ಬಿಗ್ ಬಾಸ್ 12ರ ಸ್ಪರ್ಧಿ ಮಲ್ಲಮ್ಮ ಅವರು ವೈಯಕ್ತಿಕ ಕಾರಣಗಳಿಂದ ಶೋನಿಂದ ಹೊರಬಂದಿದ್ದಾರೆ ಎಂಬ ಗುಸುಗುಸು ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಆದರೆ, ಈ ಸುದ್ದಿಗಳೆಲ್ಲ ಸುಳ್ಳು! ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿಲ್ಲ, ಬದಲಿಗೆ ತಮ್ಮ ಆಟವನ್ನು ಉತ್ಸಾಹದಿಂದ ಮುಂದುವರೆಸಿದ್ದಾರೆ. ಮಲ್ಲಮ್ಮ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. “ಮಲ್ಲಮ್ಮ ಬಿಗ್ ಬಾಸ್ ಮನೆಯಲ್ಲಿದ್ದಾರೆ, ದಯವಿಟ್ಟು ವೋಟ್ ಮಾಡಿ” ಎಂದು ಅವರ ತಂಡ ಸಂದೇಶ ರವಾನಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಕಾಲೇಜ್ ಟಾಸ್ಕ್ ನಡೆಯುತ್ತಿದೆ. ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳನ್ನು ರೆಡ್ ಹೌಸ್ ಮತ್ತು ಬ್ಲೂ ಹೌಸ್ ಎಂಬ ಎರಡು ತಂಡಗಳಾಗಿ ವಿಂಗಡಿಸಲಾಗಿದೆ. “ಬಿಗ್ ಬಾಸ್ ಮನೆಯಲ್ಲಿ ಉಳಿಯಲು ನಾನೇಕೆ ಅರ್ಹ?” ಎಂಬ ವಿಷಯದ ಮೇಲೆ ಚರ್ಚಾ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಮಲ್ಲಮ್ಮ ಮತ್ತು ಸ್ಪಂದನಾ ಮುಖಾಮುಖಿಯಾದರು. ಸ್ಪಂದನಾ ಗೆಲುವು ಸಾಧಿಸಿದ್ದರಿಂದ, ಮಲ್ಲಮ್ಮ ಈ ವಾರ ನಾಮನಿರ್ದೇಶನಕ್ಕೆ ಒಳಗಾಗಿದ್ದಾರೆ. ಆದರೆ, ಇದರಿಂದಾಗಿ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ ಎಂಬ ಊಹಾಪೋಹಗಳು ಹರಡಿವೆ.
ಮಲ್ಲಮ್ಮ ಅವರ ಕುಟುಂಬದವರೊಂದಿಗೆ ಮಾತನಾಡುವ ಅವಕಾಶವನ್ನು ಬಿಗ್ ಬಾಸ್, ರಘು ಅವರಿಗೆ ನೀಡಿತ್ತು. ಮಲ್ಲಮ್ಮ ಕೆಲಸ ಮಾಡುವ ಬೋಟಿಕ್‌ನ ಮಾಲೀಕರಾದ ಪಲ್ಲವಿ, ರಘು ಜೊತೆಗೆ ಮಾತನಾಡಿ, “ಮಲ್ಲಮ್ಮ ಚೆನ್ನಾಗಿ ಆಡುತ್ತಿದ್ದಾರೆ, ಮುಂದೆಯೂ ಆಡುತ್ತಾರೆ” ಎಂದು ಧೈರ್ಯ ತುಂಬಿದ್ದಾರೆ. ಮಲ್ಲಮ್ಮ ಅವರ ಇನ್‌ಸ್ಟಾಗ್ರಾಮ್ ಪೇಜ್ ನಿರ್ವಹಿಸುತ್ತಿರುವ ಪಲ್ಲವಿ ಮತ್ತು ಮನೋಜ್, “ಮಲ್ಲಮ್ಮ ಎಲಿಮಿನೇಟ್ ಆಗಿಲ್ಲ, ವೋಟ್ ಮಾಡಿ” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ವೀಕ್ಷಕರು ಮಲ್ಲಮ್ಮಗೆ ವೋಟ್ ಮಾಡಿ ಗೆಲ್ಲಿಸಬೇಕೆಂದು ಕೋರಿದ್ದಾರೆ.
ಮಲ್ಲಮ್ಮ ವೈಯಕ್ತಿಕ ಕಾರಣಗಳಿಂದ ಬಿಗ್ ಬಾಸ್ ತೊರೆದಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಆದರೆ, ಕಲರ್ಸ್ ಕನ್ನಡ ಚಾನೆಲ್ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮಲ್ಲಮ್ಮ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, “ಮಲ್ಲಮ್ಮ ಚೆನ್ನಾಗಿ ಆಡುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ” ಎಂದು ಸ್ಪಷ್ಟಪಡಿಸಲಾಗಿದೆ.
