ಶಿವಣ್ಣ ಹಾಗೂ ಸುದೀಪ್ ಭೇಟಿ ಮಾಡಿ ಆಶೀರ್ವಾದ ಪಡೆದ ಬಿಗ್ ಬಾಸ್ 12 ವಿನ್ನರ್ ಗಿಲ್ಲಿ

BeFunky collage (2)

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಭರ್ಜರಿ ಗೆಲುವು ಸಾಧಿಸಿ ಟ್ರೋಫಿ ಗಿಲ್ಲಿ ನಟನ ಮುಡಿಗೇರಿದೆ. ಅವರು ತಮ್ಮ ಗೆಲುವಿನ ನಂತರ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್  ಹಾಗೂ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯಿಂದ ಗಿಲ್ಲಿ ಅವರು ತುಂಬಾ ಖುಷಿಪಟ್ಟಿದ್ದು, ಇಬ್ಬರು ಹಿರಿಯ ನಟರು ತಮ್ಮ ಬದುಕಿಗೆ ದಾರಿದೀಪ ಆಗಿದ್ದಾರೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಗಿಲ್ಲಿ ಅವರು ಮೊದಲು ತಮ್ಮ ಹುಟ್ಟೂರಲ್ಲಿ ಭಾರಿ ರ‍್ಯಾಲಿ ಮಾಡಿದ್ದರು. ಅಭಿಮಾನಿಗಳ ಜೊತೆ ಸಂತೋಷ ಹಂಚಿಕೊಂಡ ಬಳಿಕ ಬೆಂಗಳೂರಿಗೆ ಮರಳಿ, ತಮ್ಮ ಮೆಚ್ಚಿನ ಐಡಾಲ್‌ಗಳನ್ನು ಭೇಟಿ ಮಾಡಿದ್ದಾರೆ.

ಶಿವರಾಜ್‌ಕುಮಾರ್ ಜೊತೆಗಿನ ಸಂಬಂಧ:

ಗಿಲ್ಲಿ ನಟ ಅವರಿಗೆ ಶಿವಣ್ಣ ಅವರು ಹಿಂದಿನಿಂದಲೂ ಪರಿಚಿತರು. ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಶಿವರಾಜ್‌ಕುಮಾರ್ ಜಡ್ಜ್ ಆಗಿದ್ದಾಗ ಗಿಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆಗಲೇ ಗಿಲ್ಲಿಯ ಪ್ರತಿಭೆಗೆ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಿಗ್ ಬಾಸ್ ಸೀಸನ್ 12ರಲ್ಲಿ ಗಿಲ್ಲಿ ಮನೆಯಲ್ಲಿದ್ದಾಗಲೂ ಶಿವಣ್ಣ ಅವರು “ಗಿಲ್ಲಿನೇ ಗೆಲ್ಲುತ್ತಾನೆ” ಎಂದು ಭವಿಷ್ಯ ಹೇಳಿದ್ದರು. ಈ ಮಾತುಗಳು ಗಿಲ್ಲಿಗೆ ತಲುಪಿದ ನಂತರ, ಅವರು ತಕ್ಷಣ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಕಿಚ್ಚ ಸುದೀಪ್ ಜೊತೆಗಿನ ಭೇಟಿ:

ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಅವರು ಶೋನಲ್ಲಿ ಗಿಲ್ಲಿಯನ್ನು ಅನೇಕ ಬಾರಿ ಮಾರ್ಗದರ್ಶನ ಮಾಡಿದ್ದರು ಮತ್ತು ಫೈನಲ್‌ನಲ್ಲಿ ವೈಯಕ್ತಿಕವಾಗಿ ₹10 ಲಕ್ಷ ಗಿಫ್ಟ್ ನೀಡಿದ್ದರು. ಆದರೆ ಶೋದ ಸಮಯದಲ್ಲಿ ಎಲ್ಲ ವಿಷಯಗಳನ್ನು ಮನಬಿಚ್ಚಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಗಿಲ್ಲಿ ಹೊರ ಬಂದ ನಂತರ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಗಿಲ್ಲಿ ಅಭಿಮಾನಿಗಳು ಸುದೀಪ್ ಬಗ್ಗೆ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು.

ಇಬ್ಬರು ಸೂಪರ್‌ಸ್ಟಾರ್‌ಗಳೂ ಗಿಲ್ಲಿಗೆ ಮನಸ್ಫೂರ್ತಿಯಾಗಿ ಶುಭ ಹಾರೈಸಿದ್ದಾರೆ. ಈ ಆಶೀರ್ವಾದದಿಂದ ಗಿಲ್ಲಿ ತುಂಬಾ ಸಂತೋಷಪಟ್ಟಿದ್ದಾರೆ. ಇದರಿಂದಾಗಿ ಮುಂದೆ ಗಿಲ್ಲಿಗೆ ಇನ್ನಷ್ಟು ಸಿನಿಮಾ ಆಫರ್‌ಗಳು ಬರಲಿವೆ ಎಂಬ ನಿರೀಕ್ಷೆಯಿದೆ.

Exit mobile version