ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ಸಂಭ್ರಮ ಜೋರಾಗಿದೆ. ಸ್ಪರ್ಧಿಗಳ ಪೋಷಕರು ಹಾಗೂ ಕುಟುಂಬ ಸದಸ್ಯರು ಮನೆಯೊಳಗೆ ಎಂಟ್ರಿ ಕೊಟ್ಟು ತಮ್ಮವರನ್ನು ಹುರಿದುಂಬಿಸುತ್ತಿರುವ ಕ್ಷಣಗಳು ಪ್ರೇಕ್ಷಕರ ಮನ ಗೆದ್ದಿವೆ. ಆದರೆ, ಈ ಎಲ್ಲ ಸಂಭ್ರಮದ ನಡುವೆ ಒಬ್ಬ ಸ್ಪರ್ಧಿಯ ಹೆಸರು ಮಾತ್ರ ಮನೆ ತುಂಬಾ ಹಬ್ಬಿಕೊಂಡಿದೆ. ಅವರೇ ಎಲ್ಲರ ಫೇವರಿಟ್ ಆಗಿರುವ ಗಿಲ್ಲಿ ನಟ.
ಗಿಲ್ಲಿ ನಟ ಆರಂಭದಿಂದಲೂ ತಮ್ಮ ಆಟ, ಹಾಸ್ಯಭರಿತ ಮಾತುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇತ್ತೀಚಿನ ವಾರಗಳಲ್ಲಿ ಅವರು ಇನ್ನಷ್ಟು ಸ್ಟ್ರಾಂಗ್ ಆಗಿ ಹೊರಹೊಮ್ಮಿದ್ದು, ಇದೀಗ ಫ್ಯಾಮಿಲಿ ವೀಕ್‌ನಲ್ಲಿ ಮನೆಗೆ ಬಂದ ಸದಸ್ಯರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ವಿಶೇಷವೆಂದರೆ, ತಮ್ಮವರನ್ನು ಬಿಟ್ಟು ಬೇರೆ ಸ್ಪರ್ಧಿಯನ್ನು ಆಯ್ಕೆ ಮಾಡಬೇಕಾದ ಸಂದರ್ಭದಲ್ಲೂ ಬಹುತೇಕ ಕುಟುಂಬ ಸದಸ್ಯರು ಗಿಲ್ಲಿ ನಟ ಅವರನ್ನೇ ಆಯ್ಕೆ ಮಾಡಿದ್ದಾರೆ.
ಈ ವಾರದ ಪ್ರಮುಖ ಹೈಲೈಟ್ ಎಂದರೆ ಮುಂದಿನ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ. ಕುಟುಂಬ ಸದಸ್ಯರ ಆಯ್ಕೆಯೇ ಕ್ಯಾಪ್ಟನ್ಸಿ ರೇಸ್‌ಗೆ ದಿಕ್ಕು ನೀಡುತ್ತಿರುವುದರಿಂದ, ಎಲ್ಲರ ಗಮನ ಈ ವಿಚಾರದ ಮೇಲಿದೆ. ಅಶ್ವಿನಿ ಗೌಡ ಅವರ ತಾಯಿ ಗಿಲ್ಲಿ ನಟ ಅವರ ಫೋಟೋವನ್ನು ಆಯ್ಕೆ ಮಾಡಿ, “ಗಿಲ್ಲಿ ಕ್ಯಾಪ್ಟನ್ ಆಗಿ ಹೇಗೆ ಕೆಲಸ ಮಾಡುತ್ತಾರೆ, ಮನೆಯನ್ನ ಹೇಗೆ ಮ್ಯಾನೇಜ್ ಮಾಡುತ್ತಾರೆ ಅನ್ನೋದನ್ನು ನೋಡಬೇಕು. ಅದಕ್ಕಾಗಿಯೇ ಅವರನ್ನು ಆಯ್ಕೆ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಅಶ್ವಿನಿ ಅವರ ತಾಯಿಯಷ್ಟೇ ಅಲ್ಲ, ರಕ್ಷಿತಾ ಅವರ ತಾಯಿ ಕೂಡ ಗಿಲ್ಲಿಗೆ ತಮ್ಮ ಮತ ನೀಡಿದ್ದಾರೆ. ಧನುಷ್ ಅವರ ತಾಯಿ ಮಾತುಗಳು ಇನ್ನಷ್ಟು ಕುತೂಹಲ ಮೂಡಿಸಿದವು. “ನನಗೆ ಅಶ್ವಿನಿ ಗೌಡ ಕೂಡ ಇಷ್ಟ. ಆದರೆ ಗಿಲ್ಲಿ ಸ್ವಲ್ಪ ಜಾಸ್ತಿ ಇಷ್ಟ. ಅವರ ಕಾಮಿಡಿ ನನಗೆ ತುಂಬಾ ಖುಷಿ ಕೊಡುತ್ತದೆ. ಗಿಲ್ಲಿ ಕ್ಯಾಪ್ಟನ್ ಆಗಬೇಕು” ಎಂದು ಹೇಳಿದ್ದಾರೆ.
