ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಸಾಕಷ್ಟು ಕುತೂಹಲ ಮೂಡಿಸಿದೆ. ಮನೆಯಲ್ಲಿದ್ದ ಸ್ಪರ್ಧಿಗಳ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ ಈ ಎಲಿಮಿನೇಷನ್‌ನಲ್ಲಿ ಕಾಮನ್ ಮ್ಯಾನ್ ಕೆಟಗರಿಯಲ್ಲಿ ‘ಅಗ್ನಿಪರೀಕ್ಷೆ’ ಮೂಲಕ ಸವಾಲುಗಳನ್ನು ಗೆದ್ದು ದೊಡ್ಮನೆ ಪ್ರವೇಶಿಸಿದ್ದ ಲಿಖಿತ್ ಗೋಂದಿ ತಮ್ಮ ‘ಬಿಗ್ ಬಾಸ್’ ಪಯಣವನ್ನು ಮುಗಿಸಿದ್ದಾರೆ.
ದೊಡ್ಮನೆಯಲ್ಲಿ ತಮ್ಮದೇ ಶೈಲಿಯ ಆಟ, ಚೇಷ್ಟೆ ಹಾಗೂ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದ ಲಿಖಿತ್, ಹಲವು ಸಂದರ್ಭಗಳಲ್ಲಿ ಮನೆಮಂದಿಗೆ ಮನರಂಜನೆ ನೀಡಿದ್ದರು. ಆದರೆ ಈ ವಾರದ ಎಲಿಮಿನೇಷನ್‌ನಲ್ಲಿ ಪ್ರೇಕ್ಷಕರ ವೋಟಿಂಗ್ ಆಧಾರದ ಮೇಲೆ ಲಿಖಿತ್ ಮನೆ ತೊರೆಯಬೇಕಾಯಿತು. ಇದರೊಂದಿಗೆ ‘ಬಿಗ್ ಬಾಸ್ ಕನ್ನಡ 13’ರಲ್ಲಿ ಅವರ ಪಯಣ ಅಂತ್ಯಗೊಂಡಿದೆ.
ಲಿಖಿತ್‌ಗೆ ಸಿಕ್ಕಿದ್ದು ಎಷ್ಟು ಹಣ?
‘ಬಿಗ್ ಬಾಸ್’ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಲಿಖಿತ್ ಗೋಂದಿಗೆ ಕಾರ್ಯಕ್ರಮದ ಸ್ಪಾನ್ಸರ್‌ಗಳ ಕಡೆಯಿಂದ ₹3.50 ಲಕ್ಷ ನಗದು ಬಹುಮಾನದ ಚೆಕ್ ನೀಡಲಾಗಿದೆ.
ಎಲಿಮಿನೇಷನ್ ಬಳಿಕ ವೇದಿಕೆಗೆ ಆಗಮಿಸಿದ ಲಿಖಿತ್ ಅವರಿಗೆ ಈ ಬಹುಮಾನ ನೀಡಲಾಗಿದ್ದು, ದೊಡ್ಮನೆಯಲ್ಲಿ ಅವರ ಆಟ ಹಾಗೂ ಪಯಣಕ್ಕೆ ಇದು ವಿಶೇಷ ಕ್ಷಣವಾಗಿತ್ತು. ‘ಬಿಗ್ ಬಾಸ್’ ಮನೆಗೆ ಸಾಮಾನ್ಯ ಸ್ಪರ್ಧಿಯಾಗಿ ಪ್ರವೇಶಿಸಿ ಇಷ್ಟು ದೂರದವರೆಗೆ ಬಂದಿರುವ ಲಿಖಿತ್, ಇದೀಗ ನಗದು ಬಹುಮಾನದೊಂದಿಗೆ ಹೊರಬಂದಿದ್ದಾರೆ.
ಜರ್ನಿ ವಿಡಿಯೋ ನೋಡಿ ಭಾವುಕರಾದ ಲಿಖಿತ್
ಎಲಿಮಿನೇಷನ್ ಬಳಿಕ ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರೊಂದಿಗೆ ನಿಂತಿದ್ದ ಲಿಖಿತ್ ಅವರಿಗೆ ಅವರ ‘ಬಿಗ್ ಬಾಸ್’ ಪಯಣದ ಪ್ರಮುಖ ಕ್ಷಣಗಳನ್ನು ಒಳಗೊಂಡ ಜರ್ನಿಯ ವಿಡಿಯೋ ಪ್ರದರ್ಶಿಸಲಾಯಿತು.
ದೊಡ್ಮನೆಯಲ್ಲಿ ಕಳೆದ ದಿನಗಳು, ಗೆಳೆಯರೊಂದಿಗಿನ ಬಾಂಧವ್ಯ, ಮನೆಯಲ್ಲಿನ ಚೇಷ್ಟೆಗಳು ಹಾಗೂ ಸವಿನೆನಪುಗಳು ವಿಡಿಯೋದಲ್ಲಿ ಮೂಡಿಬಂದವು. ತಮ್ಮ ಬಿಗ್ ಬಾಸ್ ದಿನಗಳನ್ನು ಮತ್ತೊಮ್ಮೆ ಪರದೆಯ ಮೇಲೆ ನೋಡಿದ ಲಿಖಿತ್ ಭಾವುಕರಾದರು. ನೆನಪುಗಳ ಭಾರದಿಂದ ವೇದಿಕೆಯಲ್ಲೇ ಕಣ್ಣೀರಿಟ್ಟರು.
