ಪ್ರಪಂಚದಾದ್ಯಂತ ಕೋಟ್ಯಂತರ ಜನರು ದೈನಂದಿನ ಸಂವಹನಕ್ಕಾಗಿ ಬಳಸುತ್ತಿರುವ ವಾಟ್ಸಾಪ್ ಈಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ನಿಮ್ಮ ಖಾಸಗಿ ಚಾಟ್‌ಗಳು ನಿಜವಾಗಿಯೂ ಸುರಕ್ಷಿತವೇ? ಕಂಪನಿ ಹೇಳುವ ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಕೇವಲ ಮಾರ್ಕೆಟಿಂಗ್ ಗಿಮಿಕ್ ಆಗಿದೆಯೇ? ಇಂತಹ ಪ್ರಶ್ನೆಗಳು ಜಾಗತಿಕವಾಗಿ ಎದ್ದಿವೆ.
ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ಕೋರ್ಟ್‌ನಲ್ಲಿ ಜನವರಿ 23-25, 2026ರಂದು ದಾಖಲಾಗಿರುವ ಹೊಸ ಕ್ಲಾಸ್ ಆಕ್ಷನ್ ದಾವೆಯು ಮೆಟಾ ಪ್ಲಾಟ್‌ಫಾರ್ಮ್ಸ್ (ವಾಟ್ಸಾಪ್‌ನ ಮಾತೃ ಸಂಸ್ಥೆ) ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ಅಂತಾರಾಷ್ಟ್ರೀಯ ಬಳಕೆದಾರರು ಸೇರಿದ ದೂರುದಾರರು ಹೇಳುವುದು:
- ಮೆಟಾ ಮತ್ತು ವಾಟ್ಸಾಪ್ ಬಳಕೆದಾರರ ಖಾಸಗಿ ಸಂದೇಶಗಳನ್ನು ಸಂಗ್ರಹಿಸುತ್ತಾರೆ, ವಿಶ್ಲೇಷಿಸುತ್ತಾರೆ ಮತ್ತು ಪ್ರವೇಶಿಸಬಹುದು ಎಂದು.
- ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಇದ್ದರೂ ಕಂಪನಿಗೆ ಸಂದೇಶಗಳನ್ನು ಓದುವ ಮತ್ತು ನೋಡುವ ಸಾಮರ್ಥ್ಯವಿದೆ.
- ಕಂಪನಿಯ ಉದ್ಯೋಗಿಗಳು ಅಗತ್ಯವಿದ್ದಾಗ ಸಂದೇಶಗಳನ್ನು ಪರಿಶೀಲಿಸಬಹುದು.
- ಪ್ರೈವಸಿ ಬಗ್ಗೆ ಮಾಡುತ್ತಿರುವ ಪ್ರಚಾರವೆಲ್ಲಾ ತಪ್ಪುದಾರಿಗೆಳೆಯುವಿಕೆ ಮತ್ತು ವ್ಯವಹಾರಿಕ ತಂತ್ರ ಎಂದು.
ಈ ಆರೋಪಗಳು ಸಾಬೀತಾದರೆ, ವಾಟ್ಸಾಪ್ ಬಳಕೆದಾರರಲ್ಲಿ ಭಾರಿ ಆತಂಕ ಹರಡಬಹುದು, ವಿಶೇಷವಾಗಿ ಭಾರತದಂತಹ ದೇಶಗಳಲ್ಲಿ, ಇಲ್ಲಿ ವಾಟ್ಸಾಪ್ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ ಆಗಿದೆ.
ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ನಿಜವೇ ಅಥವಾ ಸುಳ್ಳು?
ವಾಟ್ಸಾಪ್ ತನ್ನ ಅತಿ ದೊಡ್ಡ ಮಾರಾಟದ ಅಂಶವಾಗಿ ಸಿಗ್ನಲ್ ಪ್ರೋಟೋಕಾಲ್ ಆಧಾರಿತ ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಅನ್ನು ಹೇಳಿಕೊಳ್ಳುತ್ತದೆ. ಅಂದರೆ, ಸಂದೇಶಗಳನ್ನು ಕಳುಹಿಸುವವರು ಮತ್ತು ಸ್ವೀಕರಿಸುವವರು ಹೊರತುಪಡಿಸಿ ಯಾರೂ (ವಾಟ್ಸಾಪ್ ಸಹ) ಓದಲು ಸಾಧ್ಯವಿಲ್ಲ ಎಂದು. ಆದರೆ ಈ ದಾವೆಯ ಪ್ರಕಾರ ಇದು ಸಂಪೂರ್ಣ ಸತ್ಯವಲ್ಲ ಕಂಪನಿಗೆ ಬ್ಯಾಕ್‌ಡೋರ್ ಅಥವಾ ಇತರ ಮಾರ್ಗಗಳ ಮೂಲಕ ಪ್ರವೇಶ ಸಾಧ್ಯವಿದೆ ಎಂದು ಆರೋಪ.
