ಮುಂಬೈ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಭೀತಿ ಮತ್ತು ಜಾಗತಿಕ ತೈಲ ಪೂರೈಕೆಯ ಮೇಲೆ ಉಂಟಾಗಿರುವ ಅನಿಶ್ಚಿತತೆ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇಂದಿನ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಹಾಗೂ ಎನ್‌ಎಸ್‌ಇ ನಿಫ್ಟಿ ಎರಡೂ ಸೂಚ್ಯಂಕಗಳು ಭಾರೀ ಕುಸಿತ ದಾಖಲಿಸಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿದೆ.
ಇಂದಿನ ಆರಂಭಿಕ ವಹಿವಾಟಿನಿಂದಲೇ ಮಾರುಕಟ್ಟೆಯಲ್ಲಿ ನಕಾರಾತ್ಮಕ ಪ್ರವೃತ್ತಿ ಕಾಣಿಸಿಕೊಂಡಿತು. ಸೆನ್ಸೆಕ್ಸ್ 1,000ಕ್ಕೂ ಅಧಿಕ ಅಂಕಗಳ ಇಳಿಕೆ ಕಂಡು, ದಿನದ ಮಧ್ಯದಲ್ಲಿ 76,269.48 ಅಂಕಗಳ ಮಟ್ಟದಲ್ಲಿ ವಹಿವಾಟು ಮುಂದುವರಿದಿದೆ. ಇದೇ ವೇಳೆ ನಿಫ್ಟಿ ಸೂಚ್ಯಂಕವು 301.85 ಅಂಕಗಳ ಕುಸಿತದೊಂದಿಗೆ 23,874.75 ಅಂಕಗಳ ಮಟ್ಟಕ್ಕೆ ಇಳಿದಿದೆ. ಈ ತೀವ್ರ ಕುಸಿತವು ಹೂಡಿಕೆದಾರರ ಸಂಪತ್ತಿಗೆ ದೊಡ್ಡ ಹೊಡೆತ ನೀಡಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಮಾರುಕಟ್ಟೆ ತಜ್ಞರ ಪ್ರಕಾರ, ಈ ಕುಸಿತಕ್ಕೆ ಜಾಗತಿಕ ತೈಲ ಬೆಲೆ ಏರಿಕೆಯ ಭೀತಿ ಪ್ರಮುಖ ಕಾರಣವಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಭದ್ರತಾ ತೊಂದರೆಗಳು ಹಾಗೂ ಇರಾನ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಸಂಘರ್ಷವು ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಕ್ರೂಡ್ ಆಯಿಲ್ ಬೆಲೆಗಳು ಏರಿಕೆ ಕಾಣಬಹುದೆಂಬ ಆತಂಕ ಜಾಗತಿಕ ಮಾರುಕಟ್ಟೆಗಳಲ್ಲಿ ಹಬ್ಬಿದೆ.
ತೈಲ ಬೆಲೆ ಏರಿಕೆಯಿಂದ ಭಾರತಕ್ಕೆ ನೇರ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಭಾರತವು ತನ್ನ ಇಂಧನ ಅಗತ್ಯಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಬೆಲೆ ಏರಿಕೆ ಆಗಿದ್ರೆ ಇಂಧನ ವೆಚ್ಚವು ಹೆಚ್ಚಿ, ದ್ರವ್ಯಫುಲ್ಯನ (inflation) ಒತ್ತಡವೂ ಹೆಚ್ಚಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು (FPI) ಭಾರತೀಯ ಮಾರುಕಟ್ಟೆಯಿಂದ ಹಣ ಹಿಂಪಡೆಯುತ್ತಿರುವುದು ಮತ್ತೊಂದು ದೊಡ್ಡ ಕಾರಣವಾಗಿದೆ. ಮೇ ತಿಂಗಳಲ್ಲಿ ಮಾತ್ರವೇ ದೊಡ್ಡ ಪ್ರಮಾಣದ ಬಂಡವಾಳ ಹೊರಹರಿವು ಕಂಡುಬಂದಿದ್ದು, ಇದು ಮಾರುಕಟ್ಟೆಯ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ವಿದೇಶಿ ಹೂಡಿಕೆದಾರರ ನಂಬಿಕೆ ಕುಸಿತವು ಸೂಚ್ಯಂಕಗಳ ಮೇಲಿನ ನಕಾರಾತ್ಮಕ ಪರಿಣಾಮವನ್ನು ಹೆಚ್ಚಿಸಿದೆ.
ಇದಲ್ಲದೆ ಜಾಗತಿಕ ಅಸ್ಥಿರತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೂಡಿಕೆದಾರರ ಮನೋಭಾವದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಸುರಕ್ಷಿತ ಹೂಡಿಕೆಗಳ ಕಡೆಗೆ ಹೂಡಿಕೆದಾರರು ತಿರುಗುತ್ತಿರುವುದರಿಂದ ಷೇರು ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಾಗಿದೆ.