ಧ್ರುವಂತ್ ಅವರ ಕುಟುಂಬದವರು ಕೂಡ ಗಿಲ್ಲಿ ನಟ ಫೋಟೋವನ್ನು ಆಯ್ಕೆ ಮಾಡಿ ಬೋರ್ಡ್‌ನಲ್ಲಿ ಇರಿಸಿದ್ದಾರೆ. ಬೋರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಲ್ಲಿ ನಟ ಫೋಟೋಗಳು ಕಾಣಿಸಿಕೊಂಡಿದ್ದು, ಅವರು ಕ್ಯಾಪ್ಟನ್ ಆಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ರಾಶಿಕಾ ಶೆಟ್ಟಿ ಅವರ ಸಹೋದರ ಸೂರಜ್ ಅವರ ಹೆಸರನ್ನು ಘೋಷಿಸಿ, “ಎಷ್ಟೆಲ್ಲಾ ಪ್ರಯತ್ನ ಮಾಡಿದರೂ ಈವರೆಗೂ ಅವರಿಗೆ ಕ್ಯಾಪ್ಟನ್ ಪಟ್ಟ ಸಿಕ್ಕಿಲ್ಲ. ಈ ಬಾರಿ ಅವರು ಕ್ಯಾಪ್ಟನ್ ಆಗಬೇಕು” ಎಂದು ಹೇಳಿದ್ದಾರೆ. ಅಶ್ವಿನಿ ಗೌಡ ಅವರನ್ನೂ ಸೂರಜ್ ಅವರ ಸಹೋದರಿ ಆಯ್ಕೆ ಮಾಡಿದ್ದಾರೆ. ಇದರಿಂದ ಕ್ಯಾಪ್ಟನ್ಸಿ ರೇಸ್ ಇನ್ನಷ್ಟು ರೋಚಕವಾಗಿದೆ.
ಸಾಮಾನ್ಯವಾಗಿ ಟಾಸ್ಕ್‌ಗಳ ಮೂಲಕ ಕ್ಯಾಪ್ಟನ್ ಆಯ್ಕೆ ಆಗುತ್ತದೆ. ಆದರೆ ಈವರೆಗೂ ಗಿಲ್ಲಿ ನಟ ಅವರಿಗೆ ಆ ಮೂಲಕ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿಲ್ಲ. ಈ ಹಿನ್ನೆಲೆ, ಕುಟುಂಬ ಸದಸ್ಯರ ಬೆಂಬಲದಿಂದ ಈ ಬಾರಿ ಗಿಲ್ಲಿ ಕ್ಯಾಪ್ಟನ್ ಆಗುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಈ ಬಗ್ಗೆ ರಘು ಕೂಡ ಮಾತನಾಡಿದ್ದು, “ಗಿಲ್ಲಿ ಬಹಳ ಬ್ಯಾಲೆನ್ಸ್ ಆಟ ಆಡುತ್ತಿದ್ದಾರೆ. ಅವರಿಗೆ ಅವಕಾಶ ಸಿಕ್ಕರೆ ಉತ್ತಮ ಕ್ಯಾಪ್ಟನ್ ಆಗಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
