ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಈಗ ತನ್ನ ಅಂತಿಮ ಘಟ್ಟಕ್ಕೆ ತಲುಪಿದೆ. ಭಾನುವಾರ ನಡೆಯಲಿರುವ ಅದ್ಧೂರಿ ಫೈನಲ್‌ನಲ್ಲಿ ಈ ಬಾರಿಯ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಸದ್ಯ ಮನೆಯಲ್ಲಿ ಗಿಲ್ಲಿ, ಅಶ್ವಿನಿ, ಕಾವ್ಯಾ ಶೈವ, ರಕ್ಷಿತಾ, ಧನುಷ್ ಮತ್ತು ಮ್ಯೂಟಂಟ್ ರಘು ಫೈನಲ್ ರೇಸ್‌ನಲ್ಲಿದ್ದಾರೆ. ಹೊರಗಡೆ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಭರ್ಜರಿ ವೋಟಿಂಗ್ ಕ್ಯಾಂಪೇನ್ ನಡೆಸುತ್ತಿದ್ದಾರೆ.
ಫಿನಾಲೆ ವಾರವಾದ್ದರಿಂದ ಬಿಗ್‌ಬಾಸ್ ಸ್ಪರ್ಧಿಗಳಿಗೆ ಯಾವುದೇ ದೈಹಿಕ ಶ್ರಮದ ಟಾಸ್ಕ್‌ಗಳನ್ನು ನೀಡುತ್ತಿಲ್ಲ. ಬದಲಾಗಿ, ಸ್ಪರ್ಧಿಗಳ ನಡುವಿನ ಮನಸ್ತಾಪಗಳನ್ನು ಮರೆಸಿ, ಬಾಂಧವ್ಯ ಹೆಚ್ಚಿಸುವಂತಹ ಮಾತುಕತೆಯ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಮನೆಯಲ್ಲಿ ಈಗ ಬೆರಳೆಣಿಕೆಯಷ್ಟು ಸ್ಪರ್ಧಿಗಳಷ್ಟೇ ಬಾಕಿ ಇರುವುದರಿಂದ, ಎಲ್ಲರೂ ಒಬ್ಬರಿಗೊಬ್ಬರು ಸಮಯ ಕೊಡುತ್ತಿದ್ದಾರೆ. ಇದರ ನಡುವೆ ಕಳೆದ ಎರಡು ವಾರಗಳಿಂದ ಗಿಲ್ಲಿ ಜೊತೆ ಮಾತು ಬಿಟ್ಟಿದ್ದ ಕಾವ್ಯಾ ಶೈವ, ಈಗ ಮತ್ತೆ ಹಳೆಯ ಗೆಳೆತನಕ್ಕೆ ಮರಳಿದ್ದಾರೆ.
ಗುರುವಾರ ಮನೆಯಲ್ಲಿ ನಡೆದ ಒಂದು ಸನ್ನಿವೇಶ ಈಗ ಪ್ರೇಕ್ಷಕರಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಸೋಫಾದಲ್ಲಿ ಕುಳಿತು ಮಾತನಾಡುತ್ತಿದ್ದಾಗ ಗಿಲ್ಲಿ ಅವರು ಕಾವ್ಯಾಗೆ ಕಣ್ಣು ಹೊಡೆದಿದ್ದಾರೆ. ಇದರಿಂದ ಕೌಂಟರ್ ಕೊಟ್ಟ ಕಾವ್ಯಾ, ಅಲ್ಲೇ ಇದ್ದ ರಘು ಅವರತ್ತ ನೋಡಿ, ರಘು ಸರ್, ಒಂದು ವೇಳೆ ನನ್ನ ಮದುವೆಗೆ ಏನಾದರೂ ತೊಂದರೆಯಾದರೆ ಅದಕ್ಕೆ ಈ ಗಿಲ್ಲಿನೇ ಕಾರಣ ಎಂದು ತಮಾಷೆಯಾಗಿ ದೂರುತ್ತಾರೆ. ಈ ಮಾತು ಕೇಳುತ್ತಿದ್ದಂತೆಯೇ ಪಕ್ಕದಲ್ಲೇ ಕುಳಿತಿದ್ದ ಧನುಷ್ ಮೌನವಾಗಿ ಎದ್ದು ಹೋಗುತ್ತಾರೆ.ಇದು ವೀಕ್ಷಕರಿಗೆ ಇನ್ನಷ್ಟು ಕುತೂಹಲ ಮೂಡಿಸಿದೆ.
