ಬಿಗ್ ಬಾಸ್ ಮನೆಯಲ್ಲಿ ಪಂಚಿಂಗ್ ಪವರ್: ರಕ್ಷಿತಾ ಶೆಟ್ಟಿ ಅಬ್ಬರಕ್ಕೆ ನಕ್ಕು ಸುಸ್ತಾದ ಧ್ರುವಂತ್‌

Untitled design 2026 01 04T192127.664

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ‘ಸೂಪರ್ ಸಂಡೇ ವಿಥ್ ಬಾದ್‌ಷಾ’ ಸಂಚಿಕೆಯು ಈ ಬಾರಿ ಕೇವಲ ಮನರಂಜನೆಯಷ್ಟೇ ಅಲ್ಲದೆ, ಸ್ಪರ್ಧಿಗಳ ನಡುವಿನ ದ್ವೇಷ ಮತ್ತು ಅಸಮಾಧಾನದ ಸ್ಫೋಟಕ್ಕೂ ಸಾಕ್ಷಿಯಾಗಿದೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೋ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಸುದೀಪ್ ನೀಡಿದ ಒಂದು ಚಟುವಟಿಕೆ ಮನೆಯೊಳಗೆ ಬೆಂಕಿ ಹಚ್ಚಿದೆ.

ಮುಖಕ್ಕೆ ಹೊಡೆದಂತೆ ಹೇಳುವ ‘ಪಂಚ್’ ಟಾಸ್ಕ್

ವಾರ ಪೂರ್ತಿ ನಡೆದ ಜಗಳ, ಮನಸ್ತಾಪಗಳನ್ನು ಹೊರಹಾಕಲು ಕಿಚ್ಚ ಸುದೀಪ್ ಸದಸ್ಯರಿಗೆ ಭರ್ಜರಿ ಅವಕಾಶ ನೀಡಿದರು. ಮನೆಯೊಳಗೆ ಒಂದು ಪಂಚಿಂಗ್ ಬ್ಯಾಗ್ ಇಡಲಾಗಿತ್ತು. ಅದರ ಮೇಲೆ ತಮಗೆ ಇಷ್ಟವಾಗದ ಸದಸ್ಯರ ಫೋಟೋ ಅಂಟಿಸಿ, ಮನಸ್ಸಿನಲ್ಲಿರುವ ಆಕ್ರೋಶವನ್ನು ನೇರವಾಗಿ ಹೇಳುತ್ತಾ ಪಂಚ್ ಮಾಡಬೇಕೆಂದು ಕಿಚ್ಚ ಆದೇಶಿಸಿದರು.

ಅಶ್ವಿನಿ ಗೌಡ vs ರಾಶಿಕಾ ಶೆಟ್ಟಿ: ಮಾತಿನ ಸಮರ

ಮೊದಲು ಅಖಾಡಕ್ಕಿಳಿದ ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ ಅವರ ಫೋಟೋ ಅಂಟಿಸಿ ಭರ್ಜರಿ ಪಂಚ್ ನೀಡಿದರು. ಇವರು ಬರೀ ಮ್ಯಾನಿಪ್ಯುಲೇಟ್ ಮಾಡುತ್ತಾರೆ, ಎದುರಿರುವ ವ್ಯಕ್ತಿಯನ್ನು ಕೆಟ್ಟದಾಗಿ ಬಿಂಬಿಸುವುದೇ ಇವರ ಕೆಲಸ ಎಂದು ನೇರವಾಗಿಯೇ ಆರೋಪಿಸಿದರು. ಇದಕ್ಕೆ ಸುಮ್ಮನಿರದ ಅಶ್ವಿನಿ ಗೌಡ ಕೂಡ ತಿರುಗೇಟು ನೀಡಿದರು. ತಾನೊಬ್ಬಳೇ ಮಿಸ್ ಯೂನಿವರ್ಸ್ ಅಂದುಕೊಂಡಿರುವ ರಾಶಿಕಾ ಅವರಂತೆ ನಾನು ಹತ್ತು ಟ್ರ್ಯಾಕ್ ಶುರು ಮಾಡಿಕೊಂಡಿಲ್ಲ ಎಂದು ವ್ಯಂಗ್ಯ ಮಾಡಿದರು. ಅಶ್ವಿನಿ ಅವರ ಈ ಖಾರವಾದ ಮಾತು ರಾಶಿಕಾ ಮುಖವನ್ನೇ ಸಪ್ಪೆ ಮಾಡಿತು.

ಇಡೀ ಸಂಚಿಕೆಯ ಹೈಲೈಟ್ ಎಂದರೆ ಅದು ರಕ್ಷಿತಾ ಶೆಟ್ಟಿ ಅವರ ಪಂಚಿಂಗ್ ಶೈಲಿ. ಧ್ರುವಂತ್ ಮೇಲೆ ಕೆಂಡಾಮಂಡಲವಾಗಿದ್ದ ರಕ್ಷಿತಾ, ಅವರ ಫೋಟೋ ಅಂಟಿಸಿ ಅಬ್ಬರಿಸಿದರು. ಒಬ್ಬ ವ್ಯಕ್ತಿಯನ್ನು ಅಸಹ್ಯ ಎಂದು ಕರೆಯಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ಕೂಗುತ್ತಾ ಪಂಚ್ ಮಾಡಲು ಶುರು ಮಾಡಿದರು. ರಕ್ಷಿತಾ ಅವರ ಹೊಡೆತದ ತೀವ್ರತೆಗೆ ಪಂಚಿಂಗ್ ಬ್ಯಾಗ್ ಸ್ಟ್ಯಾಂಡ್‌ನಿಂದ ಕಿತ್ತೇ ಹೋಯಿತು, ಆದರೂ ಸಿಟ್ಟು ತಣಿಯದ ರಕ್ಷಿತಾ, ಕೆಳಗೆ ಬಿದ್ದಿದ್ದ ಬ್ಯಾಗ್ ಮೇಲೆ ಮತ್ತೆ ಪಂಚ್ ಮಾಡುತ್ತಾ ಇವರಿಗೆ ಎಷ್ಟು ಹೊಡೆದರೂ ಸಾಕಾಗಲ್ಲ ಎಂದು ಕಿರಿಚಿದರು. ಇತ್ತ ರಕ್ಷಿತಾ ಅಬ್ಬರಿಸುತ್ತಿದ್ದರೆ, ಧ್ರುವಂತ್ ಮಾತ್ರ ಏನೂ ಆಗದವರಂತೆ ನಗುತ್ತಾ ಕುಳಿತಿದ್ದು ವೀಕ್ಷಕರಿಗೆ ಮತ್ತಷ್ಟು ಮಜಾ ನೀಡಿತು. ಒಟ್ಟಿನಲ್ಲಿ ಈ ವಾರದ ಕಿಚ್ಚನ ಪಂಚಾಯಿತಿ ಮಾತ್ರ ಸಖತ್ ‘ಪಂಚ್’ ನಿಂದ ಕೂಡಿದೆ.

Exit mobile version