ನ್ಯೂ ಇಯರ್‌ಗೆ ಯಶ್, ಧ್ರುವ, ವಿಜಯ್, ಗಣಿ ಪ್ರಾಜೆಕ್ಟ್ಸ್‌‌

2025ಗಿಂತ ಜೋರಿರಲಿದೆ 2026 ಸ್ಯಾಂಡಲ್‌ವುಡ್ ಪರ್ವ

Untitled design 2025 12 30T140947.722

ನೀವೆಲ್ಲಾ ನ್ಯೂ ಇಯರ್ ಪಾರ್ಟಿ ಮಾಡೋಕೆ ಕಾತರರಾಗಿದ್ದೀರಿ. ಆದ್ರೆ ಹೊಸ ವರ್ಷದಲ್ಲಿ ನಿಮ್ಮನ್ನ ರಂಜಿಸೋಕೆ ಸ್ಯಾಂಡಲ್‌ವುಡ್‌‌ ಹಿಂದೆಂದಿಗಿಂತಲೂ ಜೋರಾಗಿ ತಯಾರಾಗಿ ನಿಂತಿದೆ. ಭಿನ್ನ ವಿಭಿನ್ನ ಜಾನರ್ ಸಿನಿಮಾಗಳು ಟೀಸರ್, ಫಸ್ಟ್‌ಲುಕ್‌‌ಗಳಿಂದ ನಾಡಿಮಿಡಿತ ಹೆಚ್ಚಿಸಿವೆ. ಅದ್ರಲ್ಲೂ ಯಶ್ ಅವರ ಟಾಕ್ಸಿಕ್, ದುನಿಯಾ ವಿಜಯ್ ಲ್ಯಾಂಡ್‌‌ಲಾರ್ಡ್‌, ಧ್ರುವ ಕೆಡಿ, ಗಣಿಯ ಯುವರ್ಸ್‌ ಸಿನ್ಸಿಯರ್ಲಿ ರಾಮ್ ಅಂತಹ ಚಿತ್ರಗಳು ಕ್ಯೂರಿಯಾಸಿಟಿ ಹುಟ್ಟಿಸಿವೆ. ಹಾಗಾದ್ರೆ ಹೊಸ ವರ್ಷದಲ್ಲಿ ಬೆಳ್ಳಿಪರದೆ ಆವರಿಸಿಲಿರೋ ಹೊಚ್ಚ ಹೊಸ ಸಿನಿಮಾಗಳು ಯಾವ್ಯಾವು ಅಂತೀರಾ..? ಇಲ್ಲಿದೆ ಕಂಪ್ಲೀಟ್ ಲಿಸ್ಟ್.

ಯೆಸ್.. 250ಕ್ಕೂ ಅಧಿಕ ಚಿತ್ರಗಳ ರಿಲೀಸ್‌ನಿಂದ ಈ 2025 ಮುಗಿದೇ ಹೋಯ್ತು. ಅದ್ರಲ್ಲಿ ಗೆದ್ದಿದ್ದು ಮಾತ್ರ ಶೆಟ್ರ ಗ್ಯಾಂಗ್‌ವೊಂದೇ. ಉಳಿದ ಐದಾರು ಸಿನಿಮಾಗಳು ತಕ್ಕ ಮಟ್ಟಿಗೆ ಸೌಂಡ್ ಮಾಡಿದ್ರೂ ಸಹ, ನಿರ್ಮಾಪಕರು ನಿರೀಕ್ಷಿಸಿದ ರೇಂಜ್‌ಗೆ ದುಡ್ಡು ಮಾಡಲಿಲ್ಲ. ಆದ್ರೀಗ ಹೊಸ ಕನಸುಗಳೊಂದಿಗೆ ಹೊಸ ವರ್ಷಕ್ಕೆ ಕಾಲಿಡ್ತಿದೆ ಸ್ಯಾಂಡಲ್‌ವುಡ್. 2026ನ ನಾವೆಲ್ಲಾ ವೆಲ್ಕಮ್ ಮಾಡೋಕೆ ರೆಡಿ ಆಗಿದ್ದೀವಿ. ಈ ವರ್ಷ ಆದ ತಪ್ಪುಗಳು ಹೊಸ ವರ್ಷದಲ್ಲಿ ಮರುಕಳಿಸದಿರಲಿ ಅನ್ನೋ ಆಶಾಭಾವನೆ ಎಲ್ಲರದ್ದೂ ಆಗಿದೆ.

