ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಖಾಸಗಿ ಸ್ವಾಮ್ಯದ ಶೆಲ್ (Shell) ಪೆಟ್ರೋಲ್ ಬಂಕ್‌ಗಳು ಮತ್ತೊಂದು ದೊಡ್ಡ ಆಘಾತ ನೀಡಿವೆ. ಕಳೆದ ಕೇವಲ 15 ದಿನಗಳ ಅಂತರದಲ್ಲಿ ಮೂರನೇ ಬಾರಿಗೆ ಇಂಧನ ದರವನ್ನು ಪರಿಷ್ಕರಿಸಿರುವ ಶೆಲ್ ಸಂಸ್ಥೆಯು, ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಿದೆ. ವಿಶೇಷವಾಗಿ ಡೀಸೆಲ್ ದರವು ಲೀಟರ್‌ಗೆ 25 ರೂಪಾಯಿಗಳಷ್ಟು ಜಿಗಿತ ಕಂಡಿರುವುದು ಸಾರಿಗೆ ವಲಯದಲ್ಲಿ ಆತಂಕ ಮೂಡಿಸಿದೆ.
ದರ ಏರಿಕೆಯ ಸಂಪೂರ್ಣ ವಿವರ:
ಷೆಲ್ ಪೆಟ್ರೋಲ್ ಬಂಕ್‌ಗಳಲ್ಲಿ ಸಾಮಾನ್ಯ ಮತ್ತು ಪ್ರೀಮಿಯಂ ಎರಡು ವಿಭಾಗದ ಇಂಧನಗಳ ಬೆಲೆಯೂ ಏರಿಕೆಯಾಗಿದೆ. ಈ ಹಿಂದೆ ಲೀಟರ್‌ಗೆ 112 ರೂಪಾಯಿ ಇದ್ದ ಸಾಮಾನ್ಯ ಪೆಟ್ರೋಲ್ ಬೆಲೆ ಈಗ 119.8 ರೂ.ಗೆ ಏರಿಕೆಯಾಗಿದೆ. ಅಂದರೆ ಒಂದೇ ಹಂತದಲ್ಲಿ ಲೀಟರ್‌ಗೆ 7.80 ರೂ. ಹೆಚ್ಚಳವಾಗಿದೆ. ಲೀಟರ್‌ಗೆ 122.42 ರೂಪಾಯಿ ಇದ್ದ ಪ್ರೀಮಿಯಂ ಪೆಟ್ರೋಲ್ ಬೆಲೆ ಈಗ 129.8 ರೂ. ತಲುಪಿದೆ. ಡೀಸೆಲ್ ಬೆಲೆಯಲ್ಲಿ ಬರೋಬ್ಬರಿ 25 ರೂಪಾಯಿ ಏರಿಕೆಯಾಗಿದ್ದು, ಇದು ಖಾಸಗಿ ಬಸ್ ಮತ್ತು ಲಾರಿ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಏರಿಕೆ ಹಿಂದಿನ ಕಾರಣಗಳೇನು ?
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣ ಮತ್ತು ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಭೀತಿಯಿಂದಾಗಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಬಹುದು ಎಂಬ ವದಂತಿಗಳ ಬೆನ್ನಲ್ಲೇ ಶೆಲ್ ಅಂತಹ ಖಾಸಗಿ ಕಂಪನಿಗಳು ದರ ಏರಿಕೆಯ ಹಾದಿ ಹಿಡಿದಿವೆ. ಸರ್ಕಾರಿ ಸ್ವಾಮ್ಯದ ಬಂಕ್‌ಗಳಿಗಿಂತ ಖಾಸಗಿ ಬಂಕ್‌ಗಳಲ್ಲಿ ದರ ಹೆಚ್ಚಳವಾಗಿರುವುದು ಗ್ರಾಹಕರನ್ನು ಕಂಗಾಲಾಗಿಸಿದೆ.
ಕಳೆದ 15 ದಿನಗಳಲ್ಲಿ ಮೂರು ಬಾರಿ ದರ ಏರಿಕೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಬಂಕ್‌ಗಳಲ್ಲಿ ದರ ಸ್ಥಿರವಾಗಿದ್ದರೂ, ಶೆಲ್‌ನಲ್ಲಿ ಮಾತ್ರ ಇಷ್ಟೊಂದು ಪ್ರಮಾಣದ ವ್ಯತ್ಯಾಸ ಇರುವುದು ಸರಿಯಲ್ಲ ಎಂದು ವಾಹನ ಸವಾರರು ದೂರಿದ್ದಾರೆ. ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಈ ಇಂಧನ ದರ ಏರಿಕೆ ಮತ್ತಷ್ಟು ಹೊರೆಯಾಗಲಿದೆ.
