ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸಿಕೊಳ್ಳುತ್ತಿದ್ದು, ಫ್ಯಾಮಿಲಿ ವೀಕ್ ಮುಕ್ತಾಯವಾದ ಬೆನ್ನಲ್ಲೇ ಸ್ಪರ್ಧಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಸೀಸನ್ ಅಂತ್ಯದ ಹಂತಕ್ಕೆ ಕಾಲಿಟ್ಟಿರುವ ಈ ಹೊತ್ತಿನಲ್ಲಿ ಎಲಿಮಿನೇಷನ್ ಬಿಸಿ ಮನೆಮಂದಿಗೆ ತಟ್ಟಿದ್ದು, ಈ ವಾರ ಡಬಲ್ ಎಲಿಮಿನೇಷನ್ ಘೋಷಣೆ ಮಾಡಲಾಗಿದೆ. ಇದೀಗ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿಯಾಗಿ ಸೂರಜ್ ಸಿಂಗ್ ಎಲಿಮಿನೇಟ್ ಆಗಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದರು. ನಿರ್ದೇಶಕ ಪ್ರೇಮ್, ‘ಕೆಡಿ: ದಿ ಡೆವಿಲ್’ ಸಿನಿಮಾ ತಂಡ ಹಾಗೂ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ತಂಡದ ಆಗಮನದಿಂದ ಮನೆಮಂದಿಗೆ ಸಂಭ್ರಮದ ಕ್ಷಣಗಳು ಸಿಕ್ಕಿದ್ದವು. ಆದರೆ ಈ ಸಂತಸ ಹೆಚ್ಚು ದಿನ ಉಳಿಯಲಿಲ್ಲ. ಡಬಲ್ ಎಲಿಮಿನೇಷನ್ ವಿಷಯ ತಿಳಿಯುತ್ತಿದ್ದಂತೆ ಸ್ಪರ್ಧಿಗಳು ಆತಂಕಕ್ಕೆ ಒಳಗಾಗಿದ್ದರು.
ಈ ವಾರ ಕಾವ್ಯಾ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಸದಸ್ಯರು ನಾಮಿನೇಷನ್ ಎದುರಿಸಿದ್ದರು. ಇದೇ ವೇಳೆ ಸ್ಪಂದನಾ ಸೋಮಣ್ಣ ಅವರು ದೊಡ್ಮನೆಯಿಂದ ಗೇಟ್ ಪಾಸ್ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಇಂತಹ ಗೊಂದಲದ ಮಧ್ಯೆ ಸೂರಜ್ ಸಿಂಗ್ ಹೊರ ಹೋಗಿದ್ದು, ಅನೇಕ ಅಭಿಮಾನಿಗಳಿಗೆ ನಿರಾಶೆ ತಂದಿದೆ.
ಸೂರಜ್ ಸಿಂಗ್- ಸರಳ ವ್ಯಕ್ತಿತ್ವ, ಸ್ಟ್ರಾಟಜಿಕ್ ಆಟ
ಮೈಸೂರಿನ ಹುಡುಗನಾದ ಸೂರಜ್ ಸಿಂಗ್, ಐಟಿ ಉದ್ಯೋಗಿಯಾಗಿ ಕೆಲಸ ಮಾಡಿದ್ದವರು. ಅವರು ಮಾಡೆಲಿಂಗ್‌ನಲ್ಲೂ ಸಕ್ರಿಯರಾಗಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳಿದ್ದ ಸೂರಜ್, ಅಲ್ಲಿ ಶೆಫ್ ಆಗಿಯೂ ಕೆಲಸ ಮಾಡಿದ್ದ ಅನುಭವವನ್ನು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದರು.
ಫ್ಯಾಮಿಲಿ ವೀಕ್ ವೇಳೆ ಸೂರಜ್ ಹೇಳಿದ ಮಾತುಗಳು ಸಾಕಷ್ಟು ಭಾವುಕತೆ ಮೂಡಿಸಿತ್ತು. “ಅಕ್ಕನ ಮದುವೆಯ ನಂತರ ನನ್ನ ತಾಯಿ ಒಬ್ಬರೇ ಉಳಿದರು. ಅವರನ್ನು ಒಬ್ಬರನ್ನೇ ಬಿಡಲು ಆಗಲಿಲ್ಲ. ಅದಕ್ಕಾಗಿ ವಿದೇಶ ಬಿಟ್ಟು ಭಾರತಕ್ಕೆ ವಾಪಸ್ ಬಂದೆ” ಎಂದು ಹೇಳಿ ಕಣ್ಣೀರಿಟ್ಟಿದ್ದರು. ಈ ಮಾತುಗಳು ಪ್ರೇಕ್ಷಕರ ಹೃದಯ ಗೆದ್ದಿದ್ದವು.
ರಾಶಿಕಾ–ಸೂರಜ್ ಜೋಡಿ
ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಮತ್ತು ಸೂರಜ್ ಸಿಂಗ್ ನಡುವಿನ ಸ್ನೇಹವೇ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇವರಿಬ್ಬರ ಒಡನಾಟ ಮನೆಯೊಳಗೆ ಮಾತ್ರವಲ್ಲದೆ ಹೊರಗೂ ಸಾಕಷ್ಟು ಟ್ರೋಲ್‌ಗಳಿಗೆ ಕಾರಣವಾಗಿತ್ತು. ವಾರಾಂತ್ಯ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಕೂಡ ಈ ವಿಚಾರವಾಗಿ ಸೂರಜ್‌ಗೆ ಎಚ್ಚರಿಕೆ ನೀಡಿದ್ದರು.
ರಾಶಿಕಾ ಕಾರಣಕ್ಕೆ ಸೂರಜ್ ತಮ್ಮ ಅಸಲಿ ಆಟವನ್ನು ತೋರಿಸುತ್ತಿಲ್ಲ ಎಂಬ ಆರೋಪಗಳು ಮನೆಮಂದಿಯಲ್ಲೂ, ಪ್ರೇಕ್ಷಕರಲ್ಲೂ ಕೇಳಿಬಂದಿದ್ದವು. ಜಗಳವಾಗಲಿ, ಟಾಸ್ಕ್ ಆಗಲಿ ಹೆಚ್ಚು ಟೀಕೆ ಎದುರಿಸಿದ್ದು ರಾಶಿಕಾವೇ. ಆದರೆ ಸೂರಜ್ ಮೇಲಿದ್ದ ನಿರೀಕ್ಷೆ ಮಾತ್ರ ಕೊನೆಗೆ ಸುಳ್ಳಾಯಿತು ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.
ಸೂರಜ್ ಎಲಿಮಿನೇಟ್ ಆಗುತ್ತಿದ್ದಂತೆ ರಾಶಿಕಾ ಶೆಟ್ಟಿ ಕಣ್ಣೀರಿಟ್ಟಿದ್ದು, ಅವರ ಸ್ನೇಹ ಎಷ್ಟು ಆಳವಾಗಿತ್ತು ಎನ್ನುವುದನ್ನು ಮತ್ತೊಮ್ಮೆ ತೋರಿಸಿತ್ತು.
