ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 12’ ತನ್ನ ಆರಂಭದಿಂದಲೇ ಅನಿರೀಕ್ಷಿತ ತಿರುವುಗಳಿಗೆ ಸಾಕ್ಷಿಯಾಗಿದೆ. ಒಳಗಿನ ಆಟದ ರೋಚಕತೆಯ ಜೊತೆಗೆ, ಹೊರಗಿನ ಕಾನೂನು ತೊಡಕುಗಳು ಶೋಗೆ ದೊಡ್ಡ ಆಘಾತವನ್ನುಂಟು ಮಾಡಿವೆ. ಬಿಡದಿಯ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಈ ಶೋಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಪಿಸಿಬಿ) ಅನುಮತಿ ಇಲ್ಲದ ಕಾರಣ ಬೀಗ ಜಡಿಯಲಾಗಿದೆ. ಆದರೆ, ಬಂದ್ ಆಗುವ ಮೊದಲು ನಡೆದ ಘಟನೆಗಳು, ವಿಶೇಷವಾಗಿ ಸ್ಪರ್ಧಿ ಅಶ್ವಿನಿ ಗೌಡ ಅವರ ಡೈಮಂಡ್ ರಿಂಗ್ ಕಳ್ಳತನದ ವಿವಾದ, ವೀಕ್ಷಕರ ಕುತೂಹಲವನ್ನು ಕೆರಳಿಸಿದೆ.
ಜಂಟಿಗಳು ವರ್ಸಸ್ ಒಂಟಿಗಳು ಎಂಬ ಥೀಮ್‌ನೊಂದಿಗೆ ಸೆಪ್ಟೆಂಬರ್ 28, 2025ರಂದು ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾಯಿತು. ಕಾಕ್ರೋಜ್ ಸುಧಿ ಅವರು ಅಸುರಾಧಿಪತಿಯಾಗಿ ವಿಶೇಷ ಅಧಿಕಾರ ಪಡೆದರು. ಆದರೆ, ಒಂಟಿಗಳ ತಂಡದ ಸ್ಪರ್ಧಿ ಅಶ್ವಿನಿ ಗೌಡ ಅವರಿಂದ ಬೆಂಬಲ ಸಿಗದಿದ್ದಾಗ, ಸುಧಿ ತಂತ್ರಗಾರಿಕೆಗೆ ಇಳಿದರು. ಅಶ್ವಿನಿಗೆ ಬುದ್ಧಿ ಕಲಿಸಲು ಮೇಕಪ್ ಮಾಡದಂತೆ ನಿಯಮ ವಿಧಿಸಿದರು. ಆದರೆ, ಅಶ್ವಿನಿ ಮತ್ತು ಜಾಹ್ನವಿ ಸೇರಿದಂತೆ ಕೆಲವರು ಈ ನಿಯಮವನ್ನು ಉಲ್ಲಂಘಿಸಿ ಮೇಕಪ್ ಮಾಡಲು ಯತ್ನಿಸಿದರು.
ಕಾಕ್ರೋಜ್ ಸುಧಿ, ಅಶ್ವಿನಿಯ ಮೇಕಪ್ ಕಿಟ್ ಕದಿಯಲು ಧ್ರುವಂತ್‌ಗೆ ಆದೇಶ ನೀಡಿದರು. ಈ ತಂತ್ರದ ಭಾಗವಾಗಿ ಅಶ್ವಿನಿಯ ಮೇಕಪ್ ಕಿಟ್ ಕಾಣೆಯಾಯಿತು. ಇದರಿಂದ ಕೋಪಗೊಂಡ ಅಶ್ವಿನಿ, ತಮ್ಮ ಡೈಮಂಡ್ ರಿಂಗ್ ಕೂಡ ಕಳೆದುಹೋಗಿದೆ ಎಂದು ಆರೋಪಿಸಿದರು. ಮೇಕಪ್ ಕಿಟ್‌ಗೆ ಅದರದ್ದೇ ಆದ ಗೌರವವಿದೆ. ಅದನ್ನು ಎಲ್ಲೆಂದರಲ್ಲಿ ಇಡುವವರಿಗೆ ಗ್ರಹಚಾರ ಬಿಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಈ ವಿವಾದವು ಬಿಗ್ ಬಾಸ್ ಮನೆಯೊಳಗೆ ತೀವ್ರ ಚರ್ಚೆಗೆ ಕಾರಣವಾಯಿತು.
ಕಾನೂನು ತೊಡಕುಗಳು ಪರಿಹಾರವಾದ ನಂತರ ಶೋ ಮರುಪ್ರಾರಂಭವಾಗುವ ನಿರೀಕ್ಷೆಯಿದೆ. ಆದರೆ, ಶೋವನ್ನು ಹೊಸದಾಗಿ ಆರಂಭಿಸುವರಾ ಅಥವಾ ಎಲ್ಲಿ ನಿಂತಿತ್ತೋ ಅಲ್ಲಿಂದ ಮುಂದುವರೆಸುವರಾ ಎಂಬ ಕುತೂಹಲ ಎಲ್ಲರಲ್ಲಿದೆ. ಜಾಲಿವುಡ್ ಸ್ಟುಡಿಯೋದ ಮಾಲಿಕರಾದ ಐಸಿಆರ್ ಗಣೇಶ್, ಕೆಎಸ್‌ಪಿಸಿಬಿಯ ಆಕ್ಷೇಪಣೆಗಳನ್ನು ಸರಿಪಡಿಸಲು ಕಾಲಾವಕಾಶ ಕೋರಿದ್ದಾರೆ. ಒಂದು ವೇಳೆ ಅನುಮತಿ ಸಿಗದಿದ್ದರೆ, ಶೋವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ.