ನವದೆಹಲಿ: ದೇಶಾದ್ಯಂತ ಲಕ್ಷಾಂತರ ಗ್ರಾಮೀಣ ಜನರಿಗೆ ಬ್ಯಾಂಕಿಂಗ್ ಆಧಾರವಾಗಿರುವ ಅಂಚೆ ಕಚೇರಿಗಳಲ್ಲಿ (Post Offices) ಇನ್ನು ಮುಂದೆ ಆರ್ಥಿಕ ವಹಿವಾಟುಗಳಿಗೆ ಪಾನ್ ಕಾರ್ಡ್ (PAN Card) ಕಡ್ಡಾಯವಾಗಿದೆ. ಕೇಂದ್ರ ಸರ್ಕಾರವು ಆದಾಯ ತೆರಿಗೆ ನಿಯಮಗಳು 2026ರ ಅಡಿಯಲ್ಲಿ ಈ ಮಹತ್ವದ ಬದಲಾವಣೆಗೆ ಆದೇಶ ಹೊರಡಿಸಿದೆ.
ಅಂಚೆ ಕಚೇರಿಗಳು ದಶಕಗಳಿಂದ ಗ್ರಾಮೀಣ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಬೆನ್ನೆಲುಬಾಗಿವೆ. ಇಂದಿಗೂ ಸಹ ಲಕ್ಷಾಂತರ ಜನರು ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿದ್ದು, ವಿವಿಧ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಹಿನ್ನೆಲೆ ಸರ್ಕಾರವು ಆರ್ಥಿಕ ವಹಿವಾಟುಗಳಲ್ಲಿ ಪಾರದರ್ಶಕತೆ ತರಲು ಹಾಗೂ ತೆರಿಗೆ ವಂಚನೆ ತಡೆಯಲು ಈ ನಿರ್ಧಾರ ಕೈಗೊಂಡಿದೆ.
ಯಾವೆಲ್ಲ ವಹಿವಾಟುಗಳಿಗೆ PAN ಕಡ್ಡಾಯ?
ಆದಾಯ ತೆರಿಗೆ ನಿಯಮಗಳು 237, 211, 161, 160 ಮತ್ತು 159ರ ಅಡಿಯಲ್ಲಿ ಹೊಸ ನಿಬಂಧನೆಗಳನ್ನು ಜಾರಿಗೆ ತರಲಾಗಿದೆ. ಅಂಚೆ ಇಲಾಖೆಯ ಆದೇಶ ಸಂಖ್ಯೆ 02/2026ರ ಪ್ರಕಾರ, ಕೆಳಗಿನ ಎಲ್ಲಾ ವಹಿವಾಟುಗಳಿಗೆ ಪಾನ್ ಕಾರ್ಡ್ ವಿವರಗಳನ್ನು ನೀಡುವುದು ಅತ್ಯಗತ್ಯ.
-
ಉಳಿತಾಯ ಖಾತೆ ತೆರೆಯುವುದು – ಹೊಸ ಖಾತೆ ತೆರೆಯಲು ಪಾನ್ ಕಾರ್ಡ್ ಕಡ್ಡಾಯ
-
ಟೈಮ್ ಡೆಪಾಸಿಟ್ (ಸ್ಥಿರ ಠೇವಣಿ) – ಸ್ಥಿರ ಠೇವಣಿ ಯೋಜನೆಗಳಲ್ಲಿ ಹೂಡಿಕೆಗೆ ಪಾನ್ ಕಾರ್ಡ್ ಅಗತ್ಯ
-
ನಗದು ಹಿಂಪಡೆಯುವಿಕೆ – ದೊಡ್ಡ ಮೊತ್ತದ ನಗದು ವಹಿವಾಟಿಗೆ ಪಾನ್ ಕಾರ್ಡ್ ಕಡ್ಡಾಯ
-
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) – ಹೂಡಿಕೆಗೆ ಪಾನ್ ವಿವರ ಅಗತ್ಯ
-
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) – ಪಿಪಿಎಫ್ ಖಾತೆ ಸೇರಿದಂತೆ ಎಲ್ಲಾ ಹೂಡಿಕೆ ಯೋಜನೆಗಳು
PAN ಕಾರ್ಡ್ ಇಲ್ಲದಿದ್ದರೆ ಏನು ಮಾಡಬೇಕು?
