ನವದೆಹಲಿ: ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳಿಂದ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.. ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 29 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಇಂದಿನಿಂದಲೇ ಹೊಸ ದರಗಳು ಜಾರಿಗೆ ಬಂದಿವೆ.
ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ತೈಲ ಕಂಪನಿಗಳು ತಿಳಿಸಿವೆ. ಕಳೆದ ಮೂರು ತಿಂಗಳಲ್ಲಿ ಅಡುಗೆ ಅನಿಲ ದರ ಹೆಚ್ಚಳವಾಗಿರುವುದು ಇದು ಎರಡನೇ ಬಾರಿ ಆಗಿದೆ. ಇದಕ್ಕೂ ಮುನ್ನ ಮಾರ್ಚ್ 7 ರಂದು ಸಿಲಿಂಡರ್ ಬೆಲೆಯನ್ನು 60 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು.
ಹೊಸ ಬೆಲೆ ಎಷ್ಟು?
ಹೊಸ ದರಗಳ ಪ್ರಕಾರ, ದೆಹಲಿಯಲ್ಲಿ ಇದುವರೆಗೆ 913 ರೂಪಾಯಿಗಳಿದ್ದ ಸಿಲಿಂಡರ್ ಬೆಲೆ ಈಗ 942 ರೂಪಾಯಿಗಳಿಗೆ ತಲುಪಿದೆ. ಮುಂಬಯಿ, ಕೋಲ್ಕತ್ತಾ, ಚೆನ್ನೈನಂತಹ ಇತರ ಮೆಟ್ರೋ ನಗರಗಳಲ್ಲೂ ಸಿಲಿಂಡರ್ ದರದಲ್ಲಿ ಸುಮಾರು ಇದೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಮಧ್ಯಮ ವರ್ಗ ಮತ್ತು ಕೆಳಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಅಡುಗೆ ವೆಚ್ಚ ಹೆಚ್ಚಾಗಲಿದೆ.
ಕೇವಲ ಗೃಹಬಳಕೆ ಸಿಲಿಂಡರ್ ಮಾತ್ರವಲ್ಲ
ಇದೇ ಸಂದರ್ಭದಲ್ಲಿ, ಜೂನ್ 1 ರಂದು 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 42 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು.. ಜಾಗತಿಕ ಮಾರುಕಟ್ಟೆಯ ಏರಿಳಿತದ ಪರಿಣಾಮ ಇತ್ತೀಚಿನ ವಾರಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ (CNG) ದರಗಳಲ್ಲೂ ಕಂಡುಬಂದಿದೆ. ಹೀಗಾಗಿ ಸಾರಿಗೆ, ಆಟೋ, ಟ್ಯಾಕ್ಸಿ ಮತ್ತು ವಾಣಿಜ್ಯ ವಾಹನಗಳ ಬಾಡಿಗೆಯೂ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆ ಇದೆ.
ಏಕೆ ಈ ಏರಿಕೆ? – ಹಿನ್ನೆಲೆ ಏನು?
ಮಧ್ಯಪ್ರಾಚ್ಯ ಭಾಗದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ರಾಜತಾಂತ್ರಿಕ ಬಿಕ್ಕಟ್ಟುಗಳು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿವೆ. ಇದರಿಂದ ಕಚ್ಚಾ ತೈಲ ಮತ್ತು ಅನಿಲದ ಆಮದು ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಏರಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು (IOCL, BPCL, HPCL) ಗೃಹಬಳಕೆದಾರರಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದವು. ಈ ಕಾರಣದಿಂದ ಕಂಪನಿಗಳಿಗೆ ಆಗುತ್ತಿದ್ದ ನಷ್ಟವನ್ನು (Under-recovery) ಭಾಗಶಃ ಸರಿದೂಗಿಸಲು ಈ ಬೆಲೆ ಏರಿಕೆ ಮಾಡಲಾಗಿದೆ.
ಸರ್ಕಾರದ ವಿವರಣೆ
ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ಸದ್ಯಕ್ಕೆ ದೇಶೀಯ ಅಡುಗೆ ಅನಿಲದ ಮೇಲಿನ ಅಂಡರ್ ರಿಕವರಿ (ಸರ್ಕಾರ/ಕಂಪನಿಗಳು ಭರಿಸುತ್ತಿರುವ ನಷ್ಟದ ಪ್ರಮಾಣ) ಇನ್ನೂ ಪ್ರತಿ ಸಿಲಿಂಡರ್‌ಗೆ ಸುಮಾರು 700 ರೂಪಾಯಿಗಳಷ್ಟಿದೆ. ಅಂದರೆ, ನಿಜವಾದ ಅಂತಾರಾಷ್ಟ್ರೀಯ ಬೆಲೆಗೆ ಹೋಲಿಸಿದರೆ ಗ್ರಾಹಕರು ಇನ್ನೂ ಕಡಿಮೆ ದರದಲ್ಲಿಯೇ ಸಿಲಿಂಡರ್ ಪಡೆಯುತ್ತಿದ್ದಾರೆ. ಆದರೂ ಸತತ ಬೆಲೆ ಏರಿಕೆ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ.