ನಮ್ಮ ಕನ್ನಡ ಚಿತ್ರರಂಗದ ಇತ್ತೀಚೆಗೆ ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌‌ಗಳಲ್ಲಿ ಸ್ಟ್ಯಾಂಡರ್ಡ್‌ಗಳನ್ನ ಸೆಟ್ ಮಾಡಿತ್ತು. ಅದಕ್ಕೆ ಕಾರಣ ಕೆಜಿಎಫ್ ಹಾಗೂ ಕಾಂತಾರ ಚಿತ್ರಗಳು. ಅವುಗಳ ನಂತ್ರ ಮತ್ತೆ ಅಂತಹ ಯಾವುದೇ ಸಿನಿಮಾ ಬಿಗ್‌‌ಸ್ಕ್ರೀನ್‌ಗೆ ಬಂದ ನಿದರ್ಶನವೇ ಇಲ್ಲ. ಇದೀಗ ರಾಕಿಂಗ್ ಸ್ಟಾರ್ ಯಶ್ ತಮ್ಮ ಟಾಕ್ಸಿಕ್ ಚಿತ್ರದ ಮೂಲಕ ಅಂಥದ್ದೊಂದು ಭರವಸೆ ನೀಡಿದ್ದಾರೆ. ಅವರೇ ಕಥೆ ಬರೆದು, ನಟಿಸಿ, ಕೆವಿಎನ್ ಜೊತೆಗೂಡಿ ನಿರ್ಮಾಣ ಮಾಡೋ ಮೂಲಕ ಮಾರ್ಚ್‌ 19ಕ್ಕೆ ವಿಶ್ವ ಸಿನಿದುನಿಯಾಗೆ ಎಂಟ್ರಿ ಕೊಡೋ ಸೂಚನೆ ನೀಡಿದ್ದಾರೆ.

ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್‌‌ ಯಶ್ ಕರಿಯರ್‌ನ ಮಹತ್ವದ ಸಿನಿಮಾ. ಈ ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು, ಸದ್ಯ ಕಿಯಾರಾ ಹಾಗೂ ಹುಮಾ ಖುರೇಷಿ ಲುಕ್ಸ್ ಸಖತ್ ಕಿಕ್ ಕೊಡ್ತಿವೆ. ಇದು ಬಾಕ್ಸ್ ಆಫೀಸ್‌‌ನಲ್ಲಿ ಎಷ್ಟು ಕೋಟಿ ಲೂಟಿ ಮಾಡುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಜನವರಿ 23ಕ್ಕೆ ದುನಿಯಾ ವಿಜಯ್ ನಟನೆಯ, ಜಡೇಶ್ ನಿರ್ದೇಶನದ ಭಿನ್ನ ಅಲೆಯ ಸಿನಿಮಾ ಲ್ಯಾಂಡ್‌ಲಾರ್ಡ್‌ ಪ್ರೇಕ್ಷಕರ ಮುಂದೆ ಬರ್ತಿದೆ. 80ರ ದಶಕದ ಕಥಾನಕದ ಈ ಸಿನಿಮಾ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷದ ಕಥೆ ಹೊಂದಿದೆ. ರಾಚಯ್ಯನಾಗಿ ದುನಿಯಾ ವಿಜಯ್, ನಿಂಗವ್ವನಾಗಿ ರಚಿತಾ ರಾಮ್ ಎಲ್ಲರ ಹುಬ್ಬೇರಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಸಾಹುಕಾರನ ಪಾತ್ರದಲ್ಲಿ ಖದರ್ ತೋರಿದ್ದಾರೆ. ಸಾರಥಿ ಸಿನಿಮಾದ ಬಳಿಕ ಅದೇ ನಿರ್ಮಾಪಕರಿಂದ ತಯಾರಾಗಿರೋ ಈ ಚಿತ್ರ, ಬೆಂಚ್‌‌ಮಾರ್ಕ್‌ ಚಿತ್ರವಾಗೋ ಸಾಧ್ಯತೆಯಿದೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬೋನ ಕೆಡಿ ಸಿನಿಮಾ ಕೂಡ ಅತೀವ ನಿರೀಕ್ಷೆ ಮೂಡಿಸಿದೆ. ರೆಟ್ರೋ ಅಂಡರ್‌‌‌ವರ್ಲ್ಡ್‌ ಕಥಾನಕದ ಈ ಸಿನಿಮಾದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಹಾಗೂ ರವಿಚಂದ್ರನ್ ಕೂಡ ಇದ್ದು, ರಿಚ್ ಮೇಕಿಂಗ್, ಬ್ಲಾಕ್ ಬಸ್ಟರ್ ಹಿಟ್ ಸಾಂಗ್ಸ್‌‌ನಿಂದ ದೊಡ್ಡದಾಗಿಯೇ ಸಿಗ್ನಲ್ ನೀಡಿದೆ. ಇದು ಕೂಡ ಏಪ್ರಿಲ್‌‌ನಲ್ಲಿ ತೆರೆಗಪ್ಪಳಿಸೋ ಧಾವಂತದಲ್ಲಿದೆ.

