ಬೆಂಗಳೂರು, ಅಕ್ಟೋಬರ್ 10, 2025: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ನಲ್ಲಿ ಚಂದ್ರಪ್ರಭ ಅವರ ಕಾಮಿಡಿಯಿಂದ ಗುರುತಿಸಿಕೊಂಡಿದ್ದರೂ, ಈ ಬಾರಿ ಅವರ ತಾಳ್ಮೆ ಕಟ್ಟೆ ಒಡೆದ ಘಟನೆ ಎಲ್ಲರ ಗಮನ ಸೆಳೆದಿದೆ. ಶುಕ್ರವಾರದ (ಅಕ್ಟೋಬರ್ 10) ಸಂಚಿಕೆಯಲ್ಲಿ ಚಂದ್ರಪ್ರಭ ರುದ್ರಾವತಾರ ತಾಳಿದ್ದು, ಬಿಗ್ ಬಾಸ್ ಮನೆಯ ವಸ್ತುಗಳಿಗೆ ಹಾನಿ ಮಾಡಿ, ಎಲ್ಲರ ಮೇಲೆ ಕೂಗಾಡಿದ ಘಟನೆ ನಡೆದಿದೆ. ಈ ಗೊಂದಲಕ್ಕೆ ಕಾರಣವಾಗಿದ್ದು ಸಹ ಸ್ಪರ್ಧಿ ಡಾಗ್ ಸತೀಶ್.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಜಂಟಿಗಳ ಟೀಮ್‌ನ ಆಟ ನಡೆಯುತ್ತಿದೆ. ಚಂದ್ರಪ್ರಭ ಮತ್ತು ಡಾಗ್ ಸತೀಶ್ ಒಂದೇ ತಂಡದಲ್ಲಿದ್ದು, ಜಂಟಿಯಾಗಿ ಆಟವಾಡಬೇಕೆಂಬ ನಿಯಮವನ್ನು ಬಿಗ್ ಬಾಸ್ ವಿಧಿಸಿದ್ದಾರೆ. ಈ ನಿಯಮದ ಪ್ರಕಾರ, ಜಂಟಿಗಳು ಎಲ್ಲಿಯೇ ಹೋದರೂ ಒಟ್ಟಿಗೆ ಇರಬೇಕು. ಒಬ್ಬರು ಸ್ನಾನಕ್ಕೆ ತೆರಳಿದರೆ, ಇನ್ನೊಬ್ಬರು ಬಾತ್‌ರೂಮ್‌ನ ಹೊರಗೆ ಕಾಯಬೇಕು. ಈ ನಿಯಮವೇ ಚಂದ್ರಪ್ರಭ ಮತ್ತು ಸತೀಶ್ ನಡುವಿನ ಜಗಳಕ್ಕೆ ಕಾರಣವಾಗಿದೆ.
ಡಾಗ್ ಸತೀಶ್ ಅವರು ಸ್ನಾನದ ವಿಷಯದಲ್ಲಿ ತೀರಾ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಒಮ್ಮೆ ಬಾತ್‌ರೂಮ್‌ಗೆ ಸೇರಿಕೊಂಡರೆ, ಗಂಟೆಗಟ್ಟಲೆ ಹೊರಗೆ ಬರದಿರುವುದರಿಂದ ಚಂದ್ರಪ್ರಭರಿಗೆ ತಾಳ್ಮೆ ಕಳೆದುಕೊಂಡಿದೆ. ಸತೀಶ್‌ಗಾಗಿ ಗಂಟೆಗಟ್ಟಲೆ ಕಾಯುವುದರಿಂದ ಚಂದ್ರಪ್ರಭರಿಗೆ ಅಡುಗೆ ಮನೆಗೆ ಹೋಗಿ ನೀರು ಕುಡಿಯಲು ಕೂಡ ಸಾಧ್ಯವಾಗಿಲ್ಲ. ಈ ಸನ್ನಿವೇಶದಲ್ಲಿ ತಾಳ್ಮೆ ಕಳೆದುಕೊಂಡ ಚಂದ್ರಪ್ರಭ, ಆಟದ ನಿಯಮವನ್ನು ಮುರೆತು ಕೂಗಾಡಿದರು.
ನಿಯಮವನ್ನು ಉಲ್ಲಂಘಿಸಿ ಚಂದ್ರಪ್ರಭ ಅಡುಗೆ ಮನೆಗೆ ಬಂದು ನೀರು ಕುಡಿಯಲು ಮುಂದಾದಾಗ, ಒಂಟಿಗಳ ತಂಡದ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೋಪಗೊಂಡ ಚಂದ್ರಪ್ರಭ, ಕೈಯಲ್ಲಿದ್ದ ಗಾಜಿನ ಲೋಟವನ್ನು ನೆಲಕ್ಕೆ ಕುಕ್ಕಿದರು. ಗಾಜಿನ ಲೋಟ ಒಡೆದು ಚೆಲ್ಲಾಪಿಲ್ಲಿಯಾಯಿತು. ಇದು ಬಿಗ್ ಬಾಸ್ ಮನೆಯ ಪ್ರಮುಖ ನಿಯಮವಾದ ‘ಮನೆಯ ವಸ್ತುಗಳಿಗೆ ಹಾನಿ ಮಾಡಬಾರದು’ ಎಂಬ ಷರತ್ತಿನ ಉಲ್ಲಂಘನೆಯಾಗಿದೆ. ಈ ಕಾರಣಕ್ಕಾಗಿ ಚಂದ್ರಪ್ರಭರಿಗೆ ಮಾತ್ರವಲ್ಲ, ಇಡೀ ಮನೆಗೂ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಚಂದ್ರಪ್ರಭ ತಮ್ಮ ಕೋಪದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. ಮನುಷ್ಯನ ತಾಳ್ಮೆಗೆ ಒಂದು ಮಿತಿಯಿರುತ್ತದೆ. ಸತೀಶ್‌ಗಾಗಿ ನಾನು ಎಷ್ಟು ಕಾಲ ಕಾಯಲಿ? ಬಾತ್‌ರೂಮ್ ಹೊರಗೆ ಅರ್ಧ ದಿನ ಕಾಯುವುದು ಸಾಧ್ಯವೇ? ನೀರು ಕುಡಿಯಲು ಕೂಡ ಅಡುಗೆ ಮನೆಗೆ ಬರಲಾಗದ ಸ್ಥಿತಿಯಿದೆ ಎಂದು ಅವರು ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ.
