ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿರುವ ಹೊತ್ತಿನಲ್ಲಿ ಭಾರತದ ಆಭರಣ ಪ್ರಿಯರು ಮತ್ತು ಹೂಡಿಕೆದಾರರಿಗೆ ಒಂದು ಗುಡ್ ನ್ಯೂಸ್. ಚೀನಾದ ಶಾಂಘೈ ಗೋಲ್ಡ್ ಎಕ್ಸ್‌ಚೇಂಜ್ (Shanghai Gold Exchange – SGE) ಚಿನ್ನ ಮತ್ತು ಬೆಳ್ಳಿ ಒಪ್ಪಂದಗಳ ಮೇಲಿನ ಮಾರ್ಜಿನ್ ಅಗತ್ಯತೆ ಮತ್ತು ದೈನಂದಿನ ಬೆಲೆ ಏರಿಳಿತದ ಮಿತಿಗಳನ್ನು ಕಡಿಮೆ ಮಾಡುವ ನಿರ್ಣಯ ತೆಗೆದುಕೊಂಡಿದೆ. ಈ ಬದಲಾವಣೆಗಳು ಫೆಬ್ರವರಿ 24, 2026ರ ಸಂಜೆಯ ಸೆಟಲ್‌ಮೆಂಟ್‌ನಿಂದ ಅಮಲಿಗೆ ಬರಲಿವೆ.
ಈ ನಿರ್ಣಯದಿಂದ ವ್ಯಾಪಾರ ವೆಚ್ಚಗಳು ಕಡಿಮೆಯಾಗುತ್ತವೆ, ಹೆಚ್ಚು ಜನರು ಮಾರುಕಟ್ಟೆಗೆ ಸೇರುವ ಸಾಧ್ಯತೆ ಇದೆ ಮತ್ತು ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಸ್ಥಿರತೆ ಮತ್ತು ಸ್ವಲ್ಪ ಇಳಿಕೆಯ ನಿರೀಕ್ಷೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಪ್ರಮುಖ ಪಾತ್ರ ವಹಿಸುವುದರಿಂದ ಭಾರತದ MCX ಮತ್ತು ಸ್ಥಳೀಯ ಬೆಲೆಗಳ ಮೇಲೂ ಪರಿಣಾಮ ಬೀಳಬಹುದು.
ಏನೇನು ಬದಲಾವಣೆಗಳಾಗಿವೆ?
- ಚಿನ್ನದ ಒಪ್ಪಂದಗಳು : ಮಾರ್ಜಿನ್ ಅನುಪಾತವನ್ನು 21% ರಿಂದ 18%ಗೆ ಇಳಿಸಲಾಗಿದೆ. ದೈನಂದಿನ ಬೆಲೆ ಏರಿಳಿತದ ಮಿತಿಯನ್ನು 20% ರಿಂದ 17%ಗೆ ಕಡಿಮೆ ಮಾಡಲಾಗಿದೆ.
- ಬೆಳ್ಳಿಯ ಒಪ್ಪಂದಗಳು : ಮಾರ್ಜಿನ್ ಅನುಪಾತವನ್ನು 27% ರಿಂದ 24%ಗೆ ಇಳಿಸಲಾಗಿದೆ. ದೈನಂದಿನ ಬೆಲೆ ಮಿತಿಯನ್ನು 26% ರಿಂದ 23%ಗೆ ಕಡಿಮೆ ಮಾಡಲಾಗಿದೆ.
- CAu99.99 ಒಪ್ಪಂದಕ್ಕೆ ಮಾರ್ಜಿನ್ ಪ್ರತಿ ಲಾಟ್ಗೆ RMB 200,000 ರಿಂದ RMB 180,000ಗೆ ಇಳಿಕೆ.
ಮಾರ್ಜಿನ್ ಮತ್ತು ಬೆಲೆ ಮಿತಿ ಎಂದರೇನು?