ಯೆಸ್.. ನ್ಯೂ ಇಯರ್‌‌ ಮೂಲಕ ಕರಿಯರ್‌‌‌ನ ಚೆಂದವಾಗಿಸಿಕೊಳ್ಳೋಕೆ ಸಾಲು ಸಾಲು ಯಂಗ್‌ಸ್ಟರ್‌‌ಗಳು ತಮ್ಮ ಸಿನಿಮಾಗಳನ್ನ ಪ್ರೇಕ್ಷಕರಿಗೆ ಉಣಬಡಿಸಲು ತಯಾರಿದ್ದಾರೆ. ಆ ಪೈಕಿ ಬನಾರಸ್ ಚಿತ್ರದಿಂದ ಭರವಸೆ ಮೂಡಿಸಿದ್ದ ಝೈದ್ ಖಾನ್ ನಟನೆಯ ಎರಡನೇ ಸಿನಿಮಾ ಕಲ್ಟ್ ಕೂಡ ಒಂದು. ಇಂಟೆನ್ಸ್ ಲವ್ ಸಿನಿಮಾ ಇದಾಗಿದ್ದು, ಕಲ್ಟ್ ಹಾಗೂ ಕ್ಲಾಸಿಕ್ ಬ್ಯೂಟಿಗಳ ಟ್ರಯಾಂಗಲ್ ಪ್ರೇಮ್ ಕಹಾನಿ ಹೊಂದಿರಲಿದೆ. ಟೀಸರ್, ಸಾಂಗ್ಸ್ ಭೇಷ್ ಅನಿಸಿಕೊಂಡಿದ್ದು, ಸಿನಿಮಾ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ.

ಮುಧೋಳ್ ಸಿನಿಮಾದಿಂದ ರವಿಚಂದ್ರನ್ ಕಿರಿಯಮಗ ಮನೋರಂಜನ್ ಕರಿಯರ್ ರೀ-ಸ್ಟಾರ್ಟ್‌ ಮಾಡ್ತಿದ್ದಾರೆ. ಟೀಸರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಜನ ಹೇಗೆ ಸ್ವೀಕರಿಸ್ತಾರೆ ಅನ್ನೋದೇ ಪ್ರಶ್ನೆ. ಇನ್ನೂ ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಕೂಡ ಮ್ಯಾಂಗೋ ಪಚ್ಚನಾಗಿ ಮೈಸೂರಿನ ರಿಯಲ್ ಕಥೆಯನ್ನ ಹೊತ್ತು ಬರ್ತಿದ್ದಾರೆ. ಟೀಸರ್ ಜೊತೆ ಸಾಂಗ್ ಇಂಟರೆಸ್ಟಿಂಗ್ ಆಗಿದೆ. ಕಿಚ್ಚನ ಫ್ಯಾನ್ಸ್ ಕೈ ಹಿಡಿದ್ರೆ ಸಾಕು ಸಂಚಿತ್ ಹೀರೋ ಆಗೋದು ಪಕ್ಕಾ.

ಹಲ್ಕಾಡಾನ್.. ಟಗರು, ಸಲಗ, ಯುಐ ಚಿತ್ರಗಳ ನಿರ್ಮಾಪಕ ಕೆ ಪಿ ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗ್ತಿರೋ ಸಿನಿಮಾ. ಮಂಗಳೂರಿನ ಬ್ಯಾಕ್‌‌ಡ್ರಾಪ್‌‌ನಲ್ಲಿ ಅಮೃತಾ ಅಯ್ಯಂಗಾರ್ ಹಾಗೂ ಸಲಾರ್ ಖ್ಯಾತಿಯ ಪ್ರಮೋದ್ ಪಂಜು ಲೀಡ್‌‌ನಲ್ಲಿ ಸಿದ್ದವಾಗ್ತಿರೋ ಚಿತ್ರ. ಸಾಯಿಕುಮಾರ್ ಫ್ಯಾನ್ಸ್ ಆಗಿರೋ ಹಲ್ಕಾಡಾನ್ ಸಿನಿಮಾದಲ್ಲಿ ಡೈಲಾಗ್‌ ಕಿಂಗ್ ಸಾಯಿಕುಮಾರ್ ಕೂಡ ಇದ್ದು, ಶೂಟಿಂಗ್ ಭರದಿಂದ ಸಾಗ್ತಿದೆ.

ಒಂದು ಮೊಟ್ಟೆಯ ಕಥೆ ಮೂಲಕ ಕೂದಲಿಲ್ಲದವರ ವ್ಯಥೆ ಹೇಳಲು ಬಂದ ರಾಜ್ ಬಿ ಶೆಟ್ಟಿ, ಇಂದು ಸ್ಯಾಂಡಲ್‌ವುಡ್‌ನ ಸೆನ್ಸೇಷನಲ್ ಆ್ಯಕ್ಟರ್. ಪರಭಾಷೆಗಳಲ್ಲೂ ಮಿಂಚು ಹರಿಸುತ್ತಿರೋ ಮೋಸ್ಟ್ ವರ್ಸಟೈಲ್ ಆ್ಯಕ್ಟರ್. ಇವರ ಟರ್ಬೋ, 45, ಸು ಫ್ರಮ್ ಸೋ ಚಿತ್ರಗಳ ಬಳಿಕ ಸದ್ಯ ರಕ್ಕಸಪುರದೋಳ್ ಟೀಸರ್ ಎಲ್ಲರ ಹುಬ್ಬೇರಿಸಿದೆ. ಕೊಳ್ಳೇಗಾಲದ ಮಾಟ, ಮಂತ್ರ, ತಂತ್ರಗಳ ಜೊತೆ ಖಾಕಿದಾರಿಯ ಕಹಾನಿ ಹೇಳುವ ಕಥೆಯಿಂದ ಸಿನಿರಸಿಕರನ್ನ ಥಿಯೇಟರ್‌ಗೆ ಸೆಳೆಯಲಿದೆ.

ನೀನಾಸಂ ಸತೀಶ್.. ಕನ್ನಡದ ಅದ್ಭುತ ಕಲಾವಿದರಲ್ಲಿ ಒಬ್ಬರು. ದಿ ರೈಸ್ ಆಫ್ ಅಶೋಕ ಚಿತ್ರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಾರಾಜಿಸೋಕೆ ಸಜ್ಜಾಗಿದ್ದಾರೆ. ಕಾಂತಾರ ಸಪ್ತಮಿ ಗೌಡ ಜೊತೆ ತೆರೆ ಹಂಚಿಕೊಂಡಿರೋ ಸತೀಶ್, ಒಂದು ಸಂಘರ್ಷದ ಕಥೆಯೊಂದಿಗೆ ಎಂಟರ್‌ಟೈನ್ ಮಾಡಲು ಕಾತರರಾಗಿದ್ದಾರೆ. ಈಗಾಗ್ಲೇ ಫಸ್ಟ್ ಲುಕ್ ಜೊತೆ ಡಿವೋಷನಲ್ ಸಾಂಗ್ ಹಾಗೂ ರೊಮ್ಯಾಂಟಿಕ್ ಡುಯೆಟ್ ಸಾಂಗ್ ಗಮನ ಸೆಳೆದಿದ್ದು, ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

ರಿಷಬ್ ಶೆಟ್ರ ಕಾಂತಾರ ಚಿತ್ರದ ಬಳಿಕ ಕರಾವಳಿ ನೆಲದ ಕಥೆಗಳಿಗೆ ಎಲ್ಲಿಲ್ಲದ ಬೇಡಿಕೆ. ಆ ನಿಟ್ಟಿನಲ್ಲಿ ಕೊರಗಜ್ಜ ಸಿನಿಮಾ ಸಖತ್ ಪ್ರಾಮಿಸಿಂಗ್ ಕಂಟೆಂಟ್‌‌ನಿಂದ ಪಂಚಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಸಿನಿಮಾ ಕೂಡ ಸ್ಯಾಂಪಲ್ಸ್‌ನಿಂದಲೇ ಬಹುದೊಡ್ಡ ಭರವಸೆ ಮೂಡಿಸಿದೆ. ಹೌದು.. ಗುರುದತ್ತ ಗಾಣಿಗ ನಿರ್ದೇಶನದ ಕರಾವಳಿಯಲ್ಲಿ ಕಂಬಳದ ಕೋಣಗಳು, ಅವುಗಳನ್ನ ಪಳಗಿಸೋ ಪ್ರಾಸಸ್ ಸೇರಿದಂತೆ ಸಾಕಷ್ಟು ವಿಷಯಗಳನ್ನ ಹೇಳಲಾಗ್ತಿದೆ. ಇಲ್ಲಿ ಪ್ರಜ್ಜು ಜೊತೆ ರಾಜ್ ಬಿ ಶೆಟ್ಟಿ ಕೂಡ ಸೆಂಟರ್ ಆಫ್ ಅಟ್ರ್ಯಾಕ್ಷನ್.