ಲಿಖಿತ್ ಭಾವುಕರಾಗಿರುವುದನ್ನು ಕಂಡ ಕಿಚ್ಚ ಸುದೀಪ್ ಕೂಡ ತಕ್ಷಣ ಅವರ ಬಳಿಗೆ ತೆರಳಿ ಸಾಂತ್ವನ ಹೇಳಿದರು. ಲಿಖಿತ್ ಅವರ ಕಣ್ಣೀರು ಒರೆಸಿ, ಬೆನ್ನತಟ್ಟಿ ಧೈರ್ಯ ತುಂಬಿದರು.
ಯಶಸ್ ಸೇಫ್, ಎಲಿಮಿನೇಷನ್‌ನಲ್ಲಿ ಟ್ವಿಸ್ಟ್
ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಬಹುತೇಕ ಸ್ಪರ್ಧಿಗಳು ಯಶಸ್ ಹೊರಹೋಗಬಹುದು ಎಂದು ಅಂದಾಜಿಸಿದ್ದರು. ಆದರೆ ಪ್ರೇಕ್ಷಕರ ವೋಟಿಂಗ್‌ನಲ್ಲಿ ಯಶಸ್ ಮೊದಲಿಗರಾಗಿ ಸೇಫ್ ಆಗುವ ಮೂಲಕ ಮನೆಮಂದಿಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು.
ನಂತರ ಡೇಂಜರ್ ಝೋನ್‌ನಲ್ಲಿದ್ದ ಸ್ಪರ್ಧಿಗಳ ಪೈಕಿ ಮಂಜ ಹಾಗೂ ಧನುಷ್ ಅವರನ್ನು ಕಿಚ್ಚ ಸುದೀಪ್ ಒಬ್ಬೊಬ್ಬರಾಗಿ ಸೇಫ್ ಮಾಡಿದರು. ಅಂತಿಮ ಹಂತದಲ್ಲಿ ಸಂಗೀತಾ, ಕಿರಣ್ ಶಾಸ್ತ್ರಿ ಮತ್ತು ಲಿಖಿತ್ ಮಾತ್ರ ಉಳಿದುಕೊಂಡಿದ್ದರು.
ಈ ಸಂದರ್ಭದಲ್ಲಿ ‘ಬಿಗ್ ಬಾಸ್’ ಮನೆಯೊಳಗೆ ಕಮಾಂಡೋಸ್ ಎಂಟ್ರಿ ಪಡೆದು ಮೂವರನ್ನೂ ಹೊರಗೆ ಕರೆದುಕೊಂಡು ಹೋದರು.
ಮತ್ತೆ ಮನೆಗೆ ಹೋದ ಸಂಗೀತಾ, ಕಿರಣ್; ಲಿಖಿತ್‌ಗೆ ವಿದಾಯ
ಕಮಾಂಡೋಸ್ ಹೊರಗೆ ಕರೆದುಕೊಂಡು ಹೋದ ಬಳಿಕ ಸಸ್ಪೆನ್ಸ್ ಮತ್ತಷ್ಟು ಹೆಚ್ಚಿಸಲಾಯಿತು. ಹೊರಗೆ ತೆರಳಿದ್ದ ಸಂಗೀತಾ ಹಾಗೂ ಕಿರಣ್ ಶಾಸ್ತ್ರಿ ಮತ್ತೆ ದೊಡ್ಮನೆಗೆ ವಾಪಸ್ಸಾದರು. ಆದರೆ ಲಿಖಿತ್ ಮಾತ್ರ ಬಿಗ್ ಬಾಸ್ ಮನೆಗೆ ಮರಳಲಿಲ್ಲ.
ಅವರು ನೇರವಾಗಿ ಕಿಚ್ಚ ಸುದೀಪ್ ಅವರಿರುವ ವೇದಿಕೆಗೆ ಆಗಮಿಸುವ ಮೂಲಕ ಈ ವಾರದ ಎಲಿಮಿನೇಷನ್‌ನ ಅಂತಿಮ ಫಲಿತಾಂಶ ಬಹಿರಂಗವಾಯಿತು. ಈ ಮೂಲಕ ಲಿಖಿತ್ ಗೋಂದಿ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಪಯಣಕ್ಕೆ ವಿದಾಯ ಹೇಳಿದ್ದಾರೆ.
‘ಅಗ್ನಿಪರೀಕ್ಷೆ’ ಮೂಲಕ ದೊಡ್ಮನೆ ಪ್ರವೇಶಿಸಿದ್ದ ಲಿಖಿತ್ ಅವರ ಪ್ರಯಾಣ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ₹3.50 ಲಕ್ಷ ನಗದು ಬಹುಮಾನದೊಂದಿಗೆ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
