ಚಿನ್ನದ ಬೆಲೆ ಇಳಿಕೆಯಾದ್ರೂ ಗೋಲ್ಡ್ ಕಾಯಿನ್ಸ್‌ಗೆ ಭಾರಿ ಡಿಮ್ಯಾಂಡ್!

Untitled design 2026 03 27T113930.350

ಬೆಂಗಳೂರು, ಮಾರ್ಚ್ 27: ರಾಜ್ಯ ರಾಜಧಾನಿ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ದಿನಕ್ಕೊಂದು ದಾಖಲೆ ಬರೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ತೀವ್ರ ಅಸ್ಥಿರತೆ ಕಂಡುಬರುತ್ತಿದೆ. ಆದರೆ ಸುರಕ್ಷಿತ ಹೂಡಿಕೆಯ ದೃಷ್ಟಿಯಿಂದ ಸಾರ್ವಜನಿಕರು ಗೋಲ್ಡ್ ಕಾಯಿನ್‌ಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಚಿನ್ನದ ನಾಣ್ಯಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಗ್ರಾಹಕರ ಬೇಡಿಕೆ ಪೂರೈಸಲು ಜ್ಯುವೆಲ್ಲರಿ ಮಳಿಗೆಗಳು ಹರಸಾಹಸ ಪಡುತ್ತಿವೆ.

ಆಭರಣಗಳ ಖರೀದಿಗೆ ಆಸಕ್ತಿ ತೋರುತ್ತಿದ್ದ ಗ್ರಾಹಕರು, ಈಗ ಹೂಡಿಕೆಯ ಉದ್ದೇಶದಿಂದ ಚಿನ್ನದ ನಾಣ್ಯಗಳ ಮೊರೆ ಹೋಗುತ್ತಿದ್ದಾರೆ. ನಗರದ ಪ್ರಮುಖ ಮಳಿಗೆಗಳಲ್ಲಿ ಬೆಳಗ್ಗೆ ವ್ಯಾಪಾರ ಆರಂಭವಾಗುತ್ತಿದ್ದಂತೆಯೇ ಗ್ರಾಹಕರು ಗೋಲ್ಡ್ ಕಾಯಿನ್‌ಗಳನ್ನು ಕೇಳುತ್ತಿದ್ದಾರೆ.

2, 4, 6 ಮತ್ತು 8 ಗ್ರಾಂ ತೂಕದ ನಾಣ್ಯಗಳಿಗೆ ಅತಿ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ. ಬೇಡಿಕೆ ಎಷ್ಟಿದೆಯೆಂದರೆ, ಬೆಳಗ್ಗೆ ಸ್ಟಾಕ್ ಬಂದ ನಾಣ್ಯಗಳು ಮಧ್ಯಾಹ್ನದ ವೇಳೆಗೆಲ್ಲಾ ಮಾರಾಟವಾಗಿ ಮಳಿಗೆಗಳ ಮುಂದೆ ‘ನೋ ಸ್ಟಾಕ್’ ಬೋರ್ಡ್ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಿ ಉತ್ತಮ ಲಾಭ ತಂದುಕೊಡಬಹುದು ಎಂಬ ನಿರೀಕ್ಷೆಯಲ್ಲಿ ಜನರು ಸಣ್ಣ ಪ್ರಮಾಣದ ನಾಣ್ಯಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಏರಿಳಿತದ ದಾಖಲೆಗಳು

ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಗ್ರಾಹಕರನ್ನು ಕಂಗಾಲು ಮಾಡಿದೆ. ನಿನ್ನೆಯಷ್ಟೇ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹3,450 ಏರಿಕೆಯಾಗಿ ಆಘಾತ ನೀಡಿತ್ತು. ಮಾರ್ಚ್ 23ರಂದು 22 ಕ್ಯಾರೆಟ್ನ ಒಂದು ಗ್ರಾಂ ಚಿನ್ನದ ಬೆಲೆ ₹12,635 ಇತ್ತು. ಆದರೆ ಕೇವಲ ಎರಡೇ ದಿನಗಳಲ್ಲಿ ₹345 ಏರಿಕೆ ಕಂಡುಬಂದಿದೆ.

ಇಂದಿನ ಮಾರುಕಟ್ಟೆ ವಿದ್ಯಮಾನ ಗಮನಿಸಿದರೆ, ಬೆಳಗ್ಗೆ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹13,465ಕ್ಕೆ ತಲುಪಿ ದಾಖಲೆ ನಿರ್ಮಿಸಿತ್ತು. ಆದರೆ ಸಂಜೆ ವೇಳೆಗೆ ಬೆಲೆಯಲ್ಲಿ ₹215 ಇಳಿಕೆಯಾಗುವ ಮೂಲಕ ₹13,250ಕ್ಕೆ ಬಂದು ನಿಂತಿದೆ.

ಸಂಜೆಯ ಇಳಿಕೆಯನ್ನೇ ಲಾಭವಾಗಿ ಪರಿಗಣಿಸಿದ ಗ್ರಾಹಕರು

ಸಂಜೆ ವೇಳೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದನ್ನೇ ಲಾಭವಾಗಿ ಪರಿಗಣಿಸಿರುವ ಗ್ರಾಹಕರು, ಬೆಲೆ ಮತ್ತೆ ಏರಿಕೆಯಾಗುವ ಮೊದಲೇ ಖರೀದಿಗೆ ಮುಂದಾಗಿದ್ದಾರೆ. ಮಾರುಕಟ್ಟೆಯ ಅಸ್ಥಿರತೆಯು ಜನರಲ್ಲಿ ಒಂದು ಕಡೆ ಆತಂಕ ಸೃಷ್ಟಿಯಾಗಿದೆ. ಕಡಿಮೆ ಬೆಲೆ ಇದ್ದಾಗ ಖರೀದಿಸಿ ಭವಿಷ್ಯದ ಏರಿಕೆಯ ಲಾಭ ಪಡೆಯುವ ಹುರುಪು ಮೂಡಿಸಿದೆ.

ಏಕೆ ಈ ಡಿಮ್ಯಾಂಡ್?

ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ, ಅಂತಾರಾಷ್ಟ್ರೀಯ ಸಂಘರ್ಷಗಳು ಮತ್ತು ಹಣದುಬ್ಬರದ ಭೀತಿಯಿಂದಾಗಿ ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳತ್ತ ವಾಲುತ್ತಿದ್ದಾರೆ. ಚಿನ್ನವು ಸದಾ ಕಾಲ ಸುರಕ್ಷಿತ ಹೂಡಿಕೆ ಎಂಬ ನಂಬಿಕೆ ಜನರಲ್ಲಿದೆ. ಆಭರಣಗಳಿಗೆ ಹೋಲಿಸಿದರೆ ಗೋಲ್ಡ್ ಕಾಯಿನ್‌‌ಗಳಲ್ಲಿ ಮೇಕಿಂಗ್ ಚಾರ್ಜ್ ಕಡಿಮೆ ಇರುವುದರಿಂದ ಅವುಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ.

ಬೇಡಿಕೆ ಹೆಚ್ಚಾದಂತೆ ಜ್ಯುವೆಲ್ಲರಿ ಮಳಿಗೆಗಳು ಹೊಸ ಸ್ಟಾಕ್ ತರುವುದರಲ್ಲೇ ನಿರತವಾಗಿವೆ. ಆದರೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಸ್ಟಾಕ್ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಮಳಿಗೆ ಮಾಲೀಕರು ತಿಳಿಸಿದ್ದಾರೆ. ಅನೇಕ ಮಳಿಗೆಗಳು ಮುಂಗಡ ಬುಕಿಂಗ್ ಸಹ ಸ್ವೀಕರಿಸುತ್ತಿವೆ.

 

 

Exit mobile version