ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಶೋ ಸ್ಪರ್ಧಿಯಾದ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ನಡೆದ ವಾಗ್ವಾದಲ್ಲಿ ಅಶ್ವಿನಿ, ರಕ್ಷಿತಾ ಶೆಟ್ಟಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂದು ಆರೋಪಗಳು ಕೇಳಿಬಂದಿತ್ತು.ಈಗ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಅಶ್ವಿನಿ ಗೌಡ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ದೂರನ್ನು ಹಿರಿಯ ವಕೀಲರಾದ ಪ್ರಶಾಂತ್ ಮೆತಲ್ ಅವರು ದಾಖಲಿಸಿದ್ದಾರೆ. ದೂರಿನಲ್ಲಿ ಅಶ್ವಿನಿ ಗೌಡರ ಮೇಲೆ ಜಾತಿ ನಿಂದನೆ ಮತ್ತು ವ್ಯಕ್ತಿ ನಿಂದನೆ ಮಾಡಿದ ಆರೋಪವನ್ನು ಉಲ್ಲೇಖಿಸಲಾಗಿದೆ. ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ನಡೆದ ತೀವ್ರ ವಾಗ್ವಾದದ ಸಮಯದಲ್ಲಿ, ಅಶ್ವಿನಿ ಗೌಡರು ರಕ್ಷಿತಾ ಶೆಟ್ಟಿ ಅವರನ್ನು ಕುರಿತು ‘ಎಸ್’ ಕ್ಯಾಟೆಗರಿ ಎಂಬ ಆಕ್ಷೇಪಾರ್ಹ ಪದಬಳಕೆ ಮಾಡಿದ್ದರು.
ರಕ್ಷಿತಾ ಶೆಟ್ಟಿ ಅವರನ್ನು ಉದ್ದೇಶಪೂರ್ವಕವಾಗಿ ನಿಂದಿಸುವ ಉದ್ದೇಶದಿಂದ ಈ ಪದವನ್ನು ಬಳಸಲಾಗಿದೆ ಎಂಬುದು ದೂರಿನ ಮುಖ್ಯ ಆರೋಪವಾಗಿದೆ.
ಈ ದೂರಿನಲ್ಲಿ, ಘಟನೆಯನ್ನು ಪ್ರಸಾರ ಮಾಡಿದ ಕಲರ್ಸ್ ಕನ್ನಡ ಚಾನಲ್ ವಿರುದ್ಧವೂ ಕಾನೂನು ನಡೆಗೆ ತೆಗೆದುಕೊಳ್ಳಲಾಗಿದೆ. ದೂರಿನಲ್ಲಿ ಚಾನಲ್ನ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಡೈರೆಕ್ಟರ್ ಪ್ರಕಾಶ್ ಅವರನ್ನು ಸೇರಿಸಿಕೊಳ್ಳಲಾಗಿದೆ. ವಾದ-ವಿವಾದಗಳನ್ನು ಉದ್ದೇಶಪೂರ್ವಕವಾಗಿ ಪ್ರಸಾರ ಮಾಡಿ ಟಿಆರ್ಪಿ (ಟೆಲಿವಿಷನ್ ರೇಟಿಂಗ್ಸ್ ಪಾಯಿಂಟ್) ಗಳಿಸಲು ಚಾನಲ್ ನಿರ್ವಹಣೆ ಶೋ ವಿವಾದಗಳನ್ನು ಪ್ರೋತ್ಸಾಹಿಸುತ್ತದೆ ಎಂಬುದೂ ದೂರಿನಲ್ಲಿ ಆರೋಪಿಸಿಲಾಗಿದೆ.
ಈ ದೂರು ಬಂದ ಹಿನ್ನೆಲೆಯಲ್ಲಿ, ಬಿಗ್ ಬಾಸ್ ಶೋ ನಡೆದುಕೊಂಡು ಬಂದ ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಗೆ ಈಗಾಗಲೇ ಸ್ಥಳೀಯ ಅಧಿಕಾರಿಗಳು ಬೀಗ ಹಾಕಿದ್ದರು. ನಿರ್ಮಾಣ ಕಾರ್ಯಗಳಿಗೆ ಸಂಬಂಧಿಸಿದ ಕೆಲವು ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿತ್ತು. ಬಿಗ್ ಬಾಸ್ ನೇರ ಪ್ರಸಾರಕ್ಕೆ ಈ ಕ್ರಮವು ಅಡ್ಡಿಯುಂಟುಮಾಡುತ್ತದೆಯೇ ಎಂಬ ಚರ್ಚೆಯೂ ಆ ಸಮಯದಲ್ಲಿ ಸಕ್ರಿಯವಾಗಿತ್ತು. ಆದರೆ, ನಂತರ ಸ್ಟುಡಿಯೋ ಬೀಗವನ್ನು ತೆಗೆದು ಹಾಕಲಾಗಿತ್ತು.