Bigg Boss ಮನೆಯಲ್ಲಿ ಗಿಲ್ಲಿ ರೋಸ್ಟ್‌ಗೆ ಅತಿಥಿಗಳಿಗೆ ಕಿರಿಕಿರಿ: ಬಿಗ್ ಬಾಸ್ ಎಚ್ಚರಿಕೆ

Untitled design 2025 11 27T114357.739

ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಈ ವಾರ ಭಾರೀ ರೋಚಕ ಘಟನೆ ನಡೆದಿದೆ. ಸೀಸನ್ 11ರ ಐದು ಮಾಜಿ ಸ್ಪರ್ಧಿಗಳು ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಚೈತ್ರಾ ಮತ್ತು ಮತ್ತೊಬ್ಬರು ಅತಿಥಿಗಳಾಗಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಈ ಬಾರಿಯ ಟಾಸ್ಕ್ ಹೆಸರು ‘ಅತಿಥಿ ದೇವೋ ಭವ’ ಎಂದು ಕರೆಯಲಾಗಿತ್ತು. ಆದರೆ ಸೀಸನ್ 12ರ ಸ್ಪರ್ಧಿಗಳು ಅತಿಥಿಗಳನ್ನು ಸತ್ಕರಿಸುವ ಬದಲು ರೋಸ್ಟ್ ಮಾಡುವಲ್ಲಿ ತೊಡಗಿದ್ದರು. ಇದರಲ್ಲಿ ಮುಂಚೂಣಿಯಲ್ಲಿದ್ದವರು ಗಿಲ್ಲಿ.

ಗಿಲ್ಲಿ ಅವರು ರೋಸ್ಟ್‌ನಲ್ಲಿ ಯಾವ ಮಿತಿಯೂ ಇಲ್ಲದೇ ದಾಳಿ ನಡೆಸಿದರು. ವಿಶೇಷವಾಗಿ ಉಗ್ರಂ ಮಂಜು ಅವರನ್ನೇ ಹೆಚ್ಚು ಟಾರ್ಗೆಟ್ ಮಾಡಿದರು. “ಗ್ರೇ ಏರಿಯಾ ಮಂಜು ಅಂತ ಬಿಲ್ಡಪ್ ಕೊಟ್ಟು ಬಂದಿದ್ದೀರಾ? ನೀವು ನೇರವಾಗಿ ಮಲೇರಿಯಾ ಮಂಜು ಥರ ಆಗಿದ್ದೀರಿ!” ಎಂದು ಗಿಲ್ಲಿ ಗುಡುಗಿದರು. ಇದನ್ನು ಕೇಳಿ ಮನೆಯ ಸ್ಪರ್ಧಿಗಳು ಕೈತಟ್ಟಿ ನಕ್ಕರು, ಆದರೆ ಅತಿಥಿಗಳ ಮುಖವೇ ಬಾಡಿಹೋಯಿತು.

ತ್ರಿವಿಕ್ರಮ್ ಅವರನ್ನು “ಟಾಸ್ಕ್ ಮಾಸ್ಟರ್ ಅಂತ ಬಂದಿದ್ದೀರಾ? ಹೆಡ್‌ಮಾಸ್ಟರ್ ಥರ ಕೂತಿದ್ದೀರಿ!” ಎಂದು ಗೇಲಿ ಮಾಡಿದರು. ರಜತ್ ಅವರನ್ನು “ದೂರದಿಂದ ಖಳನಾಯಕ ಥರ ಕಾಣ್ತೀರಿ” ಎಂದು ಹೇಳಿ ಗಿಲ್ಲಿ ತಮಾಷೆ ಮಾಡಿದರು. ಚೈತ್ರಾ ಅವರ ಬಗ್ಗೆ “ಹೇಳೋಕೆ ಉಸ್ತುವಾರಿ, ಆದರೆ ಸುಸ್ತುವಾರ ಥರ ಕೂತಿದ್ದಾರೆ” ಎಂದು ಕಿಚಾಯಿಸಿದರು. ಇದಲ್ಲದೆ “ನಮ್ಮ ಟೈಮ್‌ನಲ್ಲಿ ಸೀಸನ್ ನಂಬರ್ 1 ಇತ್ತು, ನಿಮ್ಮ ಟೈಮ್‌ನಲ್ಲಿ ಚಾನೆಲ್ ನಂಬರ್ 1 ಇದೆ” ಎಂದು ಗಿಲ್ಲಿ ಸೀಸನ್ 11ರ ರೇಟಿಂಗ್‌ಗೆ ಟಾಂಗ್ ನೀಡಿದರು.