Kalakar Gilli 😆#BBK12 https://t.co/adhjLyXgZi pic.twitter.com/yB3xnQjJ86
— 𝓡𝓸𝓼𝓱𝓷𝓲 (@Gloomy_Psyche) January 15, 2026
ಗಿಲ್ಲಿ-ಕಾವ್ಯಾ ನಡುವಿನ ಕ್ಯೂಟ್ ಜಗಳ
ಕಾವ್ಯಾ ಮಾತಿಗೆ ಪ್ರತಿಕ್ರಿಯಿಸಿದ ಗಿಲ್ಲಿ, ನಾನೇನು ಮಾಡಿದೆ ನಿನಗೆ ? ನನ್ನಿಂದ ಯಾಕೆ ಪ್ರಾಬ್ಲಮ್ ಆಗುತ್ತೆ ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕಾವ್ಯಾ, ಕಣ್ಣು ಹೊಡಿಬೇಡ ಅಂದ್ರೂ ಹೊಡೀತೀಯ, ರೇಗಿಸ್ಬೇಡ ಅಂದ್ರೂ ರೇಗಿಸ್ತೀಯ ಎಂದು ಮುನಿಸು ತೋರಿದ್ದಾರೆ. ಆಗ ಗಿಲ್ಲಿ ಅತ್ಯಂತ ಮಾರ್ಮಿಕವಾಗಿ, ನಾನೇನಾದರೂ ಬೇಡ ಅಂದ್ರೆ ತಾನೇ ಪ್ರಾಬ್ಲಮ್ ಆಗೋದು ? ಎಂದು ಕೇಳಿದಾಗ ಕಾವ್ಯಾ ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ನಂತರ ಎಂಥಾ ಕಲಾಕಾರ್ ನೀನು ಎಂದು ಹೇಳಿ ನಕ್ಕಿದ್ದಾರೆ.
ಈ ಇಡೀ ಸಂಭಾಷಣೆಯನ್ನು ಗಮನಿಸಿದ ಬಿಗ್‌ಬಾಸ್ ಅಭಿಮಾನಿಗಳು, ಇವರಿಬ್ಬರ ನಡುವೆ ಕೇವಲ ಸ್ನೇಹವೋ ಅಥವಾ ಅದಕ್ಕಿಂತ ಮಿಗಿಲಾದದ್ದೇನಾದರೂ ಇದೆಯೇ ಎಂದು ಚರ್ಚಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾವ್ಯಾ ಅವರು ಪರೋಕ್ಷವಾಗಿ ಗಿಲ್ಲಿಗೆ ಮದುವೆಯ ಆಫರ್ ನೀಡಿದ್ದಾರೆಯೇ ಎಂಬ ಕಮೆಂಟ್‌ಗಳು ಹರಿದಾಡುತ್ತಿವೆ.
ಇನ್ನು ಈ ಬಾರಿಯ ಫೈನಲಿಸ್ಟ್‌ಗಳಲ್ಲಿ ಅಚ್ಚರಿ ಮೂಡಿಸಿರುವುದು ಮ್ಯೂಟಂಟ್ ರಘು. ಆರಂಭದಲ್ಲಿ ಪ್ರಚಾರ ಕಡಿಮೆ ಎನಿಸಿದರೂ, ರಘು ತಮ್ಮ ಸೌಮ್ಯ ಸ್ವಭಾವದಿಂದಲೇ ಫಿನಾಲೆ ವಾರ ತಲುಪಿರುವುದು ಸ್ವತಃ ಅವರಿಗೇ ನಂಬಲು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ, ಭಾನುವಾರ ಯಾರ ಮುಡಿಗೆ ಬಿಗ್‌ಬಾಸ್ ಕಿರೀಟ ಸಿಗಲಿದೆ ಎಂಬುದು ಇಡೀ ಕರ್ನಾಟಕದ ಕುತೂಹಲಕ್ಕೆ ಕಾರಣವಾಗಿದೆ.
