ಬಿಗ್‌ಬಾಸ್ ತೆಲುಗು 9: Bigg Boss ಟ್ರೋಫಿ ಗೆದ್ದ ಕಲ್ಯಾಣ್ ಪಡಾಲ್, ಕನ್ನಡತಿ ತನುಜಾ ರನ್ನರ್ ಅಪ್

Untitled design 2025 12 22T175011.193

ಬಿಗ್ ಬಾಸ್ ತೆಲುಗು ಸೀಸನ್ 9 ಡಿಸೆಂಬರ್ 21ರಂದು ಅದ್ಧೂರಿಯಾಗಿ ಅಂತ್ಯಗೊಂಡಿದ್ದು, ಈ ಬಾರಿ ಕಾಮನ್ ಮ್ಯಾನ್ ಗೆಲುವು ಶೋ ಇತಿಹಾಸದಲ್ಲೇ ವಿಶೇಷ ಸ್ಥಾನ ಪಡೆದಿದೆ. ಲಕ್ಷಾಂತರ ಪ್ರೇಕ್ಷಕರ ಮನ ಗೆದ್ದ ಸಿಆರ್‌ಪಿಎಫ್ ಜವಾನ್ ಕಲ್ಯಾಣ್ ಪಡಾಲ ಬಿಗ್ ಬಾಸ್ ತೆಲುಗು ಸೀಸನ್ 9ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕನ್ನಡತಿ ತನುಜಾ ಗೌಡ ರನ್ನರ್ ಅಪ್ ಆಗಿ ಸ್ಪರ್ಧೆಗೆ ಗೌರವ ತಂದುಕೊಟ್ಟಿದ್ದಾರೆ.

ಹಿಂದಿನ ಸೀಸನ್‌ಗಳಿಗಿಂತ ಈ ಬಾರಿ ಬಿಗ್ ಬಾಸ್ ತೆಲುಗುಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಪ್ರತಿ ವಾರವೂ ಹೊಸ ತಿರುವುಗಳು, ತೀವ್ರ ಪೈಪೋಟಿ ಪ್ರೇಕ್ಷಕರ ಮನ ಗೆದ್ದಿತ್ತು. ಒಟ್ಟು ಐದು ಮಂದಿ ಫೈನಲ್‌ಗೆ ಆಯ್ಕೆಯಾಗಿದ್ದರು. ಕಲ್ಯಾಣ್ ಪಡಾಲ, ಇಮಾನ್ಯುಯೆಲ್, ಸಂಜನಾ ಗಲ್ರಾನಿ, ತನುಜಾ ಮತ್ತು ಡೆಮನ್ ಪವನ್ ಫಿನಾಲೆ ವಾರದಲ್ಲಿ ತಮ್ಮ ಆಟದಿಂದ ಗಮನ ಸೆಳೆದರು.

ಮೂರನೇ ವಾರದಲ್ಲಿ ಪ್ರಿಯಾ ಎಲಿಮಿನೇಟ್ ಆದ ಬಳಿಕ ಕಲ್ಯಾಣ್ ಅವರ ಆಟದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿತ್ತು. ಆ ಹಂತದಿಂದಲೇ ಅವರು ತಾಳ್ಮೆ, ಸತ್ಯನಿಷ್ಠೆ ಮತ್ತು ಶಾಂತ ಆಟದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಫಿನಾಲೆ ದಿನದಂದು ಮೊದಲಿಗೆ ಇಮಾನ್ಯುಯೆಲ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ನಂತರ ಸಂಜನಾ ಗಲ್ರಾನಿ ಮೂರನೇ ರನ್ನರ್ ಅಪ್ ಆಗಿದರು. ಡೆಮನ್ ಪವನ್ ಎರಡನೇ ರನ್ನರ್ ಅಪ್ ಆಗಿ 15 ಲಕ್ಷ ರೂ. ಬಹುಮಾನ ಪಡೆದು ಮನೆಯಿಂದ ಹೊರಬಂದರು. ಅಂತಿಮ ಹಂತದಲ್ಲಿ ಕಲ್ಯಾಣ್ ಮತ್ತು ತನುಜಾ ನಡುವೆ ತೀವ್ರ ಪೈಪೋಟಿ ನಡೆಯಿತು. ಆದರೆ ಪ್ರೇಕ್ಷಕರ ಮತಗಳ ಆಧಾರದ ಮೇಲೆ ಕಲ್ಯಾಣ್ ಪಡಾಲ ವಿಜೇತರಾಗಿದ್ದು, ತನುಜಾ ಪುಟ್ಟಸ್ವಾಮಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು.