ರಮೇಶ್ ಅರವಿಂದ್ ನಟನೆಯ ದೈಜಿ ಸಿನಿಮಾ ಹಾರರ್ ಥ್ರಿಲ್ಲರ್ ಜಾನರ್‌ದಾಗಿದ್ದು, ಬಹುತೇಕ ಫಾರಿನ್‌‌ನಲ್ಲೇ ಚಿತ್ರಿತವಾಗಿದೆ. ಟೀಸರ್ ವೆರಿ ವೆರಿ ಇಂಟರೆಸ್ಟಿಂಗ್ ಆಗಿದ್ದು, ಆಕಾಶ್ ಶ್ರೀವತ್ಸ ಈ ಬಾರಿ ಬೇರೆ ಯಾರೂ ಟಚ್ ಮಾಡದಂತಹ ಕಂಟೆಂಟ್‌ನ ಇದರಲ್ಲಿ ತೋರಿಸೋಕೆ ಹೊರಟಂತಿದೆ.

ಯುವರ್ಸ್‌ ಸಿನ್ಸಿಯರ್ಲಿ ರಾಮ್.. ಗೋಲ್ಡನ್ ಸ್ಟಾರ್ ಗಣೇಶ್ ಹಾಗು ರಮೇಶ್ ಅರವಿಂದ್ ಕಾಂಬೋ ಸಿನಿಮಾ. ಇದರ ಟೀಸರ್ ಝಲಕ್ ಪೇಂಟಿಂಗ್‌ನಂತೆ ಬಂದಿದ್ದು, ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ. ಕಳೆದ ವರ್ಷ ಕೃಷ್ಣ ಪ್ರಣಯ ಸಖಿ ಚಿತ್ರದಿಂದ ಎಲ್ಲರ ದಿಲ್ ಜೊತೆ ಬಾಕ್ಸ್ ಆಫೀಸ್ ದೋಚಿದ್ದ ಗಣಿ, ಈ ಬಾರಿ ಎಷ್ಟೆಲ್ಲಾ ಹಂಗಾಮ ಮಾಡ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಒನ್ಸ್ ಅಗೈನ್ ಲವ್ ಮಾಕ್ಟೇಲ್ ಸೀರೀಸ್‌‌ ಸಿನಿಮಾ ಹೊತ್ತು ಬರ್ತಿದ್ದಾರೆ. ಯೆಸ್.. ಲವ್ ಮಾಕ್ಟೇಲ್-3 ತೆರೆಗೆ ಬರೋಕೆ ರೆಡಿಯಿದ್ದು, ಅದರೊಟ್ಟಿಗೆ ಕೃಷ್ಣ-ಪ್ರಕಾಶ್ ಕಾಂಬೋನ ಫಾದರ್ ಕೂಡ ರಂಜಿಸೋಕೆ ತಯಾರಿದೆ. ಆರ್ ಚಂದ್ರು ನಿರ್ಮಾಣದ ಈ ಫಾದರ್ ಸಿನಿಮಾ, ತಂದೆ-ಮಕ್ಕಳಿಗೆ ಟ್ರಿಬ್ಯೂಟ್ ಚಿತ್ರವಾಗಲಿದ್ದು, ಗೆಲ್ಲೋ ಸೂಚನೆ ಸಿಕ್ಕಿದೆ.

ಶಿವಣ್ಣ ಅವರ ಡ್ಯಾಡ್ ಸೇರಿದಂತೆ, 666 ಆಪರೇಷನ್ ಡ್ರೀಮ್ ಥಿಯೇಟರ್, ಡಾಲಿಯ ಉತ್ತರಕಾಂಡ, ಹಲಗಲಿ ಚಿತ್ರಗಳು ಕೂಡ 2026ರ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿವೆ. ಅದೃಷ್ಟಲಕ್ಷ್ಮೀ ಹೊಸ ವರ್ಷದಲ್ಲಿ ಯಾರಿಗೆ ಒಲಿಯುತ್ತಾಳೆ ಯಾರಿಗೆ ಇಲ್ಲ ಅನ್ನೋದಷ್ಟೇ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version