ಅಮೆರಿಕ-ಇರಾನ್ ಸಂಧಾನ ಮಾತುಕತೆ ವಿಫಲವಾದ ಬೆನ್ನೆಲೆ ಚಿನ್ನ-ಬೆಳ್ಳಿ ಬೆಲೆ ಮತ್ತೆ ಇಳಿಕೆ

Untitled design 2026 04 13T105220.736

ಬೆಂಗಳೂರು, ಏಪ್ರಿಲ್ 13: ಕಳೆದ ವಾರಾಂತ್ಯದಲ್ಲಿ ಸ್ವಲ್ಪ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಈ ವಾರದ ಆರಂಭದಲ್ಲಿ ಮತ್ತೆ ಇಳಿಕೆಯಾಗಿವೆ. ಅಮೆರಿಕ ಮತ್ತು ಇರಾನ್ ನಡುವೆ ಇಸ್ಲಾಮಾಬಾದ್ನಲ್ಲಿ ನಡೆದ ಶಾಂತಿ ಮಾತುಕತೆಗಳು ವಿಫಲಗೊಂಡ ಪರಿಣಾಮ, ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದ್ದು, ಬುಲಿಯನ್ ಮಾರುಕಟ್ಟೆಯಲ್ಲಿ ಚಂಚಲತೆ ಉಂಟಾಗಿದೆ. ಇದರಿಂದಾಗಿ ಇಂದು ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಗಳಲ್ಲೂ ಇಳಿಕೆ ಕಂಡುಬಂದಿದೆ.

24 ಕ್ಯಾರೆಟ್ ಚಿನ್ನದ ಇಂದಿನ ದರ

ಸೋಮವಾರದಂದು 24 ಕ್ಯಾರೆಟ್ (ಶುದ್ಧ) ಚಿನ್ನದ 10 ಗ್ರಾಂ ಬೆಲೆಯಲ್ಲಿ ₹380 ರೂಪಾಯಿಗಳ ಇಳಿಕೆಯಾಗಿದ್ದು, ಅದು ₹1,52,460 ರೂಪಾಯಿಗೆ ತಲುಪಿದೆ. ಹಿಂದಿನ ದಿನ (ಏಪ್ರಿಲ್ 12) 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹1,52,840 ಆಗಿತ್ತು. 1 ಗ್ರಾಂ ಬೆಲೆ ಕೂಡ ₹38 ರಷ್ಟು ಇಳಿಕೆಯಾಗಿ ₹15,246 ಆಗಿದೆ. ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆ ಸುಮಾರು 1.2% ರಷ್ಟು ಇಳಿಕೆಯಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ

ಆಭರಣಗಳಲ್ಲಿ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲೂ ಇಳಿಕೆಯಾಗಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ ₹35 ರಷ್ಟು ಇಳಿಕೆಯಾಗಿ ₹13,975 ಕ್ಕೆ ತಲುಪಿದೆ. 10 ಗ್ರಾಂನಲ್ಲಿ ₹350 ರಷ್ಟು ಇಳಿಕೆಯಾಗಿದ್ದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು ₹1,39,750 ಆಗಿದೆ. ಹಿಂದಿನ ದಿನ ಇದು ₹1,40,100 ಆಗಿತ್ತು.

ಬೆಳ್ಳಿ ಬೆಲೆಯಲ್ಲೂ ಕುಸಿತ

ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಇಂದು ಇಳಿಕೆಯಾಗಿದೆ. ಬೆಳ್ಳಿಯ ಗ್ರಾಂ ಬೆಲೆ ₹5 ರಷ್ಟು ಇಳಿಕೆಯಾಗಿ ಪ್ರತಿ ಗ್ರಾಂಗೆ ₹255 ಆಗಿದೆ. ಒಂದು ಕಿಲೋಗ್ರಾಂ (ಕೆಜಿ) ಬೆಳ್ಳಿಯ ಬೆಲೆ ₹2,55,000 ಆಗಿದೆ. ಕಳೆದ ವಾರದ ಅಂತ್ಯದ ವೇಳೆಗೆ ಬೆಳ್ಳಿ ಕೆಜಿಗೆ ₹2,56,000 ಮಟ್ಟದಲ್ಲಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿಗೂ ಬೇಡಿಕೆ ಕಡಿಮೆಯಾಗಿದ್ದು, ಕೈಗಾರಿಕಾ ಬಳಕೆಯ ಮೇಲೂ ಪರಿಣಾಮ ಬೀರಿದೆ.

ಚಿನ್ನ-ಬೆಳ್ಳಿ ಬೆಲೆ ಏರಿಳಿತಕ್ಕೆ ಕಾರಣವೇನು?

ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿನ ಏರಿಳಿತಕ್ಕೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವೇ ಮುಖ್ಯ ಕಾರಣ. ಅಮೆರಿಕ-ಇರಾನ್ ನಡುವಿನ ಮಾತುಕತೆಗಳು ವಿಫಲವಾದ ನಂತರ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾ ಜಮಾವಣೆ ಹೆಚ್ಚಾಗಿದೆ. ಇದರಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಭೀತಿ ಹೆಚ್ಚಿದೆ. ಪರಿಣಾಮ, ಹೂಡಿಕೆದಾರರು ಸುರಕ್ಷಿತ ಆಸ್ತಿಯಾಗಿರುವ ಚಿನ್ನದತ್ತ ಮೊದಲು ವಾಲುತ್ತಾರೆ, ಆದರೆ ಇತ್ತೀಚೆಗೆ ಡಾಲರ್ ಸ್ವಲ್ಪ ಸ್ಥಿರಗೊಂಡ ಕಾರಣ ಚಿನ್ನದ ಮೇಲಿನ ಒತ್ತಡ ಕಡಿಮೆಯಾಗಿ ಬೆಲೆ ಇಳಿಕೆಯಾಗಿದೆ. ಇದರ ಜೊತೆಗೆ, ಭಾರತದಲ್ಲಿ ದುಬಾರಿ ಚಿನ್ನದ ಆಭರಣಗಳ ಬೇಡಿಕೆಯೂ ಕುಸಿದಿದೆ.

Exit mobile version