ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ಸರ್ಪ್ರೈಸ್ ನೀಡಿದೆ. ಹಣಕಾಸು ನೀತಿ ಸಮಿತಿ (MPC) ಸತತ ಎರಡು ಸಭೆಗಳಲ್ಲಿ ರೆಪೊ ದರವನ್ನು ಬದಲಾಯಿಸದೆ ಇಟ್ಟ ನಂತರ, ಈ ಬಾರಿ 25 ಬೇಸಿಸ್ ಪಾಯಿಂಟ್‌ಗಳ ಕಡಿತ ಮಾಡಿ ರೆಪೊ ದರವನ್ನು 5.50% ರಿಂದ 5.25%ಕ್ಕೆ ಇಳಿಸಿದೆ. ಈ ನಿರ್ಧಾರದಿಂದ ಲಕ್ಷಾಂತರ ಮನೆ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಗ್ರಾಹಕರಿಗೆ ದೊಡ್ಡ ರಿಲೀಫ್ ಸಿಗಲಿದೆ.
ಹಣದುಬ್ಬರ ದಾಖಲೆಯ ಕಡಿಮೆ ಮಟ್ಟ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) ಹಣದುಬ್ಬರ 4% ಗುರಿಯಡಿಯಲ್ಲೇ ಉಳಿದಿದೆ ಹಲವು ತಿಂಗಳುಗಳಿಂದ 3.5-3.8% ನಡುವೆ ಇದೆ. ಇದು RBIಗೆ ದರ ಕಡಿತಕ್ಕೆ ಸಾಕಷ್ಟು ಜಾಗವನ್ನು ನೀಡಿದೆ. ಬ್ಲೂಮ್‌ಬರ್ಗ್ ನಡೆಸಿದ ಸಮೀಕ್ಷೆಯಲ್ಲಿ 44 ಅರ್ಥಶಾಸ್ತ್ರಜ್ಞರಲ್ಲಿ 68% ಮಂದಿ ಈ ಬಾರಿ ಕಡಿತವಾಗುತ್ತದೆ ಎಂದು ಊಹಿಸಿದ್ದರು.
ಆದರೆ ರೂಪಾಯಿ ಕುಸಿತ ಆತಂಕ ಡಾಲರ್ ವಿರುದ್ಧ ರೂಪಾಯಿ 88-89 ಮಟ್ಟಕ್ಕೆ ಕುಸಿದಿರುವುದು RBIಗೆ ದೊಡ್ಡ ತಲೆನೋವಾಗಿತ್ತು. ಸಿಟಿಗ್ರೂಪ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು SBI ಸೇರಿದಂತೆ ಹಲವು ಸಂಸ್ಥೆಗಳು “ಈ ಬಾರಿ ದರ ಕಡಿತವಿಲ್ಲ, ವಿರಾಮ ಮುಂದುವರಿಯುತ್ತದೆ” ಎಂದು ಊಹಿಸಿದ್ದವು. ಆದರೆ RBI ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಕಳೆದ ತಿಂಗಳೇ “ನೀತಿ ದರ ಕಡಿತಕ್ಕೆ ಬಾಗಿಲು ತೆರೆದಿದೆ” ಎಂದು ಸಂಕೇತ ನೀಡಿದ್ದರು. ಅದೇ ದಿಕ್ಕಿನಲ್ಲಿ ಇಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ.
EMI ಎಷ್ಟು ಕಡಿಮೆಯಾಗುತ್ತದೆ?
- 50 ಲಕ್ಷ ಮನೆ ಸಾಲ (20 ವರ್ಷ ಅವಧಿ) ಈ ಹಿಂದೆ 9.15-9.25% ಬಡ್ಡಿಯಲ್ಲಿ ಸಿಗುತ್ತಿತ್ತು.
- ಈಗ ಬ್ಯಾಂಕುಗಳು ದರ ಇಳಿಸಿದರೆ ಬಡ್ಡಿದರ 8.75-8.90% ವರೆಗೆ ಬರಬಹುದು.
- ಪ್ರತಿ ತಿಂಗಳು EMI ₹4,000-₹4,500 ರೂಪಾಯಿ ಕಡಿಮೆಯಾಗುವ ಸಾಧ್ಯತೆ.
ಬ್ಯಾಂಕುಗಳು ಎಷ್ಟು ಬೇಗ ದರ ಇಳಿಸುತ್ತವೆ? SBI, HDFC ಬ್ಯಾಂಕ್, ICICI ಬ್ಯಾಂಕ್ ಈಗಾಗಲೇ “RBI ನಿರ್ಧಾರದ ನಂತರ ಶೀಘ್ರದಲ್ಲೇ MCLR ಮತ್ತು ರೀಡಿಂಗ್ ದರ ಇಳಿಸುತ್ತೇವೆ” ಎಂದು ಸೂಚಿಸಿವೆ. ಸಾಮಾನ್ಯವಾಗಿ RBI ರೆಪೊ ದರ ಕಡಿತದ 15-45 ದಿನಗಳಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಲಾಭ ತಲುಪಿಸುತ್ತವೆ.
ಆರ್ಥಿಕತೆಗೆ ಏನು ಸಂದೇಶ?
- ಉದ್ಯಮಗಳಿಗೆ ಸಾಲ ಅಗ್ಗವಾಗುತ್ತದೆ- ಹೂಡಿಕೆ ಹೆಚ್ಚಳ
- ಗ್ರಾಹಕರ ಖರ್ಚು-ಉಳಿತಾಯ ಸಮತೋಲನ ಸುಧಾರಣೆ
- ಷೇರು ಮಾರುಕಟ್ಟೆಗೆ ಧನಾತ್ಮಕ ಸಂಕೇತ – ಸೆನ್ಸೆಕ್ಸ್-ನಿಫ್ಟಿ ಇಂದು 1.5% ಏರಿಕೆ
RBI ಈಗ “neutral” ನೀತಿ ಭಂಗಿ ಅಳವಡಿಸಿಕೊಂಡಿದೆ. ಅಂದರೆ ಮುಂದಿನ ಸಭೆಗಳಲ್ಲಿ ಹಣದುಬ್ಬರ ಮತ್ತು ರೂಪಾಯಿ ಸ್ಥಿತಿ ಗಮನಿಸಿ ಮತ್ತೆ ಕಡಿತ ಮಾಡಬಹುದು ಅಥವಾ ವಿರಾಮ ಮುಂದುವರಿಸಬಹುದು. 2026ರ ಮೊದಲ ತ್ರೈಮಾಸಿಕದಲ್ಲಿ ರೆಪೊ ದರ 5.00% ವರೆಗೆ ಇಳಿಯುವ ಸಾಧ್ಯತೆಯನ್ನು ಗೋಲ್ಡ್‌ಮನ್ ಸ್ಯಾಕ್ಸ್ ಮತ್ತು ಮಾರ್ಗನ್ ಸ್ಟ್ಯಾನ್ಲಿ ಊಹಿಸಿವೆ.
ಈ ರೆಪೊ ದರ ಕಡಿತ ಸಾಲಗಾರರಿಗೆ, ಮನೆ ಕೊಳ್ಳುವವರಿಗೆ, ವ್ಯಾಪಾರಿಗಳಿಗೆ ದೊಡ್ಡ ಗುಡ್ ನ್ಯೂಸ್. ಒಟ್ಟಾರೆ ಆರ್ಥಿಕತೆಗೆ ಹೊಸ ಚೈತನ್ಯ ತುಂಬುವ ನಿರ್ಧಾರವಿದು.