ಅತಿಥಿಗಳು ಕ್ಯಾಪ್ಟನ್ ರೂಮ್‌ ಹಿಡಿದುಕೊಂಡಿದ್ದಕ್ಕೂ ಗಿಲ್ಲಿ ಸುಮ್ನಿರಲಿಲ್ಲ. “ಕ್ಯಾಪ್ಟನ್ಸಿ ಸರಿಯಾಗಿ ಯೂಸ್ ಮಾಡೋಕೆ ಗೊತ್ತಿಲ್ಲವಾ? ಬಿಟ್ಟುಕೊಟ್ಟಿದ್ದೀರಾ?” ಎಂದು ಪ್ರಶ್ನೆ ಮಾಡಿದರು. “ನಾವು ಸೀನಿಯರ್, ಪಂಟರು ಅಂತ ಅಡ್ಡ ಬರಬೇಡಿ. ಏಜು-ಸೈಜು ನೋಡಲ್ಲ, ಸೀಜ್ ಮಾಡ್ತೀವಿ ಹುಷಾರ್ ಸರ್!” ಎಂದು ಎಚ್ಚರಿಕೆಯೂ ನೀಡಿದರು. ಊಟದ ವಿಷಯದಲ್ಲೂ ಗಿಲ್ಲಿ ಕಿಚಾಯಿಸಿದರು, “ಒಳ್ಳೆ ಊಟ ಸಿಗುತ್ತೆ ಅಂತ ಬಂದಿದ್ದೆ, ಆದರೆ ಬಿಡಿ ಹೇಳಲ್ಲ” ಎಂದು ತಮಾಷೆಯಾಗಿ ತಪ್ಪಿಸಿಕೊಂಡರು.

ಈ ರೋಸ್ಟ್ ತಾಳಲಾರದ ಉಗ್ರಂ ಮಂಜು ಸೇರಿದಂತೆ ಅತಿಥಿಗಳು ತೀವ್ರ ಅಸಹನೆ ವ್ಯಕ್ತಪಡಿಸಿದರು. ರಜತ್ ಅವರು ಗಿಲ್ಲಿಗೆ ನೇರವಾಗಿ “ನಾವು ಇಲ್ಲಿ ಮೊದಲೇ ಬಂದು ಹೋಗಿದ್ದೇವೆ. ಅತಿಥಿಗಳಿದ್ದಾಗ ನಾವು ಇಷ್ಟು ಕಿರಿಕಿರಿ ಮಾಡಲಿಲ್ಲ. ನಿನ್ನ ಈ ಕಿರಿಕಿರಿ ಹೊರಗೆ ಗೊತ್ತಿರಲಿಲ್ಲ” ಎಂದು ತಿರುಗೇಟು ನೀಡಿದರು. ವಾತಾವರಣ ಉದ್ವಿಗ್ನವಾದಾಗ ಬಿಗ್ ಬಾಸ್ ಮಧ್ಯ ಪ್ರವೇಶಿಸಿದರು. “ರೂಲ್ಸ್ ಬುಕ್‌ನಲ್ಲಿ ಸಭ್ಯತೆಯ ಮಿತಿ ಮೀರದಂತೆ ರೋಸ್ಟ್ ಮಾಡಬೇಕು ಎಂದು ಸ್ಪಷ್ಟವಾಗಿ ಇದೆ” ಎಂದು ಎಲ್ಲರಿಗೂ ನಿಯಮ ನೆನಪಿಸಿದರು.

ತಕ್ಷಣ ಕ್ಯಾಪ್ಟನ್ ಅಭಿಷೇಕ್ ಮತ್ತು ಗಿಲ್ಲಿ ಅತಿಥಿಗಳಲ್ಲಿ ಕ್ಷಮೆ ಕೇಳಿದರು. ಆದರೂ ಈ ಘಟನೆ ಮನೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಗಿಲ್ಲಿ ಅವರ ಈ “ಅತಿಯಾದ” ರೋಸ್ಟ್ ಈ ವಾರ ಹೈಲೈಟ್ ಆಗಿದೆ. ಅತಿಥಿಗಳು ಮನೆಯಲ್ಲಿರುವ ಇನ್ನೂ ಕೆಲವು ದಿನಗಳಲ್ಲಿ ಇದರ ಪರಿಣಾಮ ಏನಾಗಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Exit mobile version