ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಜನವರಿ 17 ಮತ್ತು 18ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ವಿಜೇತರು ಯಾರಾಗಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ಸದ್ಯ ಮನೆಯಲ್ಲಿ ಕಾವ್ಯಾ ಶೈವ, ಧ್ರುವಂತ್, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧನುಷ್ ಮತ್ತು ಗಿಲ್ಲಿ ನಟ ಸೇರಿದಂತೆ ಏಳು ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಫಿನಾಲೆಗೂ ಮುನ್ನ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ವಿಶೇಷ ಸೌಲಭ್ಯ ನೀಡಿದ್ದು, ಅವರ ಮನದ ಆಸೆಯನ್ನು ಈಡೇರಿಸಲು ಮುಂದಾಗಿದ್ದಾರೆ.
1. ಕಾವ್ಯಾ ಶೈವ ವಿಚಿತ್ರ ಬಯಕೆ
ಪ್ರತಿಯೊಬ್ಬ ಸ್ಪರ್ಧಿಗೂ ತಲಾ ಮೂರು ಆಸೆಗಳನ್ನು ಹೇಳಿಕೊಳ್ಳಲು ಬಿಗ್ ಬಾಸ್ ಸೂಚಿಸಿದ್ದರು. ಈ ಪೈಕಿ ಕಾವ್ಯಾ ಶೈವ ಅವರು ಇಟ್ಟ ಬೇಡಿಕೆ ಕೇಳಿ ವೀಕ್ಷಕರು ಅಚ್ಚರಿಗೊಂಡಿದ್ದಾರೆ. ಮೊದಲನೆಯದಾಗಿ, ಮನೆಯಿಂದ ಹೊರಬಿದ್ದಿರುವ ತಮ್ಮ ತಮ್ಮ (ಸ್ಪರ್ಧಿ) ಮತ್ತೆ ಮನೆಗೆ ಬರಬೇಕು. ಎರಡನೆಯದಾಗಿ, ಬಿಗ್ ಬಾಸ್ ಮನೆಯಲ್ಲಿ ಒಂದು ಸಿನಿಮಾ ನೋಡಬೇಕು. ಮೂರನೆಯದಾಗಿ, ತಾನು ‘ಕಳಪೆ’ ಪಟ್ಟ ಪಡೆದು ಜೈಲಿಗೆ ಹೋಗಬೇಕು ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಯಾರೂ ಕೂಡ ಜೈಲಿಗೆ ಹೋಗಲು ಇಷ್ಟಪಡುವುದಿಲ್ಲ. ಆದರೆ ಕಾವ್ಯಾ ಅವರು ಜೈಲಿಗೆ ಹೋಗಬೇಕೆಂದು ಬಯಸಲು ಒಂದು ಬಲವಾದ ಕಾರಣವಿದೆ. ಮನೆಯಲ್ಲಿ ಉತ್ತಮ ಸ್ಪರ್ಧಿಯಾಗಿ, ಕ್ಯಾಪ್ಟನ್ ಆಗಿ ಎಲ್ಲಾ ಅನುಭವ ಪಡೆದಿರುವ ಕಾವ್ಯಾ ಅವರಿಗೆ ಜೈಲಿನ ಅನುಭವ ಮಾತ್ರ ಸಿಕ್ಕಿಲ್ಲವಂತೆ. ಫಿನಾಲೆಗೂ ಮುನ್ನ ಆ ಅನುಭವವನ್ನೂ ಪಡೆಯಬೇಕು ಎಂಬುದು ಅವರ ಹಠ.
2. ಮ್ಯೂಟೆಂಟ್ ರಘು ಮತ್ತು ಗಿಲ್ಲಿ ನಟನ ಬೇಡಿಕೆಗಳು
ಸದಾ ಕಾಮಿಡಿಯಿಂದಲೇ ಗಮನ ಸೆಳೆಯುವ ಗಿಲ್ಲಿ ನಟ, ತಮ್ಮ ಆಹಾರ ಪ್ರೇಮವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಳ್ಳಿ ಮೂಳೆ ತಿಂದು ಮಲಗಬೇಕು ಮತ್ತು ಟಿವಿಯಲ್ಲಿ ಸಿನಿಮಾ ನೋಡಬೇಕು ಎಂದು ಅವರು ಆಸೆಪಟ್ಟಿದ್ದಾರೆ. ಇನ್ನು ಮ್ಯೂಟೆಂಟ್ ರಘು ಅವರು ತಮ್ಮ ಮಗನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ಮಗನ ಜೊತೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಆಟವಾಡಬೇಕು, ಮನೆಯವರ ಜೊತೆ ಸೇರಿ ಇಷ್ಟದ ಅಡುಗೆ ಮಾಡಿ ತಿನ್ನಬೇಕು ಹಾಗೂ ಸಿನಿಮಾ ನೋಡಬೇಕು ಎಂಬ ಆಸೆಗಳನ್ನು ವ್ಯಕ್ತಪಡಿಸಿದ್ದಾರೆ.
3. ಮಿಡ್-ವೀಕ್ ಎಲಿಮಿನೇಷನ್ ಭೀತಿ
ಫಿನಾಲೆಗೆ ಇನ್ನು ಕೇವಲ ನಾಲ್ಕೈದು ದಿನಗಳು ಬಾಕಿ ಇರುವಾಗ, ಮನೆಯಲ್ಲಿ ಮಿಡ್-ವೀಕ್ ಎಲಿಮಿನೇಷನ್ (Mid-week Elimination) ನಡೆಯಲಿದೆ. ಅಂದರೆ, ಇರುವ ಏಳು ಜನರಲ್ಲಿ ಒಬ್ಬರು ಫಿನಾಲೆ ವೇದಿಕೆ ಏರುವ ಮೊದಲೇ ಮನೆಯಿಂದ ಹೊರಬೀಳಲಿದ್ದಾರೆ. ಈ ಆತಂಕದ ನಡುವೆಯೂ ಸ್ಪರ್ಧಿಗಳು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಗಿಲ್ಲಿನಟನ ಆಸೆಯನ್ನ ಈಡೇರಿಸಿರುವ ಬಿಗ್‌ಬಾಸ್ ಮುಂದೆ ಯಾರ ಆಸೆಯನ್ನ ಈಡೇರಿಸಲಿದ್ದಾರೆ ಎಂಬುದನ್ನ ತಿಳಿಯಲು ಮೂಮದಿನ ಸಂಚಿಕೆವರೆಗೂ ಕಾದು ನೋಡಬೇಕಿದೆ.
