ನವದೆಹಲಿ: 2026–27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ದೇಶದ ಅಭಿವೃದ್ಧಿಗೆ ಪ್ರಮುಖವಾಗಿರುವ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ವಲಯಗಳಿಗೆ ವಿಶೇಷ ಒತ್ತು ನೀಡಿದರು. ಈ ಬಜೆಟ್‌ನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ಗುಣಮಟ್ಟದ ಆರೋಗ್ಯ ಸೇವೆ ಮತ್ತು ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಯೇ ಪ್ರಮುಖ ಗುರಿಯಾಗಿದೆ.
ಆರೋಗ್ಯ ವಲಯಕ್ಕೆ ಮಹತ್ವದ ಉತ್ತೇಜನ
ದೇಶದ ನಾಗರಿಕರಿಗೆ ಉತ್ತಮ, ಸುಲಭ ಹಾಗೂ ಕೈಗೆಟುಕುವ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಆಘಾತ (ಟ್ರಾಮಾ) ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು ಎಂದು ವಿತ್ತ ಸಚಿವೆ ಘೋಷಿಸಿದರು. ಡಯಾಬಿಟೀಸ್, ಕ್ಯಾನ್ಸರ್ ಸೇರಿದಂತೆ ದೀರ್ಘಕಾಲೀನ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಬೆಲೆಯನ್ನು ಇಳಿಸುವ ಮೂಲಕ ಸಾಮಾನ್ಯ ಜನರ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಆರೋಗ್ಯ ಕ್ಷೇತ್ರದ ಸಂಶೋಧನೆ ಮತ್ತು ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಬಯೋಫಾರ್ಮಾ ಶಕ್ತಿ ಯೋಜನೆ, ಮೂರು ಹೊಸ ಫಾರ್ಮಸ್ಯುಟಿಕಲ್ ಸಂಸ್ಥೆಗಳ ಸ್ಥಾಪನೆ, ಹಾಗೂ ಕ್ಲಿನಿಕಲ್ ಟ್ರಯಲ್ ಸೆಂಟರ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ದೇಶದಲ್ಲಿ ಔಷಧ ಉತ್ಪಾದನೆ ವೇಗಗೊಳ್ಳುವ ಜೊತೆಗೆ ಉದ್ಯೋಗಾವಕಾಶಗಳೂ ಹೆಚ್ಚಾಗಲಿವೆ.
ಮೆಡಿಕಲ್ ಟೂರಿಸಂ ಮತ್ತು ಆಯುಷ್ ಕ್ಷೇತ್ರಕ್ಕೆ ಹೊಸ ದಿಕ್ಕು
ಭಾರತದ ಆರೋಗ್ಯ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸಲು ಮೆಡಿಕಲ್ ಟೂರಿಸಂ ಅಭಿವೃದ್ಧಿಗೆ 5 ಪ್ರಾದೇಶಿಕ ಹಬ್‌ಗಳ ಸ್ಥಾಪನೆ ಘೋಷಿಸಲಾಗಿದೆ. ಈ ಹಬ್‌ಗಳಲ್ಲಿ ಆಯುಷ್ ಕೇಂದ್ರಗಳು, ರೋಗನಿರ್ಣಯ, ಶಸ್ತ್ರಚಿಕಿತ್ಸೆಯ ನಂತರದ ಆರೈಕೆ ಮತ್ತು ಪುನರ್ವಸತಿ ಕೇಂದ್ರಗಳು ಒಳಗೊಂಡಿರುತ್ತವೆ. ಇದರಿಂದ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದ್ದು, ಸಾವಿರಾರು ಆರೋಗ್ಯ ವೃತ್ತಿಪರರಿಗೆ ಉದ್ಯೋಗ ಸೃಷ್ಟಿಯಾಗಲಿದೆ.
