ಬಿಗ್ ಬಾಸ್ ತಾಳ್ಮೆ ಪರೀಕ್ಷೆ ಮಾಡಿದ ಜಾನ್ವಿ-ಅಶ್ವಿನಿ: ಇಷ್ಟೆಲ್ಲ ಆದರೂ ನಗ್ತಾ ಇದ್ದಾರೆ

Web (69)

ಬಿಗ್ ಬಾಸ್ ಮನೆಯಲ್ಲಿ ಈಗ ಭಾರೀ ಡ್ರಾಮಾ ನಡೆಯುತ್ತಿದೆ. ಅಶ್ವಿನಿ ಗೌಡ ಮತ್ತು ಆ್ಯಂಕರ್ ಜಾನ್ವಿ ಅವರು ಪದೇ ಪದೇ ಮೈಕ್ ನಿಯಮ ಉಲ್ಲಂಘಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ ವಾರವೇ ಕಿಚ್ಚ ಸುದೀಪ್ ಅವರು ಈ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡು ಕಟುವಾಗಿ ಎಚ್ಚರಿಕೆ ನೀಡಿದ್ದರು. ಆದರೂ ಇವರು ತಿದ್ದಿಕೊಳ್ಳದೇ ಮತ್ತೆ ಚೇಂಜಿಂಗ್ ರೂಂನಲ್ಲಿ ಮೈಕ್ ತೆಗೆದು ಪಿಸುಮಾತು ಆಡಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ  ಬಿಗ್ ಬಾಸ್ ಇವರಿಬ್ಬರನ್ನೂ ನೇರವಾಗಿ ನಾಮಿನೇಟ್ ಮಾಡಿ ಭಾರೀ ಶಾಕ್ ನೀಡಿದ್ದಾರೆ.

ಸಾಮಾನ್ಯವಾಗಿ ತಪ್ಪು ಮಾಡಿದಾಗ ನಾಚಿಕೆ, ಪಶ್ಚಾತ್ತಾಪ ಬರುತ್ತದೆ. ಆದರೆ ಅಶ್ವಿನಿ ಮತ್ತು ಜಾನ್ವಿ ಅವರ ಮುಖದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಎಲಿಮಿನೇಷನ್ ಎಪಿಸೋಡ್ ಮುಗಿದ ತಕ್ಷಣ ಚೇಂಜಿಂಗ್ ರೂಂಗೆ ಹೋಗಿ ಮೈಕ್ ತೆಗೆದು ಪಿಸುಧ್ವನಿಯಲ್ಲಿ ಮಾತನಾಡಿದ್ದಾರೆ. ಬಿಗ್ ಬಾಸ್ ತಕ್ಷಣ ಎಚ್ಚರಿಸಿ ಹೊರಗೆ ಬರಲು ಹೇಳಿದ್ದಾರೆ. ಮರುದಿನ ಎಲ್ಲರ ಮುಂದೆ ವಿಟಿ ತೋರಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೂ ಇಬ್ಬರೂ “ಹುಕ್ ತೆಗೆಯುತ್ತಿದ್ದೆವು, ಬೇಕಂತಲೇ ಮಾಡಲಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ ಬಯ್ಯುತ್ತಿದ್ದಾಗ ಕೂಡ ಇಬ್ಬರೂ ಮುಖದಲ್ಲಿ ನಗು ಮುಂದುವರಿದಿದೆ.

ಈ ಎಲ್ಲಾ ಉದ್ಧಟತನಕ್ಕೆ ಕಡಿವಾಣ ಹಾಕಲು ಬಿಗ್ ಬಾಸ್ ತೀರಾ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಅಶ್ವಿನಿ ಗೌಡ ಮತ್ತು ಜಾನ್ವಿ ಅವರನ್ನು ಈ ವಾರ ನೇರವಾಗಿ ನಾಮಿನೇಷನ್‌ಗೆ ಹಾಕಿದ್ದಾರೆ. ಇದು ಕೇವಲ ಮೈಕ್ ನಿಯಮ ಉಲ್ಲಂಘನೆಗಲ್ಲ, ನಿಯಮ ತಿರಸ್ಕಾರ ಮತ್ತು ಉದ್ಧಟ ಧೋರಣೆಗೆ ಸಿಕ್ಕ ಕಠಿಣ ಶಿಕ್ಷೆ ಎಂದೇ ಫ್ಯಾನ್ಸ್ ಅಭಿಪ್ರಾಯಪಡುತ್ತಿದ್ದಾರೆ.

ಈ ಘಟನೆಯ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಇಷ್ಟೆಲ್ಲಾ ಆದ್ರೂ ನಗ್ತಾ ಇದ್ದಾರೆ, ಇವರಿಗೆ ಸುದೀಪ್ ಸಾರ್ ಮತ್ತೊಮ್ಮೆ ದೊಡ್ಡ ಕ್ಲಾಸ್ ತೆಗೆದುಕೊಳ್ಳಬೇಕು” ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ.

Exit mobile version