ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಗೆ ದೊಡ್ಡ ಆಘಾತ. ರಾಮನಗರ ಜಿಲ್ಲಾಡಳಿತ ಮತ್ತು ಪೊಲೀಸ್ ತಂಡವು ಜಾಲಿವುಡ್ ಸ್ಟುಡಿಯೋಸ್‌ನ ಬಿಗ್ ಬಾಸ್ ಮನೆಗೆ ಬೀಗ ಹಾಕಿದೆ . ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯದೆ ಕಾರ್ಯನಿರ್ವಹಿಸಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ . ಈ ಘಟನೆಯ ನಡುವೆ, ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ಒಂದು ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ.
ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿದ ನಂತರ, ಮನೆಯಲ್ಲಿದ್ದ ಎಲ್ಲಾ 17 ಸ್ಪರ್ಧಿಗಳನ್ನು ತಕ್ಷಣ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈಗಲ್ಟನ್ ರೆಸಾರರ್ಟ್‌ಗೆ ಸ್ಥಳಾಂತರಿಸಲಾಗಿದೆ . ಸ್ಪರ್ಧಿಗಳಿಗಾಗಿ ರೆಸಾರ್ಟ್ನಲ್ಲಿ 12 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿದುಬಂದಿದೆ . ಸ್ಟುಡಿಯೋಗೆ ಒಟ್ಟು ನಾಲ್ಕು ಗೇಟ್ಗಳಿದ್ದು, ಅಧಿಕಾರಿಗಳು ಮೂರು ಗೇಟ್ಗಳಿಗೆ ಬೀಗ ಹಾಕಿದ್ದಾರೆ .
ಈ ಹಿನ್ನೆಲೆಯಲ್ಲಿ, ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ಒಂದು ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟಕವಾಗಿ ವೈರಲ್ ಆಗುತ್ತಿದೆ. ರಕ್ಷಿತಾ ಅವರನ್ನು ಮತ್ತೆ ಮನೆಗೆ ಕಳುಹಿಸುವ ಮುನ್ನ ಆಂಕರ್ ಸುದೀಪ್ ಅವರು “ಈ ಸಲ ಒಳಗೆ ಹೋದರೆ ಯಾರನ್ನು ಹೊರಗೆ ಹಾಕಲು ಬಯಸುತ್ತೀರಿ?” ಎಂದು ಪ್ರಶ್ನಿಸಿದ್ದರು. ಇದಕ್ಕೆ ರಕ್ಷಿತಾ “ನಾನು ಎಲ್ಲರನ್ನೂ ಹೊರಗೆ ಹಾಕುತ್ತೇನೆ” ಎಂದು ಉತ್ತರಿಸಿದ್ದರು. ಈ ‘ಡೈಲಾಗ್’ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅನೇಕರು ರಕ್ಷಿತಾ ಪ್ರಾರ್ಥನೆಗೆ ದೇವರು ತಥಾಸ್ತು ಎಂದಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.
ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿಯು ಈ ಸ್ಥಗಿತಗೊಳಿಸುವಿಕೆಯ ವಿರುದ್ಧ ಹೈಕೋರ್ಟ್ ಮೊರೆ ಹೋಗಲಿದೆ ಎಂದು ತಿಳಿದುಬಂದಿದೆ . ಸ್ಟುಡಿಯೋವು 2024ರಿಂದಲೇ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪವಿದೆ . ಪ್ರಸ್ತುತ, ಶೋ ಮುಂದಿನ ಭವಿಷ್ಯ ಅನಿಶ್ಚಿತವಾಗಿದೆ. ಆಯೋಜಕರು ಬೇರೆ ಕಡೆ ಶೋ ನಡೆಸುವುದೇ ಅಥವಾ ಸದ್ಯಕ್ಕೆ ಸ್ಥಗಿತಗೊಳಿಸುವುದೇ ಎಂದು ಚರ್ಚಿಸುತ್ತಿದ್ದಾರೆ .