ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಚಂದಾದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಇನ್ಮುಂದೆ ನಿಮ್ಮ ಪಿಎಫ್ ಅಕೌಂಟ್‌ನಲ್ಲಿರುವ ಹಣವನ್ನು ಹಿಂಪಡೆಯಲು ವಾರಗಟ್ಟಲೆ ಕಾಯಬೇಕಿಲ್ಲ ಅಥವಾ ಸಂಕೀರ್ಣ ಪ್ರಕ್ರಿಯೆಗಳನ್ನು ಅನುಸರಿಸಬೇಕಿಲ್ಲ. ಫೋನ್ ಪೇ, ಗೂಗಲ್ ಪೇ ಅಥವಾ ಪೇಟಿಎಂ ಮೂಲಕ ಹಣ ಕಳುಹಿಸುವಷ್ಟೇ ಸುಲಭವಾಗಿ ನಿಮ್ಮ ಪಿಎಫ್ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.
ಯುಪಿಐ ಲಿಂಕ್ಡ್ ಹೊಸ ಅಪ್ಲಿಕೇಶನ್
ಇಪಿಎಫ್‌ಓ ಮಾರ್ಚ್ ಅಂತ್ಯದ ವೇಳೆಗೆ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ‘ಉಮಾಂಗ್’ (UMANG) ಅಪ್ಲಿಕೇಶನ್‌ಗಿಂತ ಇದು ತೀರಾ ಭಿನ್ನವಾಗಿರಲಿದೆ. ಈ ಹೊಸ ಆಪ್ ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆ ಹಾಗೂ ಬಿಎಚ್‌ಐಎಂ (BHIM) ಸೇರಿದಂತೆ ಇತರ ಯುಪಿಐ (UPI) ಅಪ್ಲಿಕೇಶನ್‌ಗಳೊಂದಿಗೆ ಲಿಂಕ್ ಆಗಿರಲಿದೆ. ಇದರಿಂದ ಚಂದಾದಾರರು ಕ್ಷಣಾರ್ಧದಲ್ಲಿ ತಮ್ಮ ಫಂಡ್ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಲು ಸಾಧ್ಯವಾಗುತ್ತದೆ.
ಹಣ ಪಡೆಯುವ ಮಿತಿ
ಈ ಹೊಸ ವ್ಯವಸ್ಥೆಯ ಅಡಿಯಲ್ಲಿ, ಪಿಎಫ್ ಅಕೌಂಟ್ ಹೊಂದಿರುವವರು ತಮ್ಮ ಒಟ್ಟು ಫಂಡ್‌ನಲ್ಲಿರುವ ಶೇ. 75ರಷ್ಟು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಆದರೆ, ಇಪಿಎಫ್‌ಓ ನಿಯಮದಂತೆ ಒಟ್ಟು ಬಾಕಿಯ ಕನಿಷ್ಠ ಶೇ. 25ರಷ್ಟು ಹಣವು ಚಂದಾದಾರರ ಖಾತೆಯಲ್ಲೇ ಉಳಿಯಬೇಕಾಗುತ್ತದೆ. ಒಂದು ವೇಳೆ ಉದ್ಯೋಗ ನಷ್ಟವಾದರೆ, ಬಾಕಿ ಉಳಿದ ಶೇ. 25ರಷ್ಟು ಮೊತ್ತವನ್ನು 12 ತಿಂಗಳ ನಂತರವಷ್ಟೇ ಹಿಂಪಡೆಯಲು ಅವಕಾಶವಿರುತ್ತದೆ.
30 ಕೋಟಿ ಸದಸ್ಯರಿಗೆ ಅನುಕೂಲ:
ಸದ್ಯ ಇಪಿಎಫ್‌ಓದಲ್ಲಿ ಒಟ್ಟು 30 ಕೋಟಿ ಸದಸ್ಯರಿದ್ದಾರೆ. ಇದರಲ್ಲಿ ಸಕ್ರಿಯವಾಗಿ ವಂತಿಗೆ ನೀಡುತ್ತಿರುವವರು ಸುಮಾರು 7.5 ಕೋಟಿ ಮಂದಿ. ಇಪಿಎಫ್‌ಓ ಒಟ್ಟು 26 ಲಕ್ಷ ಕೋಟಿ ರೂಪಾಯಿಗಳ ಬೃಹತ್ ನಿಧಿಯನ್ನು ನಿರ್ವಹಿಸುತ್ತಿದೆ. ಈ ಹೊಸ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಕೋಟ್ಯಂತರ ಕಾರ್ಮಿಕರು ಮತ್ತು ಸಾಫ್ಟ್‌ವೇರ್ ಉದ್ಯೋಗಿಗಳಿಗೆ ತುರ್ತು ಸಂದರ್ಭದಲ್ಲಿ ಹಣ ಪಡೆಯುವುದು ಅತ್ಯಂತ ಸುಲಭವಾಗಲಿದೆ.
ಈಗಾಗಲೇ ಈ ಹೊಸ ಅಪ್ಲಿಕೇಶನ್‌ನ ಪರೀಕ್ಷಾರ್ಥ ಪ್ರಯೋಗ (Testing) ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮಾರ್ಚ್ ತಿಂಗಳಿನಿಂದ ಇದು ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಅಲ್ಲಿಯವರೆಗೂ ಎಂದಿನಂತೆ ಯುಎಎನ್ (UAN) ಪೋರ್ಟಲ್ ಮೂಲಕವೇ ಹಣ ಪಡೆಯುವ ಪ್ರಕ್ರಿಯೆ ಮುಂದುವರಿಯಲಿದೆ.
