ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದ ಮನೆಗೆ ಬೀಗ ಹಾಕಿದ್ದು ಏಕಾಏಕಿ ಕ್ರಮವಲ್ಲ, ಬದಲಿಗೆ ತಿಂಗಳುಗಳ ಸುದೀರ್ಘ ನೋಟೀಸುಗಳು ಮತ್ತು ಕಾನೂನು ಪ್ರಕ್ರಿಯೆಯ ಅಂತಿಮ ಫಲಿತಾಂಶವೆಂದು ತಿಳಿದುಬಂದಿದೆ. ವಿವಿಧ ಸರ್ಕಾರಿ ಇಲಾಖೆಗಳು 2024ರ ಮಾರ್ಚ್ ತಿಂಗಳಿನಿಂದಲೇ ಸತತವಾಗಿ ನೋಟೀಸುಗಳನ್ನು ನೀಡಿ ಶೋದ ನಿರ್ವಹಣೆಯ ಬಗ್ಗೆ ವಿಚಾರಣೆ ನಡೆಸಿದ್ದವು.
ರಾಮನಗರ ಕಂದಾಯ ಅಧಿಕಾರಿಗಳು 2024ರ ಮಾರ್ಚ್ ಮತ್ತು ಜೂನ್ ತಿಂಗಳುಗಳಲ್ಲಿ ಎರಡು ಬಾರಿ ಪರಿಶೀಲನೆ ನೋಟೀಸ್ ನೀಡಿದ್ದರು. ಇದೇ ರೀತಿ 2024ರ ಏಪ್ರಿಲ್‌ನಲ್ಲಿ ಇತರ ಅಧಿಕಾರಿಗಳು ಕಾರಣ ಕೇಳಿ ನೋಟೀಸ್ ನೀಡಿದ್ದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ವರ್ಷ ಮಾರ್ಚ್‌ನಿದಲೇ ನೋಟೀಸ್ ಮೇಲೆ ನೋಟೀಸ್ ನೀಡಿತ್ತು. ಈ ಎಲ್ಲಾ ನೋಟೀಸುಗಳು ಬಿಗ್ ಬಾಸ್ ಶೋ ನಿರ್ವಹಣೆ, ತೆರಿಗೆ ಮತ್ತು ಪರಿಸರ ಸಂಬಂಧಿತ ವಿಚಾರಗಳ ಬಗ್ಗೆ ವಿಚಾರಣೆ ನಡೆಸಿದ್ದವು.
ಅಂತಿಮವಾಗಿ ಸೆಪ್ಟೆಂಬರ್ 16 ರಂದು ನಡೆದ ರಾಜ್ಯ ಮಟ್ಟದ ಪರಿಸರ ಸಮಿತಿ (SLEC) ಸಭೆಯಲ್ಲಿ ಬಿಗ್ ಬಾಸ್ ಮನೆಗೆ ಬೀಗ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ಸಭೆಯ ನಂತರ ಜಾಲಿವುಡ್ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿತು.
ಪ್ರಸ್ತುತ, ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಕೆಲವೇ ಕ್ಷಣಗಳಲ್ಲಿ ಹೊರಬರಲಿದ್ದಾರೆ. ಎಲ್ಲಾ ಸ್ಪರ್ಧಿಗಳು ತಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಸಜ್ಜಾಗಿದ್ದಾರೆ ಮತ್ತು ಲಿವಿಂಗ್ ಏರಿಯಾದಲ್ಲೇ ಕಾಯುತ್ತಿದ್ದಾರೆ. ಸ್ಪರ್ಧಿಗಳನ್ನು ಬ್ಯಾಕ್ ಡೋರ್ ಮೂಲಕ ಹೊರಗೆ ಕರೆದೊಯ್ಯಲು ಸಿದ್ಧತೆ ನಡೆದಿದೆ. ಸ್ಪರ್ಧಿಗಳನ್ನು ಕರೆದೊಯ್ಯಲು ಹೊರಗಡೆ 13 ಕಾರುಗಳು ಸಜ್ಜಾಗಿ ನಿಂತಿವೆ.
ಬಿಗ್ ಬಾಸ್ ಶೋ ಮುಚ್ಚುವಿಕೆಯು ಕೇವಲ ಮನೋರಂಜನಾ ಉದ್ಯಮ ಮಾತ್ರವಲ್ಲದೇ, ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಸುದೀರ್ಘ ಪರಿಣಾಮ ಬೀರಲಿದೆ. ಈ ಶೋ ಕರ್ನಾಟಕದ ಮನೋರಂಜನಾ ಉದ್ಯಮದ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾಗಿತ್ತು ಮತ್ತು ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಿತ್ತು.