ಮಾರ್ಜಿನ್ ಎಂದರೆ ವ್ಯಾಪಾರಕ್ಕೆ ಠೇವಣಿ ಇಡಬೇಕಾದ ಹಣ. ಕಡಿಮೆ ಮಾರ್ಜಿನ್‌ನಿಂದ ಕಡಿಮೆ ಬಂಡವಾಳದೊಂದಿಗೆ ಹೆಚ್ಚು ವ್ಯಾಪಾರ ಮಾಡಬಹುದು. ದೈನಂದಿನ ಬೆಲೆ ಮಿತಿ ಕಡಿಮೆಯಾದರೆ ಒಂದು ದಿನದಲ್ಲಿ ತೀವ್ರ ಏರಿಕೆ ಅಥವಾ ಇಳಿಕೆಯ ಸಾಧ್ಯತೆ ಕಡಿಮೆಯಾಗುತ್ತದೆ ಮಾರುಕಟ್ಟೆ ಸ್ಥಿರವಾಗಿರುತ್ತದೆ.
ಇದರಿಂದ ವ್ಯಾಪಾರಿಗಳಿಗೆ ಲಾಭಗಳು:
- ಕಡಿಮೆ ಬಂಡವಾಳದೊಂದಿಗೆ ವ್ಯಾಪಾರ ಸಾಧ್ಯ.
- ಹೆಚ್ಚಿನ ಭಾಗವಹಿಸುವಿಕೆಯಿಂದ ದ್ರವತೆ (ಲಿಕ್ವಿಡಿಟಿ) ಹೆಚ್ಚಾಗುತ್ತದೆ.
- ತೀಕ್ಷ್ಣ ಏರಿಳಿತಗಳು ಕಡಿಮೆಯಾಗಿ ಅಪಾಯ ಕಡಿಮೆ.
- ಒಟ್ಟಾರೆಯಾಗಿ ವ್ಯಾಪಾರ ಸುಲಭ ಮತ್ತು ಸುರಕ್ಷಿತವಾಗುತ್ತದೆ.
ಶಾಂಘೈ ಗೋಲ್ಡ್ ಎಕ್ಸ್‌ಚೇಂಜ್ ಈ ಕ್ರಮವನ್ನು ಮಾರುಕಟ್ಟೆಯನ್ನು ಸಮತೋಲನದಲ್ಲಿಡಲು ಮತ್ತು ಶಿಸ್ತು ತರಲು ತೆಗೆದುಕೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಸ್ಥಿರತೆ ಅಥವಾ ಸ್ವಲ್ಪ ಇಳಿಕೆಯ ನಿರೀಕ್ಷೆ ಇದೆ. ಆದರೆ ಜಾಗತಿಕ ಅಂಶಗಳು (ಡಾಲರ್, ಬಡ್ಡಿ ದರಗಳು, ಭೂ-ರಾಜಕೀಯ ಒತ್ತಡಗಳು) ಮೇಲೂ ಬೆಲೆ ಅವಲಂಬಿತವಾಗಿರುತ್ತದೆ.
ಹೂಡಿಕೆದಾರರು ಈ ಬದಲಾವಣೆಗಳನ್ನು ಗಮನಿಸಿ ತಮ್ಮ ತಂತ್ರಗಳನ್ನು ಹೊಂದಿಕೊಳ್ಳಬೇಕು. ಚಿನ್ನದ ಬೆಲೆ ಗ್ರಾಂಗೆ 10,000 ರೂ.ಗೆ ಫಿಕ್ಸ್ ಆಗುವುದು ಸಾಧ್ಯವೇ ಎಂಬುದು ಇನ್ನೂ ನಿರೀಕ್ಷೆಯಷ್ಟೇ ಮಾರುಕಟ್ಟೆಯ ಚಲನೆಗಳನ್ನು ನಿರಂತರವಾಗಿ ಅನುಸರಿಸಿ.
