ಬಿಗ್ ಬಾಸ್ ಕನ್ನಡ ಸೀಸನ್ 12 ರ ಐದನೇ ವಾರದಲ್ಲಿ ಒಂದು ಕಡೆ ಸ್ನೇಹ, ಪ್ರೀತಿಯ ಮಾತುಗಳು ಕೇಳಿಬಂದರೆ, ಮತ್ತೊಂದೆಡೆ ಆಟದ ತಂತ್ರಗಳು ಮತ್ತು ಭಿನ್ನಾಭಿಪ್ರಾಯಗಳು ತಲೆ ಎತ್ತಿವೆ. ಈ ವಾರದ ಬಿಗ್ ಬಾಸ್ ಸ್ಕೂಲ್ ಟಾಸ್ಕ್‌ನಲ್ಲಿ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾನ್ವಿಯ ನಡುವಿನ ಸ್ನೇಹದ ಬಂಧದಲ್ಲಿ ಒಡಕು ಮೂಡಿದೆ. ಮೊದಲ ದಿನದಿಂದಲೂ ಒಬ್ಬರಿಗೊಬ್ಬರು ಆಪ್ತರಂತೆ ಕಾಣುತ್ತಿದ್ದ ಈ ಜೋಡಿಯ ಸ್ನೇಹದಲ್ಲಿ ಈಗ ಬಿರುಕು ಕಾಣಿಸಿಕೊಂಡಿದೆ. ಇವರಿಬ್ಬರ ನಡುವಿನ ತಿಕ್ಕಾಟ ಮತ್ತು ಪ್ರೀತಿಯ ಕುರಿತಾದ ಸಂಭಾಷಣೆ ಎಲ್ಲರ ಗಮನ ಸೆಳೆದಿದೆ.
ಬಿಗ್ ಬಾಸ್ ಮನೆಯ ಈ ವಾರದ ಟಾಸ್ಕ್‌ನಲ್ಲಿ ಸ್ಪರ್ಧಿಗಳಿಗೆ ತಮ್ಮ ಎದುರಾಳಿಯನ್ನು ಆಯ್ಕೆ ಮಾಡಿಕೊಂಡು, ಆ ಸ್ಪರ್ಧಿ ಏಕೆ ಮನೆಯಲ್ಲಿ ಉಳಿಯಲು ಯೋಗ್ಯರಲ್ಲ ಎಂಬುದಕ್ಕೆ ಕಾರಣ ನೀಡುವ ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ಅಶ್ವಿನಿ ಗೌಡ ತಮ್ಮ ಎದುರಾಳಿಯಾಗಿ ಜಾನ್ವಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ವೇಳೆ ಅಶ್ವಿನಿ, ಜಾನ್ವಿಯ ಸ್ನೇಹದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಜಾನ್ವಿ, ನಿಮ್ಮ ಸ್ನೇಹದಿಂದ ನನಗೆ ಕೇವಲ ಕಳಪೆಯೇ ಬಂದಿದೆ. ಮುಂದೆ ಸ್ನೇಹದಿಂದ ಮಾತಾಡಿಕೊಂಡು, ಹಿಂದಿನಿಂದ ನನ್ನನ್ನು ಮನೆಯಿಂದ ಹೊರಗೆ ಹಾಕಲು ತಂತ್ರ ರೂಪಿಸುತ್ತಿದ್ದೀರಿ. ಇಂತಹ ಸ್ನೇಹಕ್ಕೆ ಬ್ರೇಕ್ ಹಾಕುವುದೇ ಒಳಿತು,” ಎಂದು ಅಶ್ವಿನಿ ತಮ್ಮ ಆಕ್ರೋಶವನ್ನು ನೇರವಾಗಿ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಾನ್ವಿ, “ನಾನು ನನ್ನ ಆಟವನ್ನು ಆಡುತ್ತಿದ್ದೇನೆ, ಅಶ್ವಿನಿ ನೀವು ನಿಮ್ಮ ಆಟವನ್ನು ಆಡುತ್ತಿದ್ದೀರಿ. ಕೆಲವರ ಆಟ ವೇಗವಾಗಿರಬಹುದು, ಇನ್ನು ಕೆಲವರು ನಿಧಾನವಾಗಿ ಗುರಿಯನ್ನು ತಲುಪಬಹುದು. ನನ್ನ ಜೊತೆ ಇರುವುದು ಕೂಡ ಅಶ್ವಿನಿಯವರ ಒಂದು ತಂತ್ರವೇ ಆಗಿರಬಹುದು,” ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಈ ಘಟನೆಯ ನಂತರ, ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ‘ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಅಂದರೆ?’ ಎಂಬ ಶೀರ್ಷಿಕೆಯಡಿ ಈ ಜೋಡಿಯ ಸಂಭಾಷಣೆಯನ್ನು ಒಳಗೊಂಡಿದೆ. ಟಾಸ್ಕ್‌ನ ಒತ್ತಡದ ಮಧ್ಯೆಯೂ ಅಶ್ವಿನಿ ಮತ್ತು ಜಾನ್ವಿ ಪ್ರೀತಿಯ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. “ಪ್ರೀತಿ ಎಂದರೆ ನಿಸ್ವಾರ್ಥವಾಗಿ ಕೊಡುವುದು. ಆದರೆ, ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆ ನಮ್ಮ ಬೆನ್ನ ಹಿಂದೆ ಪಿತೂರಿ ಮಾಡುವ ಶತ್ರುಗಳಿರುತ್ತಾರೆ,” ಎಂದು ಅಶ್ವಿನಿ ಗೌಡ ತಮ್ಮ ಅನುಭವದ ಮೂಲಕ ಹೇಳಿದ್ದಾರೆ. ಇದಕ್ಕೆ ಜಾನ್ವಿ, “ಪ್ರೀತಿಯನ್ನು ಗಳಿಸುವುದು ಸುಲಭ, ಆದರೆ ಅದನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ,” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಬಿಗ್ ಬಾಸ್ ಮನೆಯಲ್ಲಿ ಈಗ ಸ್ನೇಹ, ಪ್ರೀತಿಯ ಮಾತುಗಳಿಗಿಂತ ಆಟದ ತಂತ್ರಗಳು ಮೇಲುಗೈ ಸಾಧಿಸಿವೆ. ಅಶ್ವಿನಿ ಮತ್ತು ಜಾನ್ವಿಯ ನಡುವಿನ ಈ ಮುಸುಕಿನ ಗುದ್ದಾಟ ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
