ಕಿಚ್ಚನ ಒಂದೇ ಒಂದು ಫೋನ್ ಕಾಲ್‌ಗೆ ಡಿಸಿಎಂ ಸ್ಪಂದಿಸಿದ್ದಾರೆ. ಬಿಗ್ ಮನೆಯ ಲಾಕ್ ಕೂಡ ಅನ್‌ಲಾಕ್ ಆಗಿದೆ. ಆದಾಗ್ಯೂ ಕೂಡ ಡಿಸಿಎಂ ಡಿಕೆಶಿ ಮೇಲೆ ಸಾಕಷ್ಟು ಅಪವಾದಗಳು ಕೇಳಿಬರ್ತಿವೆ. ಇದನ್ನ ಕಂಡು ಮತ್ತೇನು ಮಾಡ್ಬೇಕು ಶಿವಾ ಅನ್ನುವಂತಾಗಿದೆ ಈ ಬಿಗ್ ಬಾಸ್ ಮನೆಯ ಬಿಗ್ ರಾದ್ಧಾಂತ. ಎರಡು ದಿನಗಳ ಹೈಡ್ರಾಮಾ.. ಸಿನಿಮಾ, ಪಾಲಿಟಿಕ್ಸ್ & ಕಿಚ್ಚನ ಕಂಪ್ಲೀಟ್ ಬಿಗ್ ಕಹಾನಿ ಇಲ್ಲಿದೆ ನೋಡಿ.
ಬಿಗ್‌ಬಾಸ್ ಆಟ ಶುರುವಾದ ಹತ್ತೇ ದಿನಕ್ಕೆ ಅವ್ರ ವ್ಯಕ್ತಿತ್ವಗಳ ಆಟಕ್ಕೆ ಬ್ರೇಕ್ ಹಾಕಿತ್ತು ಸರ್ಕಾರ. ಹೌದು.. ಈ ಬಾರಿಯ ಸೀಸನ್-12ರ ಬಿಗ್ ಮನೆ ಇದ್ದ ಜಾಲಿವುಡ್‌ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಬೀಗ ಹಾಕಿತ್ತು. ಅದು ರಾಜಕೀಯ ರೂಪ ಕೂಡ ಪಡೆಯಿತು. ಇದಕ್ಕೆಲ್ಲಾ ಡಿಸಿಎಂ ಡಿಕೆಶಿನೇ ಕಾರಣ ಅನ್ನೋ ಅಲೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿತ್ತು. ಅದಕ್ಕೆ ಖುದ್ದು ಡಿಸಿಎಂ ಡಿಕೆಶಿ ಅವರೇ ಸ್ಪಷ್ಟನೆ ಕೂಡ ನೀಡಿದ್ರು
ಬಿಗ್ ಮನೆ ಲಾಕ್ ಆದ್ರೂ ಕಷ್ಟ.. ಅನ್‌ಲಾಕ್ ಆಗಿದ್ರೂ ಕಷ್ಟ..!
DCM ಮೇಲೆ ಕನ್ನಡಪರ ಹೋರಾಟಗಾರರ ಆಕ್ರೋಶ ಏಕೆ..?
ಮನರಂಜನಾ ಕ್ಷೇತ್ರ ಹೀಗೆ ಸಂಕಷ್ಟ ಎದುರಿಸುತ್ತಿರೋದನ್ನ ಕಂಡು, ತಮ್ಮ ಮೇಲೆ ಬಂದಂತಹ ಅಪವಾದಗಳಿಗೆ ತಕ್ಕ ಉತ್ತರ ನೀಡಲು ಸ್ವತಃ ಡಿಕೆಶಿ ಅವರೇ ಟ್ವೀಟ್ ಮೂಲಕ ಜಾಲಿವುಡ್‌ಗೆ ಹಾಕಿರೋ ಸೀಲ್‌ಡೌನ್‌ನ ತೆರವುಗೊಳಿಸಿ, ಬಿಗ್‌ಬಾಸ್ ಶೂಟಿಂಗ್‌ಗೆ ಅನುವು ಮಾಡಿಕೊಡಿ. ಆದ್ರೆ ಜಾಲಿವುಡ್ ಮಾಲೀಕರು ಮಾಡಿರೋ ತಪ್ಪುಗಳನ್ನ ತಿದ್ದಿಕೊಳ್ಳಲು ಕಾಲಾವಕಾಶ ಮಾಡಿಕೊಡಿ ಎಂದರು. ಅದಕ್ಕೆ ಕಿಚ್ಚ ಸುದೀಪ್ ಕೂಡ ಕೂಡಲೇ ಪ್ರತಿಕ್ರಿಯಿಸಿ ಟ್ವೀಟ್ ಮಾಡಿ, ಡಿಸಿಎಂ ಡಿಕೆಶಿಗೆ ಧನ್ಯವಾದ ತಿಳಿಸಿದ್ರು.