ಸಾಮಾನ್ಯ ಗ್ರಾಹಕರ ಬಳಿ ಪಾನ್ ಕಾರ್ಡ್ ಇಲ್ಲದಿದ್ದರೆ ಅಥವಾ ಅದನ್ನು ಮರೆತು ಬಂದಿದ್ದರೆ, ಅವರು ಅಂಚೆ ಕಚೇರಿಯಲ್ಲಿ ಫಾರ್ಮ್ 97 (Form 97) ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಈ ಫಾರ್ಮ್ ನಲ್ಲಿ ಗ್ರಾಹಕರು ತಮ್ಮ ಹೆಸರು, ಸಂಪೂರ್ಣ ವಿಳಾಸ ಮತ್ತು ವಹಿವಾಟಿನ ವಿವರಗಳನ್ನು ನಮೂದಿಸಬೇಕು. ಇದರೊಂದಿಗೆ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿಯಂತಹ ಪೂರಕ ದಾಖಲೆಗಳನ್ನು (Supporting Documents) ಲಗತ್ತಿಸಬೇಕು. ಈ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ಜವಾಬ್ದಾರಿಯನ್ನು ಅಂಚೆ ಕಚೇರಿಗಳಿಗೆ ವಹಿಸಲಾಗಿದೆ.
TDS ವಿನಾಯಿತಿಗಾಗಿ ಹೊಸ ಫಾರ್ಮ್ 121
ಇದುವರೆಗೆ ಅಂಚೆ ಕಚೇರಿ ಯೋಜನೆಗಳ ಬಡ್ಡಿ ಆದಾಯದ ಮೇಲಿನ ಟಿಡಿಎಸ್ (TDS) ಕಡಿತದಿಂದ ವಿನಾಯಿತಿ ಪಡೆಯಲು 15G ಮತ್ತು 15H ಫಾರ್ಮ್‌ಗಳನ್ನು ಬಳಸಲಾಗುತ್ತಿತ್ತು. ಆದರೆ ಹೊಸ ನಿಯಮಗಳ ಪ್ರಕಾರ, ವಿನಾಯಿತಿ ಪಡೆಯಲು ಈಗ ಫಾರ್ಮ್ 121 (Form 121) ಸಲ್ಲಿಸಬೇಕಾಗುತ್ತದೆ. ಈ ಫಾರ್ಮ್ ಅನ್ನು ಅಂಚೆ ಕಚೇರಿಗಳು ಸ್ವೀಕರಿಸಿ, ಏಳು ವರ್ಷಗಳ ಕಾಲ ಸುರಕ್ಷಿತವಾಗಿ ಸಂರಕ್ಷಿಸಿಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಈ ಹೊಸ ನಿಯಮದಿಂದ ಅಂಚೆ ಕಚೇರಿಗಳ ಮೇಲಿನ ಅವಲಂಬನೆ ಹೆಚ್ಚಿರುವ ಗ್ರಾಮೀಣ ಜನತೆಗೆ ಮೊದಲಿಗೆ ಸ್ವಲ್ಪ ತೊಂದರೆಯಾಗಬಹುದು. ಆದರೆ ದೀರ್ಘಾವಧಿಯಲ್ಲಿ ಇದು ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸಹಕಾರಿಯಾಗಲಿದೆ. ಸರ್ಕಾರವು ಗ್ರಾಮೀಣ ಜನರಿಗೆ ಸುಲಭವಾಗಿ ಪಾನ್ ಕಾರ್ಡ್ ಪಡೆಯಲು ಸಹಾಯಕ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡುವ ಸಾಧ್ಯತೆಯಿದೆ.