ಯೋಗ ಮತ್ತು ಆಯುರ್ವೇದ ಪದ್ಧತಿಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದ್ದು, ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳು (ಆಯುರ್ವೇದ ಏಮ್ಸ್) ಸ್ಥಾಪಿಸಲಾಗುವುದು ಎಂದು ಘೋಷಿಸಲಾಗಿದೆ. ಜೊತೆಗೆ ಆಯುರ್ವೇದ ಔಷಧಗಳ ಉತ್ಪಾದನೆ, ಆಯುಷ್ ಫಾರ್ಮಸಿಗಳ ಸ್ಥಾಪನೆ ಮತ್ತು ರಫ್ತು ಹೆಚ್ಚಳಕ್ಕೂ ವಿಶೇಷ ಕ್ರಮ ಕೈಗೊಳ್ಳಲಾಗುತ್ತದೆ. ಜಾಮ್‌ನಗರದಲ್ಲಿ ಆರೋಗ್ಯ ಹಬ್ ನಿರ್ಮಿಸುವುದೂ ಈ ಯೋಜನೆಯ ಭಾಗವಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಭವಿಷ್ಯದ ಹೂಡಿಕೆ
ಶಿಕ್ಷಣದಿಂದ ಉದ್ಯೋಗದವರೆಗೆ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸ್ಪಷ್ಟ ದೃಷ್ಟಿಕೋನ ನೀಡಲಾಗಿದೆ. ಐದು ವಿಶ್ವವಿದ್ಯಾಲಯ ಟೌನ್‌ಶಿಪ್‌ಗಳ ಸ್ಥಾಪನೆ, ಪ್ರಮುಖ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಕಾರಿಡಾರ್‌ಗಳ ಬಳಿ ಜ್ಞಾನಕೇಂದ್ರಗಳನ್ನು ನಿರ್ಮಿಸುವ ಯೋಜನೆ ಘೋಷಿಸಲಾಗಿದೆ. ಇದರಿಂದ ಉದ್ಯಮ, ಸಂಶೋಧನೆ ಮತ್ತು ಶಿಕ್ಷಣದ ನಡುವೆ ನೇರ ಸಂಪರ್ಕ ನಿರ್ಮಾಣವಾಗಲಿದೆ.
ಅಷ್ಟೇ ಅಲ್ಲದೆ, ಸಂಶೋಧನಾ ಕಾಲೇಜುಗಳು ಮತ್ತು ಸಂಸ್ಥೆಗಳ ನಿರ್ಮಾಣ, ಆಸ್ಟ್ರೋಫಿಸಿಕ್ಸ್ ಮತ್ತು ಬಾಹ್ಯಾಕಾಶ ವಿಜ್ಞಾನ ಕಲಿಕೆಗೆ ಹೊಸ ಯೋಜನೆಗಳು, ಹಾಗೂ ಆತಿಥ್ಯ ವಲಯದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಒತ್ತು ನೀಡಲಾಗಿದೆ.
ಮಹಿಳೆ ಮತ್ತು ಯುವಕರಿಗೆ ವಿಶೇಷ ಆದ್ಯತೆ
ಮಹಿಳೆಯರ ಶಿಕ್ಷಣ ಮತ್ತು ಸುರಕ್ಷತೆಗೆ ಆದ್ಯತೆ ನೀಡಿರುವ ಸರ್ಕಾರ, ಪ್ರತಿ ಜಿಲ್ಲೆಯಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣ ಮಾಡುವ ಘೋಷಣೆ ಮಾಡಿದೆ. ಜೊತೆಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಯೋಜನೆಗಳು ಮತ್ತು ಸ್ವಾವಲಂಬಿ ಭಾರತೀಯ ನಿಧಿಗೆ 2,000 ಕೋಟಿ ರೂ. ಮೀಸಲು ಯುವ ಉದ್ಯಮಶೀಲತೆಯನ್ನು ಉತ್ತೇಜಿಸುವ ಪ್ರಮುಖ ಹೆಜ್ಜೆಯಾಗಿದೆ.
2026–27ರ ಕೇಂದ್ರ ಬಜೆಟ್ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ವಲಯಗಳನ್ನು ಸಮಗ್ರವಾಗಿ ಬಲಪಡಿಸುವ ಮೂಲಕ ಸಬಲ, ಸ್ವಾವಲಂಬಿ ಮತ್ತು ಆರೋಗ್ಯಕರ ಭಾರತ ನಿರ್ಮಾಣದತ್ತ ದೃಢ ಹೆಜ್ಜೆ ಇಟ್ಟಿದೆ.