ಕಿಚ್ಚನ ಒಂದೇ ಒಂದು ಫೋನ್ ಕಾಲ್‌ಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಂದಿಸಿರೋದು ನಿಜಕ್ಕೂ ಖುಷಿಯ ವಿಚಾರ. ಆದ್ರೆ ಅಸಲಿಗೆ ಸರ್ಕಾರ ಹಾಗೂ ಬಿಗ್‌ಬಾಸ್ ಸುದೀಪ್ ನಡುವೆ ಸಂಧಾನಕ್ಕೆ ಸೇತುವೆ ಆಗಿದ್ದು ಮಾತ್ರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್. ಹೌದು.. ಬಿಗ್‌ಬಾಸ್‌ಗೆ ಹಿಡಿದಿದ್ದ ಗ್ರಹಣವನ್ನ ಬಿಡಿಸೋಕೆ ಕಿಚ್ಚನಿಗೆ ಸಾಥ್ ನೀಡಿರೋದು ನಲಪಾಡ್. ಹಾಗಾಗಿ ಬಾದ್‌ಷಾ ಸುದೀಪ್ ನಲಪಾಡ್‌ಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿ ಟ್ವೀಟ್ ಮಾಡಿದ್ದಾರೆ. ಇತ್ತ ಬಿಗ್‌ಬಾಸ್ ಟೀಂನಿಂದ ಹೊಚ್ಚ ಹೊಸ ಪ್ರೋಮೋ ಕೂಡ ರಿವೀಲ್ ಆಗಿ, ಲೈಟ್ಸ್ ಆನ್ ಆಗಿ, ಬಿಗ್ ಮನೆಯ ಬಿಗ್ ದ್ವಾರವೂ ಓಪನ್ ಆಗಿತ್ತು. ರಾತ್ರೋ ರಾತ್ರಿ ಕಂಟೆಸ್ಟೆಂಟ್‌ಗಳನ್ನ ಶಿಫ್ಟ್ ಕೂಡ ಮಾಡಲಾಗಿದೆ.
ಕಿಚ್ಚನ ಒಂದು ಫೋನ್ ಕಾಲ್.. 2 ದಿನದ ಹೈಡ್ರಾಮಾಗೆ ಬ್ರೇಕ್
ಬಿಗ್‌ಬಾಸ್ ಸುದೀಪ್ & ಡಿಕೆಶಿಗೆ ಸೇತುವೆಯಾದ ನಲಪಾಡ್
ಎರಡು ದಿನಗಳ ಈ ಹೈಡ್ರಾಮಾಗೆ ಬ್ರೇಕ್ ಬಿತ್ತು ಅಂತ ಖುಷಿ ಪಡಬೇಕೋ ಅಥ್ವಾ ಅದು ಮತ್ತೊಂದು ರೂಪ ಪಡೆದಿರೋದಕ್ಕೆ ಅಚ್ಚರಿ ಪಡಬೇಕೋ ಗೊತ್ತಾಗ್ತಿಲ್ಲ. ಯೆಸ್.. ನಟ್ಟು ಬೋಲ್ಟ್ ಸ್ಟಾರ್ ಅಂತ ಜೆಡಿಎಸ್ ಪಕ್ಷ ಡಿಸಿಎಂರನ್ನ ಅಪಹಾಸ್ಯ ಮಾಡಿತ್ತು. ಈಗ ನಟ್ಟು ಬೋಲ್ಟ್‌ನ ಸಡಿಲಗೊಳಿಸಿದ್ರೂ ಕೂಡ ಕನ್ನಡಪರ ಹೋರಾಟಗಾರರು ಮಾತ್ರ ಡಿಕೆಶಿ ವಿರುದ್ಧ ಕಿಡಿಕಾರುತ್ತಿದ್ದಾರೆ. ರಾತ್ರೋರಾತ್ರಿ ಡಿಸಿನ ಕರೆಸಿ ಅನ್‌ಲಾಕ್ ಮಾಡಿಸೋ ಅಂತಹ ತುರ್ತು ಪರಿಸ್ಥಿತಿ ಆದ್ರೂ ಏನಿತ್ತು ಅಂತ ಪ್ರತಿಭಟಿಸ್ತಿದ್ದಾರೆ.
ನಟ್ಟು ಬೋಲ್ಟು ಟೈಟ್ ಮಾಡಿದ್ರೂ ಕಷ್ಟ.. ಸಡಿಲ ಮಾಡಿದ್ರೂ ಕಷ್ಟ.. ಮತ್ತೇನು ಮಾಡ್ಬೇಕು ಶಿವಾ ಅಂತ ಜನ ಗೊಣಗಿಕೊಳ್ಳುವಂತಾಗಿದೆ. ಅದೇನೇ ಇರಲಿ ಕಲಾವಿದರ ಕನಸುಗಳು, ಕಾರ್ಮಿಕರ ಶ್ರಮ, ಕೋಟ್ಯಂತರ ಬಂಡವಾಳ ಹಾಕಿರೋ ಕಲರ್ಸ್ ಕನ್ನಡ ಹಾಗೂ ಎಂಡಮಾಲ್ ಸಂಸ್ಥೆಗಳು ಡಿಕೆಶಿ ಸ್ಪಂದನೆಗೆ ದಿಲ್‌ಖುಷ್ ಆಗಿದ್ದಾರೆ. ಆದ್ರೆ ಕಾನೂನಿನಾತ್ಮಕವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಜಾಲಿವುಡ್ ಸ್ಟುಡಿಯೋಸ್ ಎದುರಿಸುತ್ತಿರೋ ಸಮಸ್ಯೆಯನ್ನ ಆದಷ್ಟು ಬೇಗ ಬಗೆಹರಿಸಿಕೊಳ್ಳಬೇಕಿದೆ. ದಂಡ ಕಟ್ಟಿ ಆ ವಿವಾದಕ್ಕೆ ಪಿಂಡ ಇಡುವ ತುರ್ತು ಅವಶ್ಯವಿದೆ.
