಿಯಟ್ಸ್’ ಹಾಗೂ ಸೋನಂ ವಾಂಗ್ಚುಕ್ ನಡುವಿನ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ಅವರು, ಸಿನಿಮಾ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕ ರಾಜಕುಮಾರ್ ಹಿರಾನಿ, ಬರಹಗಾರ ಅಭಿಜಾತ್ ಜೋಶಿ ಅವರಿಗೆ ಸೋನಂ ವಾಂಗ್ಚುಕ್ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿಸಿದರು.

“‘3 ಇಡಿಯಟ್ಸ್’ ಸಿನಿಮಾ ಮಾಡುತ್ತಿದ್ದಾಗ ನಮಗೆ ಸೋನಂ ವಾಂಗ್ಚುಕ್ ಅವರ ಪರಿಚಯವೇ ಇರಲಿಲ್ಲ. ಅವರ ಜೀವನದ ಆಧಾರದ ಮೇಲೆ ಪಾತ್ರವನ್ನು ರೂಪಿಸಲಾಗಿದೆ ಎನ್ನುವುದು ಸತ್ಯವಲ್ಲ. ಇದು ವರ್ಷಗಳಿಂದ ಹರಿದಾಡುತ್ತಿರುವ ತಪ್ಪು ಕಲ್ಪನೆ,” ಎಂದು ಆಮಿರ್ ಖಾನ್ ಹೇಳಿದರು.

ಇತ್ತೀಚೆಗೆ ‘3 ಇಡಿಯಟ್ಸ್’ ಸಿನಿಮಾದ ಚತುರ್ ರಾಮಲಿಂಗಂ ಪಾತ್ರದಲ್ಲಿ ನಟಿಸಿದ್ದ ಓಮಿ ವೈದ್ಯ ಅವರು ಸೋನಂ ವಾಂಗ್ಚುಕ್ ಅವರಿಗೆ ಬೆಂಬಲ ಸೂಚಿಸಿ ಒಂದು ವಿಡಿಯೋ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಫುನ್ಸುಖ್ ವಾಂಗ್ಡು ಪಾತ್ರವು ಸೋನಂ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ ಎಂದು ಅವರು ಹೇಳಿದ್ದರು. ಇದೇ ಹೇಳಿಕೆ ಮತ್ತೊಮ್ಮೆ ಈ ಚರ್ಚೆಯನ್ನು ಮುನ್ನೆಲೆಗೆ ತಂದಿತ್ತು.

ಆದರೆ ಆಮಿರ್ ಖಾನ್, ಸೋನಂ ವಾಂಗ್ಚುಕ್ ಅವರ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದರು. “ಅವರು ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಮಾಜದ ಅಭಿವೃದ್ಧಿಗಾಗಿ ಮಾಡುತ್ತಿರುವ ಕೆಲಸ ಶ್ಲಾಘನೀಯ. ಅವರನ್ನು ಗೌರವಿಸಲು ‘3 ಇಡಿಯಟ್ಸ್’ ಚಿತ್ರದ ಪಾತ್ರ ಅವರ ಜೀವನ ಆಧಾರಿತವಾಗಿರಬೇಕೆಂಬ ಅವಶ್ಯಕತೆ ಇಲ್ಲ,” ಎಂದರು.

ಪ್ರಸ್ತುತ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಮಿರ್, ಎಲ್ಲವೂ ಉತ್ತಮ ರೀತಿಯಲ್ಲಿ ಅಂತ್ಯವಾಗಲಿ ಹಾಗೂ ಅವರು ಆರೋಗ್ಯವಾಗಿರಲಿ ಎಂದು ಆಶಿಸಿದರು.

 

Exit mobile version