ಕಲ್ಯಾಣ್ ಪಡಾಲ ಅವರ ಬದುಕಿನ ಕಥೆಯೇ ಪ್ರೇರಣಾದಾಯಕವಾಗಿದೆ. ಬಾಲ್ಯದಿಂದಲೇ ಸಿನಿಮಾಗಳ ಮೇಲೆ ಆಸಕ್ತಿ ಇದ್ದರೂ, ಕುಟುಂಬದ ಆರ್ಥಿಕ ಪರಿಸ್ಥಿತಿ ಅವರನ್ನು ಸಿಆರ್‌ಪಿಎಫ್ ಸೇರಲು ಒತ್ತಾಯಿಸಿತ್ತು. ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಕಲ್ಯಾಣ್, ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿ, ಭಾರತೀಯ ಸೇನಾ ಜವಾನ್ ಎಂಬ ಗೌರವದೊಂದಿಗೆ ಲಕ್ಷಾಂತರ ಜನರ ಹೀರೋ ಆಗಿ ಹೊರಬಂದಿದ್ದಾರೆ.

ಇನ್ನೊಂದೆಡೆ, ಬೆಂಗಳೂರು ಮೂಲದ ನಟಿ ತನುಜಾ ಗೌಡ ತಮ್ಮ ಆಟ ಮತ್ತು ಸ್ಪಷ್ಟ ಅಭಿಪ್ರಾಯಗಳಿಂದ ಮನೆ ಒಳಗೆ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದರು. ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ ‘6-5=2’ ಮೂಲಕ ಪರಿಚಿತರಾದ ತನುಜಾ, ನಂತರ ತೆಲುಗಿನ ‘ಮುದ್ದ ಮಂದಾರಂ’ ಧಾರಾವಾಹಿಯಲ್ಲಿ ನಟಿಸಿ ಟಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದರು. ಬಿಗ್ ಬಾಸ್ ವೇದಿಕೆಯಲ್ಲಿ ಅವರ ಪ್ರಯಾಣ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ವಿಜೇತ ಕಲ್ಯಾಣ್ ಪಡಾಲ ಅವರಿಗೆ 35 ಲಕ್ಷ ರೂ. ನಗದು ಬಹುಮಾನ, ಜೊತೆಗೆ ಒಂದು ಎಸ್‌ಯುವಿ ಕಾರು ಲಭಿಸಿದೆ. ಒಟ್ಟು 50 ಲಕ್ಷ ರೂ. ಬಹುಮಾನ ಮೊತ್ತದಲ್ಲಿ ಉಳಿದ ಫೈನಲಿಸ್ಟ್‌ಗಳು ತಮ್ಮ ಪಾಲಿನ ಮೊತ್ತವನ್ನು ಪಡೆದುಕೊಂಡಿದ್ದಾರೆ.

ಸೆಪ್ಟೆಂಬರ್ 7ರಂದು ಆರಂಭವಾದ ಈ ಸೀಸನ್ ಒಟ್ಟು 106 ದಿನಗಳ ಕಾಲ ನಡೆಯಿತು. 15 ಮಂದಿ ಸ್ಪರ್ಧಿಗಳು ಆರಂಭದಲ್ಲಿ ಮನೆ ಪ್ರವೇಶಿಸಿದ್ದರು. ನಂತರ 7 ಮಂದಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದರು. ಈ ಬಾರಿ ಕೂಡ ನಟ ನಾಗಾರ್ಜುನ ಶೋನ ನಿರೂಪಣೆ ಮಾಡಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

Exit mobile version