ಬೆಂಗಳೂರು: ಇಡೀ ವಾರ ಕುಟುಂಬ ಸದಸ್ಯರ ಭೇಟಿಯ ಸಂಭ್ರಮದಲ್ಲಿದ್ದ ಮನೆಯವರಿಗೆ ಬಿಗ್ ಬಾಸ್ ಒಂದು ಮಹತ್ವದ ಜವಾಬ್ದಾರಿ ನೀಡಿದ್ದರು. ಅದುವೇ ಮನೆಯ ನೂತನ ಕ್ಯಾಪ್ಟನ್ ಆಯ್ಕೆ. ಈ ಬಾರಿ ಮನೆಯ ಸದಸ್ಯರ ಬದಲಾಗಿ, ಮನೆಗೆ ಅತಿಥಿಗಳಾಗಿ ಬಂದಿದ್ದ ಕುಟುಂಬದ ಸದಸ್ಯರೇ ವೋಟಿಂಗ್ ಮೂಲಕ ಕ್ಯಾಪ್ಟನ್ ಅಭ್ಯರ್ಥಿಗಳನ್ನು ಆರಿಸಿದ್ದು ವಿಶೇಷವಾಗಿತ್ತು.
ಕುಟುಂಬ ಸದಸ್ಯರ ಮತದಾನದ ಆಧಾರದ ಮೇಲೆ ಅಂತಿಮವಾಗಿ ಗಿಲ್ಲಿ ಮತ್ತು ಅಶ್ವಿನಿ ಅವರು ಕ್ಯಾಪ್ಟೆನ್ಸಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಇಬ್ಬರ ನಡುವೆ ನಡೆದ ಅಂತಿಮ ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ ಗಿಲ್ಲಿ ಅವರು ಅಸಾಧಾರಣ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೀಸನ್‌ನ ಆರಂಭದಿಂದಲೂ ‘ಕೆಲಸ ಮಾಡದ ಸ್ಪರ್ಧಿ’ ಎಂದು ಹಣೆಪಟ್ಟಿ ಹಚ್ಚಿಸಿಕೊಂಡಿದ್ದ ಗಿಲ್ಲಿ, ಮೊದಲ ಬಾರಿಗೆ ಮನೆಯ ಅಧಿಕಾರ ಹಿಡಿದಿದ್ದಾರೆ.
ಗಿಲ್ಲಿ ಕ್ಯಾಪ್ಟನ್ ಆಗಿರುವುದು ಮನೆಯಲ್ಲಿ ಎರಡು ರೀತಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಈ ಹಿಂದೆ ರಘು ಮತ್ತು ರಾಶಿಕಾ ಕ್ಯಾಪ್ಟನ್ ಆಗಿದ್ದಾಗ ಗಿಲ್ಲಿಯಿಂದ ಕೆಲಸ ಮಾಡಿಸಲು ಹರಸಾಹಸ ಪಡುತ್ತಿದ್ದರು. ಈಗ ಗಿಲ್ಲಿಯೇ ಕ್ಯಾಪ್ಟನ್ ಆಗಿರುವುದರಿಂದ ಇತರ ಸ್ಪರ್ಧಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅತ್ತ ರಘು ಮತ್ತು ಸೂರಜ್, ಗಿಲ್ಲಿ ಎಂದಿಗೂ ಟಾಸ್ಕ್ ಆಡಿ ಗೆಲ್ಲುವವನಲ್ಲ, ಬಿಗ್ ಬಾಸ್ ಅವರ ಮೇಲಿನ ಅನುಕಂಪಕ್ಕೆ ಈ ಅವಕಾಶ ನೀಡಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಗಿಲ್ಲಿ ಅವರ ಸಂಭ್ರಮಕ್ಕೆ ಒಂದು ಸಣ್ಣ ಹಿನ್ನಡೆಯೂ ಉಂಟಾಗಿದೆ. ಪ್ರತಿ ವಾರ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಹೊಸ ಕ್ಯಾಪ್ಟನ್ ಅನ್ನು ವೇದಿಕೆಯ ಮೇಲೆ ಅಭಿನಂದಿಸುವುದು ವಾಡಿಕೆ. ಆದರೆ, ಈ ವಾರ ವೈಯಕ್ತಿಕ ಕಾರಣಗಳಿಂದಾಗಿ ಸುದೀಪ್ ಅವರು ಬಿಗ್ ಬಾಸ್‌ಗೆ ಗೈರಾಗಿದ್ದಾರೆ. ಇದರಿಂದಾಗಿ ಕಿಚ್ಚನ ಮುಂದೆ ಕ್ಯಾಪ್ಟನ್ ಬ್ಯಾಡ್ಜ್ ಧರಿಸಿ ಸಂಭ್ರಮಿಸುವ ಅವಕಾಶವನ್ನು ಗಿಲ್ಲಿ ಕಳೆದುಕೊಂಡಿದ್ದಾರೆ.
ಹೇಗಿರಲಿದೆ ಮುಂದಿನ ಆಟ ?
ಯಾವಾಗಲೂ ಆರಾಮವಾಗಿರುತ್ತಿದ್ದ ಗಿಲ್ಲಿ, ಈಗ ಇಡೀ ಮನೆಯ ಜವಾಬ್ದಾರಿ ಹೊತ್ತಿದ್ದಾರೆ. ಅಡುಗೆ ಮನೆ, ಸ್ವಚ್ಛತೆ ಮತ್ತು ರೂಲ್ಸ್ ಬ್ರೇಕ್ ಮಾಡುವ ಸದಸ್ಯರನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಗಿಲ್ಲಿ ಕ್ಯಾಪ್ಟನ್ ಆಗಿದ್ದು, ಬಿಗ್ ಬಾಸ್ ಮನೆ ಇನ್ನು ಮುಂದೆ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