ಮೆಟಾ ಕಂಪನಿಯ ಪ್ರತಿಕ್ರಿಯೆ :
ಮೆಟಾ ಈ ಆರೋಪಗಳನ್ನು ತೀವ್ರವಾಗಿ ತಿರಸ್ಕರಿಸಿದೆ. ಕಂಪನಿಯ ವಕ್ತಾರ ಆಂಡಿ ಸ್ಟೋನ್ ಹೇಳಿದ್ದಾರೆ:
“ಜನರ ವಾಟ್ಸಾಪ್ ಸಂದೇಶಗಳು ಎನ್‌ಕ್ರಿಪ್ಟ್ ಆಗಿಲ್ಲ ಎಂಬ ಯಾವುದೇ ಆರೋಪ ಸಂಪೂರ್ಣವಾಗಿ ಸುಳ್ಳು ಮತ್ತು ಅಸಂಬದ್ಧ. ಇದು ಒಂದು ಅಸಂಗತ ಮತ್ತು ಅಡ್ಡದಾರಿಯ ದಾವೆಯಾಗಿದೆ.”
ಕಳೆದ ಹತ್ತು ವರ್ಷಗಳಿಂದ ವಾಟ್ಸಾಪ್ ಸಿಗ್ನಲ್ ಪ್ರೋಟೋಕಾಲ್ ಬಳಸುತ್ತಿದ್ದು, ಬಳಕೆದಾರರ ಪ್ರೈವಸಿಯನ್ನು ರಕ್ಷಿಸುತ್ತಿದೆ ಎಂದು ಮೆಟಾ ಪ್ರತಿಪಾದಿಸಿದೆ. ಕಂಪನಿ ಈ ಕೇಸನ್ನು ಫ್ರಿವಲಸ್ (ಅಸಂಗತ) ಎಂದು ಕರೆದು, ಸ್ಯಾಂಕ್ಷನ್‌ಗಳನ್ನು ಕೋರಲು ಉದ್ದೇಶಿಸಿದೆ ಎಂದು ಹೇಳಿದೆ.
ಭಾರತದ ಬಳಕೆದಾರರಿಗೆ ಏನು ಅರ್ಥ?
ಭಾರತದಲ್ಲಿ ಕೋಟ್ಯಂತರರು ವಾಟ್ಸಾಪ್ ಬಳಸುತ್ತಿದ್ದು, ಈ ವಿವಾದದಿಂದ ಆತಂಕ ಹೆಚ್ಚಾಗಿದೆ. ಒಂದು ವೇಳೆ ಕೋರ್ಟ್‌ನಲ್ಲಿ ಆರೋಪಗಳು ಸಾಬೀತಾದರೆ:
- ಭಾರಿ ದಂಡ
- ಬಳಕೆದಾರರ ವಿಶ್ವಾಸ ಕಳೆದುಕೊಳ್ಳುವಿಕೆ
- ಬದಲಿ ಆಪ್ಗಳತ್ತ (ಸಿಗ್ನಲ್, ಟೆಲಿಗ್ರಾಮ್) ಜನರು ಧಾವಿಸುವ ಸಾಧ್ಯತೆ.
ಪ್ರಸ್ತುತ ಕೇಸು ಯಾವ ತಿರುವು ಪಡೆಯುತ್ತದೆ ಎಂಬುದು ಕುತೂಹಲಕಾರಿ. ಹೂಡಿಕೆದಾರರು ಮತ್ತು ಬಳಕೆದಾರರು ಈ ವಿಷಯವನ್ನು ಗಮನಿಸುತ್ತಿದ್ದಾರೆ. ನಿಮ್ಮ ಖಾಸಗಿತನಕ್ಕಾಗಿ ಯಾವುದೇ ಆಪ್ ಬಳಸುವ ಮೊದಲು ಅದರ ಪಾಲಿಸಿಗಳನ್ನು ಚೆನ್ನಾಗಿ ತಿಳಿದುಕೊಳ್ಳಿ.
