Bigg Boss Kannada 12: ರಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾ? ಗೆಳತಿ ಮೇಲೆ ಸೂರಜ್‌ ಗರಂ

Untitled design 2025 12 13T185922.749

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈಗೀಗ ಭಾರೀ ಡ್ರಾಮಾ ನಡೆಯುತ್ತಿದೆ. ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ರಶಿಕಾ ಶೆಟ್ಟಿ ಅವರು ಗೆದ್ದು ಮನೆಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದ್ರೆ ಇದು ಎಲ್ಲರಿಗೂ ಇಷ್ಟವಾಗಿಲ್ಲ ಎಂಬಂತೆ ಕಾಣುತ್ತಿದೆ. ವಿಶೇಷವಾಗಿ ರಶಿಕಾ ಅವರ ಆಪ್ತ ಗೆಳೆಯನಾಗಿದ್ದ ಸೂರಜ್ ಸಿಂಗ್ ಅವರಿಗೆ ಇದು ಇಷ್ಟವಾಗಿಲ್ಲ ಎಂದು ತೋರುತ್ತಿದೆ. ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ಮನೆಯಲ್ಲಿ ಭುಗಿಲೆದ್ದಿದೆ.

ಈ ವಾರ ಬಿಗ್ ಬಾಸ್ ಮನೆಯನ್ನು ‘ವಿಲನ್ ಹೌಸ್’ ಎಂದು ಘೋಷಿಸಲಾಗಿತ್ತು. ವಿಲನ್ ಥೀಮ್‌ನ ಕ್ಯಾಪ್ಟನ್ಸಿ ರೇಸ್‌ಗಾಗಿ ಅತ್ಯಂತ ಕಠಿಣ ಮತ್ತು ಚಾಲೆಂಜಿಂಗ್ ಟಾಸ್ಕ್‌ಗಳನ್ನು ನೀಡಲಾಗಿತ್ತು. ಮೊದಲು ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಅವರು ಡೈರೆಕ್ಟ್ ಎಂಟ್ರಿ ಪಡೆದುಕೊಂಡರು. ನಂತರ ರಜತ್ ಮತ್ತು ಅಶ್ವಿನಿ ನಡುವೆ ನಡೆದ ಟಾಸ್ಕ್‌ನಲ್ಲಿ ಎಲ್ಲಾ ರೌಂಡ್‌ಗಳಲ್ಲಿ ರಜತ್ ಗೆದ್ದರು. ಕೊನೆಯಲ್ಲಿ ರಜತ್ ಅವರು ಕೆಲವು ಸದಸ್ಯರನ್ನು ಆಯ್ಕೆ ಮಾಡಿ ಫೈನಲ್ ಟಾಸ್ಕ್‌ಗೆ ಕಳುಹಿಸಿದರು.

ಫೈನಲ್ ಬಾಲ್ ಟಾಸ್ಕ್‌ನಲ್ಲಿ ಕಾವ್ಯಾ, ಸೂರಜ್, ಅಶ್ವಿನಿ, ಗಿಲ್ಲಿ ಮತ್ತು ರಶಿಕಾ ಸ್ಪರ್ಧಿಸಿದರು. ಈ ಟಾಸ್ಕ್‌ನಲ್ಲಿ ಅತ್ಯಧಿಕ ಬಾಲ್‌ಗಳನ್ನು ಸಂಗ್ರಹಿಸಿ ರಶಿಕಾ ಶೆಟ್ಟಿ ಅವರು ಗೆದ್ದು ಕ್ಯಾಪ್ಟನ್ ಆದರು. ರಶಿಕಾ ಅವರ ಈ ಗೆಲುವು ಮನೆಯಲ್ಲಿ ಹಲವರಿಗೆ ಸಂತೋಷ ತಂದರೆ, ಕೆಲವರಿಗೆ ಅಸಮಾಧಾನ ಉಂಟುಮಾಡಿದೆ.

ನಿನ್ನೆಯ ಟಾಸ್ಕ್‌ನಲ್ಲಿ ಸೂರಜ್ ಅವರು ಕೆಲವು ವಿಚಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಅದು ದೊಡ್ಡ ವಾದಕ್ಕೆ ತಿರುಗಿದೆ. ಸೂರಜ್ ಅವರು ರಶಿಕಾ ಅವರ ಮೇಲೆ ಕೂಗಾಡುತ್ತಾ, “ಮುಂಚೆ ಬಂದಾಗ ಒಂದು ರೀತಿ, ಇನ್ನೊಬ್ಬರು ಬಂದಾಗ ಮತ್ತೊಂದು ರೀತಿ ಇರೋದಲ್ಲ! ಎಲ್ಲರೂ ನೋಡ್ತಾ ಇದ್ದಾರೆ. ನಾವೇನು ಕುರುಡರಲ್ಲ” ಎಂದು ಆರೋಪ ಮಾಡಿದರು.

ರಶಿಕಾ ಅವರು ತಕ್ಷಣವೇ ತಿರುಗೇಟು ನೀಡುತ್ತಾ, “ಯಾರದು ಮುಖವಾಡ ಇದೆಯೋ ಅದು ಬಯಲಾಗಲಿ. ಕ್ಯಾಪ್ಟನ್ ಆಗಿದ್ದು ಇಷ್ಟವಿಲ್ಲವೇ? ವಿನ್ ಆದ ಮೇಲೆ ವಿಶ್ ಯಾಕೆ ಮಾಡಲಿಲ್ಲ?” ಎಂದು ಸೂರಜ್ ಅವರನ್ನು ಪ್ರಶ್ನಿಸಿದರು. ಇಬ್ಬರ ನಡುವೆ ನಡೆದ ಈ ಭಾರೀ ಮಾತಿನ ಚಕಮಕಿ ಮನೆಯ ಇತರ ಸದಸ್ಯರನ್ನು ಬೆಚ್ಚಿಬೀಳಿಸಿದೆ.

ಬಿಗ್ ಬಾಸ್ ಮನೆಯಲ್ಲಿ ಗೆಳೆತನ ಮತ್ತು ದ್ವೇಷ ಒಂದೇ ಕ್ಷಣದಲ್ಲಿ ಬದಲಾಗಬಹುದು ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. ಮೊದಲು ರಶಿಕಾ ಮತ್ತು ಸೂರಜ್ ಅವರ ನಡುವೆ ಉತ್ತಮ ಗೆಳೆತನವಿತ್ತು. ಸೂರಜ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ನಂತರ ಇಬ್ಬರೂ ಒಡನಾಡಿಗಳಾಗಿದ್ದರು.

ಕ್ಯಾಪ್ಟನ್ ಆದವರಿಗೆ ಸ್ವಂತ ಬುದ್ಧಿ ಬೇಕು ಎಂದು ಸೂರಜ್ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಆದರೆ ರಶಿಕಾ ಅವರು ತಮ್ಮ ಗೆಲುವನ್ನು ಸಂಭ್ರಮಿಸುತ್ತಾ, ಮನೆಯ ನಿಯಮಗಳನ್ನು ಕಾಪಾಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ವಾದ ಮುಂದೆ ಏನಾಗುತ್ತದೆ? ಎಂದು ಕಾದುನೋಡಬೇಕಿದೆ.

Exit mobile version